ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಇಷ್ಟು ಸಿಂಪಲ್ ವ್ಯಕ್ತಿನಾ? – ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಬಸ್ನ್ನು ಸ್ಥಳೀಯರೊಂದಿಗೆ ಸೇರಿ ತಳ್ಳುವಷ್ಟು !. ಸಾಮಾನ್ಯವಾಗಿ ಸಚಿವರು, ಅದರಲ್ಲೂ ಕೇಂದ್ರ ಸಚಿವರು ತಾವು ಸಾಗುವ ಮಾರ್ಗದಲ್ಲಿ ಹಾಳಾಗಿ ನಿಂತ ವಾಹನಗಳ ಬಗ್ಗೆಯೆಲ್ಲ ಗಮನ ಹರಿಸುವುದಿಲ್ಲ. ಸಚಿವರು ಹೊರಟರೆ ಅವರ ಜತೆ ಬೆಂಗಾವಲು ವಾಹನಗಳೂ ಹೋಗುತ್ತವೆ. ಪೂರ್ತಿ ರಕ್ಷಣೆಯ ಮಧ್ಯೆಯೇ ಇರುತ್ತಾರೆ. ಹೀಗಿರುವಾಗ ಅನುರಾಗ್ ಠಾಕೂರ್ ವಿಭಿನ್ನ ಎನ್ನಿಸಿದ್ದಾರೆ.
ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ನಿಮಿತ್ತ ಅನುರಾಗ್ ಠಾಕೂರ್ ಅಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆ ನಡೆಸಿದ್ದರು. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ವಾಪಸ್ ಹೋಗುತ್ತಿದ್ದರು. ಅವರೊಂದಿಗೆ ಬೆಂಗಾವಲು ವಾಹನಗಳೂ ಇದ್ದವು. ಇದೇ ವೇಳೆ ಬಿಲಾಸ್ಪುರ ಹೆದ್ದಾರಿಯಲ್ಲಿ ಬಸ್ವೊಂದು ಕೆಟ್ಟು ನಿಂತ ಪರಿಣಾಮ, ಅಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಕೂಡಲೇ ತಮ್ಮ ವಾಹನ ನಿಲ್ಲಿಸುವಂತೆ ಹೇಳಿದ ಅನುರಾಗ್ ಠಾಕೂರ್ ಕೆಳಗೆ ಇಳಿದು ಬಸ್ ಬಳಿ ಹೋಗಿದ್ದಾರೆ. ಆಗ ಅಲ್ಲೊಂದಷ್ಟು ಜನ ಸೇರಿಕೊಂಡು ಬಸ್ನ್ನು ಹಿಮ್ಮುಖವಾಗಿ ತಳ್ಳುತ್ತಿದ್ದರು. ರಸ್ತೆ ಮಧ್ಯೆ ನಿಂತ ಬಸ್ನ್ನು ಸ್ವಲ್ಪ ಹಿಂದಕ್ಕೆ, ಬದಿಗೆ ತಳ್ಳುವ ಪ್ರಯತ್ನದಲ್ಲಿ ಅವರು ತೊಡಗಿದ್ದರು. ಅಲ್ಲಿಗೆ ಹೋದ ಅನುರಾಗ್ ಠಾಕೂರ್ ತಾವೂ ಕೈಸೇರಿಸಿದ್ದಾರೆ. ಬಸ್ ತಳ್ಳಿದ್ದಾರೆ. ಕೇಂದ್ರ ಸಚಿವರೇ ಹೋಗಿ ಬಸ್ ನೂಕಿದ್ದನ್ನು ನೋಡಿ, ಬೆಂಗಾವಲು ಪಡೆ ಸಿಬ್ಬಂದಿಯೂ ಆ ಬಸ್ ತಳ್ಳಿದ್ದಾರೆ. ಅಂತಿಮವಾಗಿ ಬಸ್ ಚಲಿಸಿದೆ. ಅದರಲ್ಲಿದ್ದ ಪ್ರಯಾಣಿಕರ ಬಗ್ಗೆಯೂ ಅನುರಾಗ್ ಠಾಕೂರ್ ಅವರು ಡ್ರೈವರ್ ಬಳಿ ವಿಚಾರಿಸಿ, ಏನೂ ತೊಂದರೆಯಾಗಿಲ್ಲ ಎಂದು ಖಚಿತ ಪಡಿಸಿಕೊಳ್ಳು ಅಲ್ಲಿಂದ ತೆರಳಿದ್ದಾರೆ. ವಿಡಿಯೊ ನೆಟ್ಟಿಗರ ಮನ ಗೆದ್ದಿದೆ.
ಇದನ್ನೂ ಓದಿ: ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಎನ್‌ಜಿಒ ವರದಿ ತಿರಸ್ಕರಿಸಿದ ಭಾರತ