ಲಖನೌ: ಎನ್ಕೌಂಟರ್ನಲ್ಲಿ ಹತ್ಯೆಯಾದ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ನ ಮಗ ಅಸಾದ್ ಅಹ್ಮದ್(Asad Ahmed)ನನ್ನು ಪ್ರಯಾಗ್ರಾಜ್ನ ಕಸರಿ ಮಸಾರಿ ಸ್ಮಶಾನದಲ್ಲಿ ಇಂದು ದಫನ್ ಮಾಡಲಾಯಿತು. ಮಗ ಅಸಾದ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜೈಲಲ್ಲಿರುವ ಅತೀಕ್ಗೆ ಅನುಮತಿ ಸಿಗಲಿಲ್ಲ. ಇವನ ತಾಯಿ ಶೈಷ್ಟಾ ಕೂಡ ಉಮೇಶ್ ಪಾಲ್ ಹತ್ಯೆ ಕೇಸ್ನಲ್ಲಿ ಆರೋಪಿಯಾಗಿ ನಾಪತ್ತೆಯಾಗಿದ್ದಾಳೆ. ಉಮೇಶ್ ಪಾಲ್ ಹತ್ಯೆ ಕೇಸ್ನಲ್ಲಿಯೇ ಪೊಲೀಸರಿಗೆ ಬೇಕಾದವನಾಗಿದ್ದ ಅಸಾದ್ ಅಹ್ಮದ್ ಮತ್ತು ಗುಲಾಮ್ ಎಂಬುವನನ್ನು ಮಾರ್ಚ್ 13ರಂದು ಉತ್ತರ ಪ್ರದೇಶದ ಝಾನ್ಸಿ ಬಳಿ ಉತ್ತರ ಪ್ರದೇಶ ಪೊಲೀಸ್ ಸ್ಪೆಶಲ್ ಟಾಸ್ಕ್ ಫೋರ್ಸ್ ಸಿಬ್ಬಂದಿ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದರು. ಇವರಿಬ್ಬರಿಗೂ ತಲಾ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ಜೀವಂತವಾಗಿಯೇ ಹಿಡಿಯಲು ಪ್ರಯತ್ನ ಮಾಡಲಾಯಿತಾದರೂ, ಇವರಿಬ್ಬರೂ ಪೊಲೀಸರ ಮೇಲೆ ಆಕ್ರಮಣಕಾರಿಯಾಗಿ ಮುಗಿಬಿದ್ದರು. ಹೀಗಾಗಿ ಪೊಲೀಸರು ಗುಂಡು ಹಾರಿಸಬೇಕಾಯಿತು ಎಂದು ಹೇಳಲಾಗಿದೆ.
ಇಂದು ಅಸಾದ್ ಅಹ್ಮದ್ನನ್ನು ಹೂಳುವಾಗ ಆತನ ಸಹೋದರಿ ಶಹೀನ್ ಬೇಗಂ ಮತ್ತು ಇತರ ಕೆಲವರು ಇದ್ದರು. ಪೊಲೀಸ್ ಬಿಗಿ ಭದ್ರತೆ ಇತ್ತು. ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು. ಅವನ ಅಜ್ಜ ಅಂದರೆ ಅತೀಕ್ ಅಹ್ಮದ್ನ ತಂದೆ ಫಿರೋಜ್ ಅಹ್ಮದ್ರನ್ನು ದಫನ್ ಮಾಡಲಾದ ಸಮಾಧಿ ಪಕ್ಕವೇ ಈಗ ಅಸಾದ್ ಅಹ್ಮದ್ನನ್ನು ಹೂಳಲಾಗಿದೆ. ಅಸಾದ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅತೀಕ್ಗೆ ಅನುಮತಿ ಕೊಡಿಸಬೇಕು ಎಂದು ಅವರ ಪರ ವಕೀಲರು ತುಂಬ ಪ್ರಯತ್ನವನ್ನೂ ಪಟ್ಟರು. ಅದು ಸಾಧ್ಯವಾಗಲಿಲ್ಲ. ಅತೀಕ್ ಅನುಪಸ್ಥಿತಿಯಲ್ಲಿಯೇ ಅಂತ್ಯಕ್ರಿಯೆ ನಡೆದು ಹೋಯಿತು. ಹಾಗೇ, ಅಸಾದ್ನೊಂದಿಗೆ ಪೊಲೀಸರ ಗುಂಡೇಟಿಗೆ ಬಲಿಯಾದ ಗುಲಾಂ ಹಸನ್ ಅಂತ್ಯಕ್ರಿಯೆಯೂ ಕೆಲವೇ ಹೊತ್ತಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
2005ರಲ್ಲಿ ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಹತ್ಯೆಯಾಗಿತ್ತು. ಈ ಕೇಸ್ನ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ರನ್ನು ಇದೇ ವರ್ಷ ಫೆಬ್ರವರಿಯಲ್ಲಿ ಕೊಲ್ಲಲಾಗಿದೆ. ಈ ಹತ್ಯೆಯ ಪ್ರಮುಖ ರೂವಾರಿ ಇದೇ ಅತೀಕ್ ಅಹ್ಮದ್. ತಾನು ಜೈಲಲ್ಲಿ ಇದ್ದುಕೊಂಡೇ ಸಂಚು ಮಾಡಿದ್ದ. ಈ ಹತ್ಯೆ ಯೋಜನೆಯಲ್ಲಿ ತನ್ನ ಪತ್ನಿ, ಮಗನನ್ನೂ ಅವನು ಬಳಸಿಕೊಂಡಿದ್ದ. ಉಮೇಶ್ ಪಾಲ್ ಹತ್ಯೆಯಲ್ಲಿ ಅಸಾದ್ ಅಹ್ಮದ್ ಕೈವಾಡ ಇದೆ ಎಂದು ಗೊತ್ತಾಗುತ್ತಿದ್ದಂತೆ ಪೊಲೀಸರು ಅವನ ಬೆನ್ನಟ್ಟಿದ್ದರು. ಏಪ್ರಿಲ್ 13ರಂದು ಝಾನ್ಸಿ ಬಳಿ ಈತ ಮತ್ತು ಗುಲಾಮ್ ಬೈಕ್ನಲ್ಲಿ ಹೋಗುತ್ತಿದ್ದರು. ಪೊಲೀಸರು ತಡೆದಾಗ ಅವರ ಮೇಲೆಯೇ ಆಕ್ರಮಣ ಮಾಡಲು ಮುಂದಾಗಿದ್ದರು. ಆಗ ಎನ್ಕೌಂಟರ್ ನಡೆದಿತ್ತು.
ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಸಂಚು ನನ್ನದೇ, ನನಗೆ ಉಗ್ರರೊಂದಿಗೆ ಸಂಪರ್ಕವಿದೆ; ಸತ್ಯ ಬಾಯ್ಬಿಟ್ಟ ಅತೀಕ್ ಅಹ್ಮದ್