ಗಾಂಧಿನಗರ: ಗುಜರಾತ್‌ನ ಪ್ರಸಿದ್ಧ ಸ್ವಯಂ ಘೋಷಿತ ದೇವ ಮಾನವರಾಗಿದ್ದ ಅಸಾರಾಂ ಬಾಪುಗೆ (Asaram Bapu) ಗಾಂಧಿನಗರ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಹತ್ತಾರು ಆಶ್ರಮಗಳನ್ನು ನಿರ್ಮಿಸಿಕೊಂಡು, ರಾಜಕಾರಣಿಗಳೊಂದಿಗೂ ಅತ್ಯಂತ ಸ್ನೇಹದಿಂದ ಇದ್ದ ಈ ಬಾಪು ಮೇಲಿರುವುದು ಒಂದೆರೆಡು ಆರೋಪಗಳಲ್ಲ. ಒಂದು ಕಾಲದಲ್ಲಿ ಸ್ವಯಂಘೋಷಿತ ದೇವ ಮಾನವನಾಗಿ ಮೆರೆದು ಈಗ ಜೈಲು ಸೇರಿರುವ ಈ ವ್ಯಕ್ತಿಯ ಸಂಪೂರ್ಣ ಪಾತಕಗಳ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Asaram Bapu: ಅತ್ಯಾಚಾರ ಪ್ರಕರಣದಲ್ಲಿ ಆಸಾರಾಮ್ ಬಾಪುಗೆ ಜೀವಾವಧಿ ಶಿಕ್ಷೆ, ಜತೆಗೆ 50 ಸಾವಿರ ರೂ. ದಂಡ
ಅಸಾರಾಂ ಬಾಪು ಎಂದು ಪ್ರಖ್ಯಾತಿ ಪಡೆದಿರುವ ಈ ದೇವಮಾನವನ ನಿಜ ಹೆಸರು ಅಸುಮಲ್ ಹರ್ಪಲಾನಿ. 1970ರ ದಶಕದಲ್ಲಿ ಅಹಮದಾಬಾದ್‌ನ ಶಬರಮತಿ ನದಿ ದಡದಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು. ಆ ಆಶ್ರಮದಲ್ಲಿ ಪ್ರಸಿದ್ಧಿ ಪಡೆದ ಅವರು ನಂತರ ಅದನ್ನೇ ತಮ್ಮ ಉದ್ಯಮವನ್ನಾಗಿ ಮಾಡಿಕೊಂಡು ದೇಶದ ಹಲವಾರು ಭಾಗಗಳಲ್ಲಿ ಆಶ್ರಮಗಳನ್ನು ತೆರೆದರು. ಹಲವು ಗುರುಕುಲಗಳನ್ನೂ ನಡೆಸಿದರು. ಅವರ ಆಶ್ರಮದ ವತಿಯಿಂದ ರಿಷಿ ಪ್ರಸಾದ್ ಹೆಸರಿನ ಮಾಸಿಕ ಪತ್ರಿಕೆಯೂ ಬಿಡುಗಡೆಯಾಗುತ್ತಿದ್ದು, ಅದೂ ಕೂಡ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ.
ಗಣ್ಯರೂ ಅನುಯಾಯಿಗಳೇ!
ಈ ಅಸಾರಾಂ ಬಾಪು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಕಾಲದಲ್ಲಿ ಅವರಿಗೆ ಸಾಮಾನ್ಯರ ಜತೆಯಲ್ಲಿ ಗಣ್ಯರೂ ಕೂಡ ಅನುಯಾಯಿಗಳಾಗಿದ್ದರು. ಆಗಿನ ಗುಜರಾತ್ ಮುಖ್ಯಮಂತ್ರಿ ಹಾಗೂ ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಈ ಅಸಾರಾಂರನ್ನು ಭೇಟಿ ಮಾಡುತ್ತಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್‌ನಾಥ್, ದಿಗ್ವಿಜಯ ಸಿಂಗ್ ಕೂಡ ಅಸಾರಾಂರನ್ನು ಭೇಟಿ ಮಾಡಿರುವವರೇ. ಹಾಗೆಯೇ ಮೂರು ನಕಲಿ ಎನ್‌ಕೌಂಟರ್ ಆರೋಪದಲ್ಲಿ ಜೈಲು ಸೇರಿ ಬಿಡುಗಡೆಯಾದ ನಿವೃತ್ತ ಐಪಿಎಸ್ ಅಧಿಕಾರಿ ಡಿ.ಜೆ.ವಂಜಾರಾ ಕೂಡ ಅಸಾರಾಂ ಅನುಯಾಯಿಗಳಾಗಿದ್ದವರು.
ಮಕ್ಕಳ ನಿಗೂಢ ಸಾವು
ಈ ಅಸಾರಾಂ ಬಾಪು ಬಂಡವಾಳ ಬಯಲಾಗಲು ಆರಂಭವಾಗಿದ್ದು 2008ರಿಂದ. ಆಗ ಅವರ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಮಕ್ಕಳು 2008ರ ಜುಲೈ 3ರಂದು ಕಾಣೆಯಾದರು. ಅದಾದ ಎರಡೇ ದಿನಗಳಲ್ಲಿ ಅವರ ಮೃತ ದೇಹಗಳು ಸಬರಮತಿ ನದಿ ದಡದಲ್ಲಿ ಸಿಕ್ಕಿತು. ಗುರುಕುಲದವರೇ ತಮ್ಮ ಮಕ್ಕಳನ್ನು ಬಲಿ ನೀಡಿದ್ದಾರೆ ಎಂದು ಪೋಷಕರು ದೂರಲಾರಂಭಿಸಿದರು. ಈ ವಿಚಾರದಲ್ಲಿ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಗಳು ಹೆಚ್ಚಾದ ನಂತರ ರಾಜ್ಯ ಸರ್ಕಾರವು ನಿವೃತ್ತ ಹೈಕೋರ್ಟ್ ಜಡ್ಜ್ ಡಿ.ಕೆ.ತ್ರಿವೇದಿ ಅವರ ನೇತೃತ್ವದ ಸಮಿತಿಯೊಂದನ್ನು ರಚಿಸಿ, ಈ ಪ್ರಕರಣದ ಬಗ್ಗೆ ತನಿಖೆ ನಡೆಸುವುದಕ್ಕೆ ಆದೇಶಿಸಿತು.
ಅಹಮದಾಬಾದ್‌ನ ಆಶ್ರಮದಲ್ಲಿ ಪ್ರತಿ ವರ್ಷ ಗುರು ಪೂರ್ಣಿಮೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. 2008ರ ಗುರು ಪೂರ್ಣಿಮೆ ಸಮಯದಲ್ಲಿ ಗುರುಕುಲದ ವಿರುದ್ಧ ಹೋರಾಟಗಳು ನಡೆಯುತ್ತಿದ್ದವು. ಆ ವೇಳೆ ಗುರು ಪೂರ್ಣಿಮೆ ಕಾರ್ಯಕ್ರಮವನ್ನು ವರದಿ ಮಾಡುವುದಕ್ಕೆಂದು ಬಂದಿದ್ದ ಮಾಧ್ಯಮದವರ ಮೇಲೆ ಆಶ್ರಮದವರು ಹಲ್ಲೆ ನಡೆಸಿದ್ದು, ಅದೂ ಕೂಡ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಪೊಲೀಸರು ಗುರುಕುಲದವರ ನಿರ್ಲಕ್ಷ್ಯದಿಂದಾಗಿಯೇ ಮಕ್ಕಳು ಸಾವನ್ನಪ್ಪಿದ್ದಾಗಿ ಗುರುಕುಲ ಏಳು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. 2019ರಲ್ಲಿ ತ್ರಿವೇದಿ ಅವರ ಸಮಿತಿಯು ಮಕ್ಕಳ ಸಾವಿನ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಒಪ್ಪಿಸಿದ್ದು, ಅದರಲ್ಲಿ ಆಶ್ರಮ ಮತ್ತು ಗುರುಕುಲವನ್ನು ನಿರಪರಾಧಿ ಎಂದು ಹೇಳಲಾಗಿತ್ತು.
ಎರಡು ರೇಪ್ ಕೇಸ್
ಇದರ ಮಧ್ಯೆ 2013ರಲ್ಲಿ ಅಸಾರಾಂ ಬಾಪು ವಿರುದ್ಧ ಜೋಧ್‌ಪುರ ಮತ್ತು ಗಾಂಧಿನಗರದಲ್ಲಿ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾದವು. ಅವರ ಮಗ ನಾರಾಯಣ ಸಾಯಿ ವಿರುದ್ಧವೂ ಇಂಥದ್ದೇ ಪ್ರಕರಣಗಳು ದಾಖಲಾದವು. ಅಸಾರಾಂ ಅತ್ಯಾಚಾರ ಪ್ರಕರಣಕ್ಕೆ ಹಲವು ಸಾಕ್ಷಿಗಳಿದ್ದು, ಅವುಗಳಲ್ಲಿ ಹಲವರು ಸಾವನ್ನಪ್ಪಿರುವುದು ಸುದ್ದಿಯಾಯಿತು. 2014ರಲ್ಲಿ ರಾಜ್‌ಕೋಟ್‌ನಲ್ಲಿ ಪ್ರಮುಖ ಸಾಕ್ಷಿಯೊಬ್ಬರನ್ನು ಅಸಾರಂ ಅವರ ಅನುಯಾಯಿಯೇ ಗುಂಡಿಟ್ಟು ಕೊಂದಿದ್ದು ವರದಿಯಾಯಿತು. ಜೋಧ್‌ಪುರದಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪದಲ್ಲಿ ಅಸಾರಾಂ ಅವರನ್ನು 2018ರ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿ, ಜೈಲು ಶಿಕ್ಷೆ ವಿಧಿಸಿತ್ತು. ಇದೀಗ ತನ್ನ ಶಿಷ್ಯೆ ಮೇಲೆಯೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಸಾರಾಂ ಬಾಪುವಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.