Site icon Vistara News

Dalit Boy Death | ರಾಜಸ್ಥಾನ ಸರ್ಕಾರದ ವಿರುದ್ಧ ಕಾಂಗ್ರೆಸಿಗರ ಬೇಸರ; ಶಾಸಕ, ಕೌನ್ಸಿಲರ್​​ಗಳ ರಾಜೀನಾಮೆ

Ashok Gehlot and Sachin Pilot

ಜೈಪುರ: ರಾಜಸ್ಥಾನದಲ್ಲಿ 9 ವರ್ಷದ ದಲಿತ ಹುಡುಗ (Dalit Boy Death) ಇಂದ್ರಾ ಮೇಘ್ವಾಲ್​ ಮೃತಪಟ್ಟ ಬೆನ್ನಲ್ಲೇ ರಾಜ್ಯದ ಕಾಂಗ್ರೆಸ್​ ನಾಯಕರು, ಶಾಸಕರು, ಕೌನ್ಸಿಲರ್​ಗಳೆಲ್ಲ ತಮ್ಮದೇ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಹುಡುಗ ಶಾಲೆಯಲ್ಲಿ, ಮೇಲ್ಜಾತಿಯವರಿಗಾಗಿ ಕುಡಿಯುವ ನೀರು ಇಟ್ಟಿದ್ದ ಮಣ್ಣಿನ ಮಡಕೆ ಮುಟ್ಟಿದ ಎಂಬ ಕಾರಣಕ್ಕೆ ಅವನಿಗೆ ಶಿಕ್ಷಕ ಥಳಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕಿಳಿಸಿಕೊಳ್ಳಲಾಗಿಲ್ಲ ಎಂಬುದು ಅವನ ಪಾಲಕರ ಆರೋಪ. ಹಾಗೆ, ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದು, ‘ಹುಡುಗ ನೀರಿನ ಮಡಕೆ ಮುಟ್ಟಿದ ಎಂಬ ಕಾರಣಕ್ಕೆ ಶಿಕ್ಷಕ ಥಳಿಸಿದ್ದಾರೆ ಎಂದು ಹೇಳಲಾಗದು, ಯಾಕೆಂದರೆ ಈ ಶಾಲೆಯ ಬಹುತೇಕ ಎಲ್ಲರೂ ದಲಿತ ಸಮುದಾಯದವರೇ ಆಗಿದ್ದಾರೆ. ಇಡೀ ಶಾಲೆ ಶಿಕ್ಷಕರು-ಮಕ್ಕಳಿಗಾಗಿ ದೊಡ್ಡ ನೀರಿನ ಟ್ಯಾಂಕ್​ ಇದೆ’ ಎಂದು ತಿಳಿಸಿದ್ದಾರೆ.

ಆದರೆ ದಲಿತ ಬಾಲಕನ ಸಾವು ರಾಜಸ್ಥಾನದ ಕಾಂಗ್ರೆಸ್ ಸರ್ಕಾರಕ್ಕೆ ಭಾರವಾಗುವ ಲಕ್ಷಣ ಕಾಣಿಸುತ್ತಿದೆ. ರಾಜಸ್ಥಾನ ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಚಿನ್​ ಪೈಲಟ್​ ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ‘ರಾಜ್ಯದಲ್ಲಿರುವ ಇಂಥ ಕೆಟ್ಟ ವಾತಾವರಣವನ್ನು ಸರ್ಕಾರ ತೊಡೆದುಹಾಕಬೇಕು ಮತ್ತು ಮೃತ ಬಾಲಕನ ಕುಟುಂಬದವರ ಮೇಲೆ ಲಾಠಿಚಾರ್ಜ್​ ಮಾಡಿದ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಬೇಕು. ತಮ್ಮ ಮೇಲೆ ದೌರ್ಜನ್ಯ ಎಸಗಿದವರನ್ನು ಈ ಸರ್ಕಾರ ಹಾಗೇ ಬಿಟ್ಟುಬಿಡುವುದಿಲ್ಲ ಎಂಬ ನಂಬಿಕೆ ದಲಿತರಿಗೆ ಹುಟ್ಟುವಂತೆ ಮಾಡಬೇಕು. ಸ್ವಾತಂತ್ರ್ಯ ಬಂದು 75ವರ್ಷಗಳಾದರೂ ಇನ್ನೂ ಹೀಗೆಲ್ಲ ಆಗುತ್ತದೆ ಎಂದರೆ, ಅದು ನಾಚಿಕೆಗೇಡು‘ ಎಂದು ಹೇಳಿದ್ದಾರೆ.

ಶಾಸಕ, ಕೌನ್ಸಿಲರ್​​ಗಳ ರಾಜೀನಾಮೆ
ಮೇಘ್ವಾಲ್​ ಸಮುದಾಯದ 9ವರ್ಷದ ಬಾಲಕ ಮೃತಪಟ್ಟ ಬೆನ್ನಲ್ಲೇ ಕಾಂಗ್ರೆಸ್​ ಶಾಸಕ ಪಾನಾ ಚಾಂದ್​ ಮೇಘ್ವಾಲ್​ ತಮ್ಮ ರಾಜೀನಾಮೆ ಪತ್ರವನ್ನು ಅಶೋಕ್​ ಗೆಹ್ಲೋಟ್​ಗೆ ಕಳಿಸಿದ್ದಾರೆ. ‘ನಾನೊಬ್ಬ ಜನಪ್ರತಿನಿಧಿಯಾಗಿ, ನನ್ನದೇ ಸಮುದಾಯದ ಜನರ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಅಂದಮೇಲೆ, ಈ ಸ್ಥಾನದಲ್ಲಿದ್ದು ಪ್ರಯೋಜನವಿಲ್ಲ’ ಎಂದು ಹೇಳಿದ್ದಾರೆ. ಪಾನಾ ಚಾಂದ್​​ಗೆ ಬೆಂಬಲ ನೀಡಿ ಬರಾನ್ ಮುನ್ಸಿಪಲ್ ಕೌನ್ಸಿಲ್​​​ನ 12 ಕಾಂಗ್ರೆಸ್​ ಕೌನ್ಸಿಲರ್​​ಗಳೂ ಕೂಡ ರಾಜೀನಾಮೆ ಕೊಟ್ಟಿದ್ದಾರೆ. ಇವರೆಲ್ಲ ದಲಿತ ಸಮುದಾಯಕ್ಕೆ ಸೇರಿದವರು. ಇನ್ನೂ ಹಲವು ಜನಪ್ರತಿನಿಧಿಗಳು ಈ ಕೃತ್ಯವನ್ನು ಬಲವಾಗಿ ಖಂಡಿಸಿದ್ದಾರೆ.

ಮೃತ ಬಾಲಕನ ಕುಟುಂಬಕ್ಕೆ ಪರಿಹಾರ
ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರೂ ದಲಿತ ಬಾಲಕನ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದು, ಕ್ರಮದ ಭರವಸೆ ನೀಡಿದ್ದಾರೆ. ಹಾಗೇ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಹಾಗೇ, ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ ಮೃತ ಬಾಲಕನ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ್ದಾರೆ ಮತ್ತು ಪಕ್ಷದ ನಿಧಿಯಂದ 20 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಈ ವೇಳೆ ಕೆಲವು ಸಚಿವರೂ ಇದ್ದರು.

ಇದನ್ನೂ ಓದಿ:Rajasthan Dalit Child Death | ಶಿಕ್ಷಕ ಥಳಿಸಿದ್ದು ನೀರಿನ ಮಡಕೆ ಮುಟ್ಟಿದ್ದಕ್ಕಲ್ಲ ಎಂದ ಪೊಲೀಸರು

Exit mobile version