ಪ್ರಯಾಗ್ರಾಜ್: ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯೆ ಕೇಸ್ನಲ್ಲಿ ಜೈಲುಪಾಲಾಗಿ, ಅವರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಅಪಹರಣ ಕೇಸ್ನಲ್ಲಿ ಕೂಡ ಆರೋಪ ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ರಾಜಕಾರಣಿ-ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ (Atiq Ahmed)ಗೆ ಇವತ್ತು ಬಿಗ್ ಶಾಕ್ ಎದುರಾಗಿದೆ. ಆತನ ಮಗ ಅಸಾದ್ ಅಹ್ಮದ್ನನ್ನು ಯುಪಿ ಪೊಲೀಸರು ಎನ್ಕೌಂಟರ್ನಲ್ಲಿ ಕೊಂದಿದ್ದಾರೆ. ಅತೀಕ್ ಅಹ್ಮದ್ ಎನ್ಕೌಂಟರ್ ಆಗಬಹುದು ಎಂಬ ಅನುಮಾನ ಬಲವಾಗಿತ್ತು. ಆತನೇ ಸ್ವತಃ ಅದನ್ನು ಹೇಳಿಕೊಂಡಿದ್ದ. ಆದರೆ ಅಚ್ಚರಿಯೆಂಬಂತೆ ಅವನ ಮಗನನ್ನು ಉತ್ತರ ಪ್ರದೇಶ ಪೊಲೀಸರು ಕೊಂದಿದ್ದಾರೆ. ಉಮೇಶ್ ಪಾಲ್ ಹತ್ಯೆ ಕೇಸ್ನಲ್ಲಿ ಈ ಅಸಾದ್ ಅಹ್ಮದ್ ಹೆಸರು ಕೇಳಿಬಂದಿತ್ತು.
ಕಳೆದ ಒಂದೂವರೆ ತಿಂಗಳಿಂದಲೂ ತಲೆಮರೆಸಿಕೊಂಡಿದ್ದ ಅಸಾದ್ ಅಹ್ಮದ್ ಇಂದು ಹೀಗೆ ಏಕಾಏಕಿ ಅಡಗಿದ್ದ ಜಾಗದಿಂದ ಹೊರಬಂದು, ಪೊಲೀಸರ ಗುಂಡೇಟಿಗೆ ಬಲಿಯಾಗಲು ಕಾರಣ ಅವನ ಅವಸರ ಎಂದೇ ಹೇಳಲಾಗಿದೆ. ಉಮೇಶ್ ಪಾಲ್ ಹತ್ಯೆಯ ಯೋಜನೆಯನ್ನು ಅತೀಕ್ ಅಹ್ಮದ್ ಜೈಲಲ್ಲಿ ಕುಳಿತೇ ಅತ್ಯಂತ ನಾಜೂಕಾಗಿ ಹೆಣೆದಿದ್ದ. ಶೂಟರ್ಗಳ ಜವಾಬ್ದಾರಿಯನ್ನು ಹೊತ್ತಿದ್ದ ಅಸಾದ್ ಮತ್ತು ಆರೋಪಿಗಳ ರಕ್ಷಣೆಗಳೂ ಪ್ಲ್ಯಾನ್ ರೂಪಿಸಿದ್ದ. ಆದರೆ ಅತೀಕ್ ಮಾಡಿದ್ದ ವ್ಯವಸ್ಥಿತ ಯೋಜನೆಯನ್ನು ಯಥಾವತ್ತು ಪಾಲಿಸುವಲ್ಲಿ ಅಸಾದ್ ಅಹ್ಮದ್ ವಿಫಲನಾಗಿದ್ದೇ ಅವನ ಜೀವ ಹೋಗಲು ಕಾರಣವಾಯಿತು ಎಂದೇ ವಿಶ್ಲೇಷಿಸಲಾಗಿದೆ. ಅವಸರಕ್ಕೆ ಬಿದ್ದು, ತಪ್ಪುತಪ್ಪು ನಿರ್ಧಾರ ತೆಗೆದುಕೊಂಡಿದ್ದರಿಂದಲೇ ಅಸಾದ್ ಅಹ್ಮದ್ ಅಪ್ಪ ಕಟ್ಟಿದ್ದ ಗೂಡಿನಿಂದ ಹೊರಬಂದು, ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Asad Encounter: ಮಗ ಎನ್ಕೌಂಟರ್ ಆದ ಸುದ್ದಿ ಕೇಳಿ ಕೋರ್ಟ್ನಲ್ಲಿಯೇ ದೊಡ್ಡದಾಗಿ ಅಳಲು ಶುರುಮಾಡಿದ ಅತೀಕ್ ಅಹ್ಮದ್
ಇನ್ನೂ 23 ವರ್ಷದ ಅಸಾದ್ ಅಹ್ಮದ್ ಮೇಲೆ ಬೇರೆ ಯಾವುದೇ ಕ್ರಿಮಿನಲ್ ಕೇಸ್ಗಳೂ ಇಲ್ಲ. ಆದರೆ ಫೆಬ್ರವರಿಯಲ್ಲಿ ಉಮೇಶ್ ಪಾಲ್ ಹತ್ಯೆ ಮಾಡುವಾಗ ಶೂಟರ್ಗಳ ಮೇಲುಸ್ತುವಾರಿ ವಹಿಸಿಕೊಂಡಿದ್ದ. ಕೊಲೆಯನ್ನು ಹೇಗೆ ಮಾಡಬೇಕು? ಎಲ್ಲಿ ಮಾಡಬೇಕು? ಎಂದು ಯೋಜನೆ ರೂಪಿಸಿದ್ದೂ ಅವನಲ್ಲ. ಆದರೆ ಶೂಟರ್ಗಳಿಗೆ ಆದೇಶ ಕೊಟ್ಟಿದ್ದ. ತನ್ನಪ್ಪನ ಯೋಜನೆಯನ್ನು ಯಥಾಸ್ಥಿತಿಯಲ್ಲಿ ಅನುಷ್ಠಾನಗೊಳಿಸಿದ್ದ. ಆದರೆ ಅಷ್ಟಾದ ಮೇಲೆ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಸೋತಿದ್ದಾನೆ. ಮೊದಲನೇದಾಗಿ ಉಮೇಶ್ ಪಾಲ್ ಹತ್ಯೆಯ ಬಳಿಕ ನೀನು ಯಾವ ಕಾರಣಕ್ಕೂ ಕಾರಿನಿಂದ ಇಳಿಯಬಾರದು ಎಂಬ ಸೂಚನೆಯನ್ನು ಅವನ ಅಪ್ಪ ಅತೀಕ್ ಕೊಟ್ಟಿದ್ದ. ಆದರೆ ಆ ಆದೇಶವನ್ನೇ ಅವನು ಉಲ್ಲಂಘಿಸಿದ್ದ. ಹೀಗಾಗಿ ಸಿಸಿಟಿವಿ ಫೂಟೇಜ್ನಲ್ಲಿ ಅವನ ಮುಖ ಕಾಣಿಸಿಕೊಂಡಿತ್ತು. ಅದೇ ಕಾರಣಕ್ಕೆ ಅವನು ಉಮೇಶ್ ಪಾಲ್ ಹತ್ಯೆ ಕೇಸ್ನಲ್ಲಿ ಮೋಸ್ಟ್ ವಾಂಟೆಡ್ ಪಟ್ಟಿ ಸೇರಿಕೊಂಡಿದ್ದ. ಅವನನ್ನು ಹುಡುಕಿಕೊಟ್ಟವರಿಗೆ 5 ಲಕ್ಷ ರೂ.ಬಹುಮಾನವನ್ನೂ ಘೋಷಿಸಲಾಗಿತ್ತು. ಅಂದಹಾಗೇ, ಈ ಅಸಆದ್ ಅಹ್ಮದ್, ಅತೀಕ್ನ ಮೂರನೇ ಪುತ್ರನಾಗಿದ್ದಾನೆ.