Site icon Vistara News

ಪ್ರವಾದಿ ಅವಹೇಳನ| ಹಳೆ ಟ್ವೀಟ್‌ ವೈರಲ್‌ ಆದ ಬೆನ್ನಿಗೇ ಹರಿಯಾಣದ ಬಿಜೆಪಿ ಐಟಿ ಸೆಲ್‌ ಉಸ್ತುವಾರಿ ಅಮಾನತು

ಹರಿಯಾಣ: ಹರಿಯಾಣ ರಾಜ್ಯದ ಬಿಜೆಪಿ ಐಟಿ ಸೆಲ್‌ ಉಸ್ತುವಾರಿ ಅರುಣ್‌ ಕುಮಾರ್‌ ಅವರ ಹಳೆಯ ಟ್ವೀಟ್‌ ಒಂದು ಮತ್ತೆ ವೈರಲ್‌ ಆಗಿದ್ದು, ಇದೀಗ ಅವರ ಸ್ಥಾನಕ್ಕೇ ಕುತ್ತು ತಂದಿದೆ. ಪಕ್ಷವು ಅವರನ್ನು ಐಟಿ ಸೆಲ್‌ ಉಸ್ತುವಾರಿ ಹುದ್ದೆಯಿಂದ ಅಮಾನತು ಮಾಡಿದೆ.

ಅರುಣ್‌ ಯಾದವ್‌ ಅವರು 2017ರಲ್ಲಿ ಪ್ರವಾದಿ ಮೊಹಮ್ಮದರನ್ನು ಅಪಮಾನಿಸುವಂಥ ಒಂದು ಟ್ವೀಟ್‌ ಮಾಡಿದ್ದರು. ಅದು ಈಗ ಮತ್ತೆ ವೈರಲ್‌ ಆಗಿ ಸದ್ದು ಮಾಡುತ್ತಿದೆ. ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಅವರನ್ನು ಒಂದು ಸಾಮಾನ್ಯ ಟ್ವೀಟ್‌ಗಾಗಿ ಬಂಧಿಸುತ್ತಾರೆ ಎಂದಾದರೆ ಅರುಣ್‌ ಯಾದವ್‌ ಅವರನ್ನು ಯಾಕೆ ಬಿಡುತ್ತೀರಿ ಎಂದು ಟ್ವಿಟರ್‌ನಲ್ಲಿ ಅನೇಕರು ಪ್ರಶ್ನಿಸಿದ್ದಾರೆ. ಜತೆಗೆ ಟ್ವಿಟರ್‌ನಲ್ಲಿ #ArrestArunYadav ಎಂಬ ಅಭಿಯಾನ ಕೂಡ ನಡೆದಿದೆ. ಇದರ ಬೆನ್ನಿಗೇ ಬಿಜೆಪಿ ಅರುಣ್‌ ಯಾದವ್‌ ಅವರನ್ನು ಈ ಹುದ್ದೆಯಿಂದ ಅಮಾನತು ಮಾಡಿದೆ.

ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ 2018ರಲ್ಲಿ ಮಾಡಿದ ಟ್ವೀಟ್‌ ವಿರುದ್ಧ ಇತ್ತೀಚೆಗೆ ಪೊಲೀಸರು ಕ್ರಮ ಕೈಗೊಂಡಿದ್ದರು. ಆ ಒಂದು ಟ್ವೀಟ್‌ ಕೋಮು ಗಲಭೆಗೆ ಪ್ರಚೋದನಾಕಾರಿಯಾಗಿತ್ತು ಎಂಬ ಆಧಾರದ ಮೇಲೆ ಜುಬೇರ್‌ ಅವರನ್ನು ಬಂಧಿಸಲಾಗಿತ್ತು. ಎಂದೋ ಮಾಡಿದ ಟ್ವೀಟ್‌ನ ಅಧಾರದ ಮೇಲೆ ಜುಬೇರ್‌ ಅವರನ್ನು ಬಂಧಿಸಬಹುದಾದರೆ, ಅರುಣ್‌ ಯಾದವ್‌ ಅವರನ್ನು ಕೂಡ ಬಂಧಿಸಬೇಕು ಎಂದು ನೆಟ್ಟಿಗರು ವಾದ ಮಾಡಿದ್ದಾರೆ.

ಅರುಣ್‌ ಯಾದವ್‌ ಮಾಡಿದ ಟ್ವೀಟ್‌ ಕೂಡ ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥದ್ದು, ಈ ಕಾರಣಕ್ಕೆ ಅವರನ್ನು ಬಂಧಿಸಬೇಕೆಂದು ಅನೇಕರು ಒತ್ತಾಯಿಸಿದರು. ‌ದೆಹಲಿ ಹಾಗೂ ಹರಿಯಾಣ ಪೊಲೀಸ್‌ ಅವರ ಟ್ವಿಟರ್‌ ಖಾತೆಯನ್ನು ಟ್ಯಾಗ್‌ ಮಾಡಿ ಸುಮಾರು 85,000ಕ್ಕೂ ಅಧಿಕ ಟ್ವೀಟ್ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಕೂಡಲೇ ಕ್ರಮ ಕೈಗೊಂಡು ಅರುಣ್‌ ಯಾದವ್‌ ಅವರನ್ನು ಅಮಾನತು ಮಾಡಿದ್ದಾರೆ.

ಇದನ್ನೂ ಓದಿ: ಟ್ವೀಟ್‌ ಮೂಲಕ ಕೋಮು ಕಿಡಿ ಎಬ್ಬಿಸುತ್ತಿದ್ದ ಜುಬೇರ್‌‌, ಪೊಲೀಸ್‌ ವಿಚಾರಣೆ ತೀವ್ರ

Exit mobile version