ಪ್ರಧಾನಿ ನರೇಂದ್ರ ಮೋದಿಯವರ ಶಿಕ್ಷಣ ಅರ್ಹತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅವರ ಪದವಿ ಪ್ರಮಾಣ ಪತ್ರ ಒದಗಿಸುವಂತೆ ಆರ್ಟಿಐ ಕಾಯ್ದೆಯಡಿ ಕೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ನಿನ್ನೆಯಷ್ಟೇ (ಮಾ.31) ಗುಜರಾತ್ ಹೈಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ಪ್ರಧಾನಿ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳನ್ನು ಯಾರಿಗೂ ಒದಗಿಸುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ತೀರ್ಪು ನೀಡಿದೆ. ಅಷ್ಟಾದ ಮೇಲೆ ಕೂಡ ಅರವಿಂದ್ ಕೇಜ್ರಿವಾಲ್ ಇಂದು ಮತ್ತೆ ಇದೇ ವಿಚಾರವನ್ನು ಮಾತನಾಡಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿಯವರ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಹೈಕೋರ್ಟ್ನ ತೀರ್ಪು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಶಿಕ್ಷಿತ ಅಥವಾ ಅತ್ಯಂತ ಕಡಿಮೆ ಶಿಕ್ಷಣ ಪಡೆದ ಪ್ರಧಾನಿ ದೇಶಕ್ಕೆ ಅಪಾಯಕಾರಿ’ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣಪತ್ರವನ್ನು ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2016ರಲ್ಲಿ ಆರ್ಟಿಐ ಕಾಯ್ದೆಯಡಿ ಕೇಳಿದ್ದರು. ಅರವಿಂದ್ ಕೇಜ್ರಿವಾಲ್ ಕೇಳಿದ ದಾಖಲೆಯನ್ನು ನೀಡುವಂತೆ ಮುಖ್ಯ ಮಾಹಿತಿ ಆಯುಕ್ತರು (CIC) ಗುಜರಾತ್ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದರು. ಸಿಐಸಿಯ ಈ ನಿರ್ದೇಶನದ ವಿರುದ್ಧ ಗುಜರಾತ್ ಯೂನಿವರ್ಸಿಟಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತನ್ನ ತೀರ್ಪನ್ನು ಫೆಬ್ರವರಿ 10ರಂದು ಕಾಯ್ದಿರಿಸಿತ್ತು. ಅದರ ತೀರ್ಪನ್ನು ಮಾರ್ಚ್ 31ರಂದು ಹೊರಹಾಕಿದೆ.
ಇನ್ನು ಗುಜರಾತ್ ಯೂನಿವರ್ಸಿಟಿ ಪರ ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಯಾವುದೇ ಸಾರ್ವಜನಿಕ ಆಡಳಿತ ಹುದ್ದೆಯಲ್ಲಿರುವ ಯಾರೇ ಆಗಿರಲಿ, ಅವರ ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧವಿಲ್ಲದೆ ಇರುವ, ಇನ್ನೊಬ್ಬರ ವೈಯಕ್ತಿಕ ವಿಷಯಗಳನ್ನೆಲ್ಲ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳುವಂತಿಲ್ಲ. ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿಯವರ ಪದವಿ ಬಗ್ಗೆ ಸಾರ್ವಜನಿಕ ಡೊಮೇನ್ನಲ್ಲಿ ಮಾಹಿತಿ ನೀಡಲಾಗಿದೆ. ಗುಜರಾತ್ ವಿಶ್ವವಿದ್ಯಾಲಯವೂ ಕೂಡ ಈ ಹಿಂದೆ ತನ್ನ ವೆಬ್ಸೈಟ್ನಲ್ಲಿ ಈ ಬಗ್ಗೆ ವಿವರವನ್ನು ನೀಡಿತ್ತು ಎಂದು ವಾದಿಸಿದ್ದರು. ಇನ್ನೊಂದೆಡೆ ಅರವಿಂದ್ ಕೇಜ್ರಿವಾಲ್ ಪರ ವಕೀಲರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಬೇಕು. ಪ್ರಧಾನಿ ಮೋದಿಯವರ ಪದವಿ ಬಗೆಗಿನ ಮಾಹಿತಿ ಯಾವುದೇ ಸಾರ್ವಜನಿಕ ಡೊಮೇನ್ನಲ್ಲಿ ಸಿಗುತ್ತಿಲ್ಲ ಎಂದು ಪ್ರತಿವಾದಿಸಿದ್ದರು.
ಇದನ್ನೂ ಓದಿ: Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ 25 ಸಾವಿರ ರೂ. ದಂಡ!
ಹೀಗೆ ಎರಡೂ ಕಡೆಯ ವಾದ-ಪ್ರತಿವಾದಗಳನ್ನೂ ಆಲಿಸಿದ್ದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಬಿರೆನ್ ವೈಷ್ಣವ್ ಅವರು ಮಾರ್ಚ್ 31 ರಂದು ತೀರ್ಪು ನೀಡಿ ‘ಪ್ರಧಾನಿ ನರೇಂದ್ರ ಮೋದಿಯವರ ಶಿಕ್ಷಣದ ವಿವರಗಳನ್ನೆಲ್ಲ ಯೂನಿವರ್ಸಿಟಿ ಸಾರ್ವಜನಿಕ ಡೊಮೇನ್ನಲ್ಲಿ ಹಾಕಿತ್ತು. ಅಷ್ಟಾದರೂ ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದು ಅರವಿಂದ್ ಕೇಜ್ರಿವಾಲ್ ಅವರ ಪ್ರಾಮಾಣಿಕತೆಯನ್ನು ನಾವು ಅನುಮಾನಿಸುವಂತೆ ಮಾಡುತ್ತಿದೆ. ಪದವಿ ಪ್ರಮಾಣಪತ್ರವನ್ನು ಯಾವ ಕಾರಣಕ್ಕಾಗಿ ಕೇಳುತ್ತಿರಬಹುದು ಎಂಬ ಸಂಶಯ ಹುಟ್ಟಿಸುತ್ತದೆ’ ಎಂದಿದ್ದರು. ಹಾಗೇ, 25 ಸಾವಿರ ರೂಪಾಯಿ ದಂಡವನ್ನು ನಾಲ್ಕು ವಾರಗಳಲ್ಲಿ ಡಿಪಾಸಿಟ್ ಮಾಡುವಂತೆ ಹೇಳಿದ್ದರು. ಈಗ ಅರವಿಂದ್ ಕೇಜ್ರಿವಾಲ್ ಅವರು ಹೈಕೋರ್ಟ್ ತೀರ್ಪನ್ನೇ ಅನುಮಾನಿಸಿದ್ದಾರೆ.