Site icon Vistara News

ರೈಲಿನಿಂದ ಬಿದ್ದು ಗಾಯಗೊಂಡಿದ್ದ ಯೋಧ ಸಾವು; ಆರೋಪಿ ಟಿಟಿಇಗಾಗಿ ಪೊಲೀಸ್ ಶೋಧ ​

Army Jawan who Pushed By TTE Died In Bareilly

ಬರೇಲಿ: ಈಗೊಂದು ವಾರದ ಹಿಂದೆ ಉತ್ತರ ಪ್ರದೇಶದ ಬರೇಲಿ ಜಂಕ್ಷನ್​ ರೈಲ್ವೆ ಸ್ಟೇಶನ್​​ನಲ್ಲಿ, ರೈಲು ಹತ್ತಲು ಬಂದ ಸೈನಿಕನನ್ನು ಟಿಟಿಇ (ಟಿಕೆಟ್​ ಪರಿವೀಕ್ಷಕ) ಪ್ಲಾಟ್​ಫಾರ್ಮ್​​ಗೆ ನೂಕಿದ್ದ. ಇದರಿಂದಾಗಿ ಆತ ಚಲಿಸುತ್ತಿರುವ ರೈಲು ಮತ್ತು ಪ್ಲಾಟ್​ಫಾರ್ಮ್​ ಮಧ್ಯದ ಜಾಗದಲ್ಲಿ ಸಿಲುಕಿ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಲ್ಲದೆ, ಗಂಭೀರವಾಗಿ ಗಾಯಗೊಂಡಿದ್ದರು. ಒಂದುವಾರ ಜೀವನ್ಮರಣದ ಹೋರಾಟ ನಡೆಸಿದ ಆ ಯೋಧನೀಗ ಮರಣಹೊಂದಿದ್ದಾರೆ.

ಮೃತ ಯೋಧನ ಹೆಸರು ಸೋನು ಕುಮಾರ್​. ಕಳೆದ ಗುರುವಾರ ಬರೇಲಿಯಿಂದ ದೆಹಲಿಗೆ ಹೊರಟಿದ್ದ ಅವರು ಬರೇಲಿ ರೈಲ್ವೆ ಸ್ಟೇಶನ್​​ನ ಪ್ಲಾಟ್​ಫಾರ್ಮ್​​​ನಲ್ಲಿ ದಿಬ್ರುಗಢ್​-ನವ ದೆಹಲಿ ರಾಜಧಾನಿ ಎಕ್ಸ್​ಪ್ರೆಸ್​ ರೈಲು ಹತ್ತಲು ಮುಂದಾಗಿದ್ದರು. ಆಗ ರೈಲು ನಿಧಾನಕ್ಕೆ ಚಲಿಸಲು ಶುರು ಮಾಡಿತ್ತು. ಯೋಧ ಸೋನು ಕುಮಾರ್​ ಮತ್ತು ಟಿಟಿಇ ನಡುವೆ ಟಿಕೆಟ್​ ವಿಚಾರಕ್ಕೆ ಜಗಳವಾಗುತ್ತಿತ್ತು. ಕೋಪಗೊಂಡಿದ್ದ ಟಿಟಿಇ, ಸೈನಿಕನನ್ನು ತಳ್ಳಿದ್ದ. ಇದರಿಂದಾಗಿ ಸೋನು ಗಂಭೀರವಾಗಿ ಗಾಯಗೊಂಡಿದ್ದರು. ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಅಂದು ಯೋಧನನ್ನು ತಳ್ಳಿದ್ದ ಟಿಟಿಇ ಸುಪಾನ್​ ಬೋರ್​​ ನಾಪತ್ತೆಯಾಗಿದ್ದಾನೆ. ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು ಮಾಡಿದ್ದೇವೆ. ಸಿಸಿಟಿವಿ ಫೂಟೇಜ್​​ಗಳನ್ನೂ ಪರಿಶೀಲನೆ ಮಾಡಿದ್ದೇವೆ ಎಂದು ಉತ್ತರ ರೈಲ್ವೆ ವಲಯದ ಮೊರಾದಾಬಾದ್​ ವಿಭಾಗದ ಹಿರಿಯ ಫೈನಾನ್ಸ್​ ಮ್ಯಾನೇಜರ್​​ ಸುಧೀರ್ ಸಿಂಗ್​ ಹೇಳಿದ್ದಾರೆ. ‘ಘಟನೆ ನಡೆದ ದಿನ ಟಿಟಿಇಯನ್ನು ಪ್ರಯಾಣಿಕರೇ ಹಿಡಿದು ಥಳಿಸಿದ್ದಾರೆ. ಅದಾದ ಮೇಲೆ ಆತ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಆತನ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದು ರೈಲ್ವೆ ಪೊಲೀಸ್ ಅಧಿಕಾರಿ ಅಜಿತ್​ ಪ್ರತಾಪ್​ ಸಿಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ: ರೈಲು ಹತ್ತಲು ಬಂದ ಸೈನಿಕನನ್ನು ತಳ್ಳಿದ ಟಿಟಿಇ; ಎರಡೂ ಕಾಲು ಕಳೆದುಕೊಂಡು, ಜೀವನ್ಮರಣ ಹೋರಾಟ ನಡೆಸುತ್ತಿರುವ ಯೋಧ

Exit mobile version