Site icon Vistara News

Army Assault Dog | ಉಗ್ರರ ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಸೇನಾ ಶ್ವಾನ ಜೂಮ್​ ಸಾವು

Army assault dog Zoom Dies

ಶ್ರೀನಗರ: ಕಳೆದ ಮೂರು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ತಂಗ್​​ಪಾವಾ ಎಂಬಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದಿದ್ದ ಗುಂಡಿನಚಕಮಕಿಯಲ್ಲಿ, ಉಗ್ರರ ಗುಂಡಿನಿಂದ ತೀವ್ರ ಗಾಯಗೊಂಡಿದ್ದ ಸೇನಾ ಫೈಟರ್​ ಶ್ವಾನ ಜೂಮ್​ ಇಂದು ಮಧ್ಯಾಹ್ನ ಮೃತಪಟ್ಟಿದೆ. ಅಂದು ಎರಡು ಗುಂಡು ತಗುಲಿ, ತೀವ್ರವಾಗಿ ಗಾಯಗೊಂಡಿದ್ದ ಶ್ವಾನಕ್ಕೆ ಶ್ರೀನಗರದ 54 ಅಡ್ವಾನ್ಸ್ ಫೀಲ್ಡ್ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ತಂಗ್​ಪಾವಾದಲ್ಲಿ ಭಾನುವಾರ (ಅ.9)ರಾತ್ರಿಯಿಂದಲೇ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ಪ್ರಾರಂಭ ಮಾಡಿದ್ದವು. ಅಲ್ಲಿ ಭಯೋತ್ಪಾದಕರು ಅಡಗಿದ್ದಾರೆಂಬ ಖಚಿತ ಮಾಹಿತಿ ಪಡೆದೇ ಆ ಪ್ರದೇಶವನ್ನು ಸುತ್ತುವರಿದಿದ್ದರು. ಈ ಕಾರ್ಯಾಚರಣೆಯಲ್ಲಿ ಸೇನಾ ಶ್ವಾನ ಜೂಮ್​ ಕೂಡ ಪಾಲ್ಗೊಂಡಿತ್ತು. ಅದರ ದೇಹಕ್ಕೆ ಎರಡು ಗುಂಡುಗಳು ತಗುಲಿದ್ದವು. ಹಾಗಿದ್ದಾಗ್ಯೂ ಅದು ಹೋರಾಟ ಮುಂದುವರಿಸಿತ್ತು. ಇಂದು ಜೂಮ್​ ಮೃತಪಟ್ಟಿದ್ದನ್ನು ಸೇನಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ‘ಜೂಮ್​ ಇಂದು ಮಧ್ಯಾಹ್ನ 11.45ರ ಹೊತ್ತಿಗೆ ಜೋರಾಗಿ ಏದುಸಿರು ಬಿಡುತ್ತ ಕುಸಿದುಬಿದ್ದ. 12 ಗಂಟೆವರೆಗೂ ಚಿಕಿತ್ಸೆ ನೀಡಲಾಯಿತು. ಅಂತಿಮವಾಗಿ ಮಧ್ಯಾಹ್ನ 12ಗಂಟೆಗೆ ಅದರ ಜೀವ ಹೋಯಿತು’ ಎಂದು ತಿಳಿಸಿದ್ದಾರೆ.

ಗುಂಡು ಬಿದ್ದಿದ್ದು ಹೇಗೆ?
ತಂಗ್​ಪಾವಾದ ಮನೆಯೊಂದರಲ್ಲಿ ಭಯೋತ್ಪಾದಕರು ಅಡಗಿದ್ದರು. ಆ ಮನೆಗೆ ನುಗ್ಗಿ, ಅವರ ಮೇಲೆ ದಾಳಿ ಮಾಡುವಂತೆ ಸೇನಾಧಿಕಾರಿಗಳು ಜೂಮ್​​ಗೆ ಆದೇಶಿಸಿದರು. ಆಗ ಜೂಮ್​ ಮನೆಯೊಳಕ್ಕೆ ಓಡಿತ್ತು. ಅಷ್ಟರಲ್ಲಿ ಉಗ್ರರು ಶ್ವಾನಕ್ಕೆ ಗುಂಡು ಹೊಡೆದಿದ್ದರು. ಆದರೂ ಅದು ಮುನ್ನುಗ್ಗಲು ಪ್ರಯತ್ನ ಮಾಡುತ್ತಿತ್ತು. ಅಲ್ಲಿಂದ ಶ್ವಾನವನ್ನು ಶ್ರೀನಗರಕ್ಕೆ ಕರೆತರಲಾಗಿತ್ತು. ಇದೇ ಎನ್​ಕೌಂಟರ್​ನಲ್ಲಿ ಭದ್ರತಾಪಡೆ ಸಿಬ್ಬಂದಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ಟಿಕ್‌ಟಾಕ್‌ ನಟಿಯನ್ನು ಕಾಶ್ಮೀರದಲ್ಲಿ ಹತ್ಯೆ ಮಾಡಿದ ಭಯೋತ್ಪಾದಕರು

Exit mobile version