ಲಖನೌ: ಒಮ್ಮೊಮ್ಮೆ ಎಂತೆಂಥಾ ಕ್ಷುಲ್ಲಕ ವಿಷಯಗಳೆಲ್ಲ ಕೊಲೆಗೆ ಕಾರಣವಾಗಿ ಬಿಡುತ್ತವೆ. ಒಂದು ಸಣ್ಣ ಜಗಳ ಯಾರದ್ದೋ ಜೀವ ತೆಗೆದುಬಿಡುತ್ತದೆ. ಬರೇಲಿಯಲ್ಲೂ ಹಾಗೇ, ಆಗಿದೆ. ನಾನ್ ವೆಜ್ ಹೋಟೆಲ್ವೊಂದರಲ್ಲಿ ಕಬಾಬ್ನ ಗುಣಮಟ್ಟ ಸರಿಯಾಗಿಲ್ಲ ಎಂದು ಕ್ಯಾತೆ ತೆಗೆದ (kebabs Dispute) ಇಬ್ಬರು ಗ್ರಾಹಕರು, ಬಳಿಕ ಹೋಟೆಲ್ನ ಅಡುಗೆಯವನನ್ನೇ ಹತ್ಯೆ ಮಾಡಿದ್ದಾರೆ. ಬರೇಲಿ ಡೆವಲೆಪ್ಮೆಂಟ್ ಅಥೋರಿಟಿ (BDA) ಕಚೇರಿ ಬಳಿಯೇ ಈ ಘಟನೆ ನಡೆದಿದೆ. ನಾನ್ ವೆಜ್ ಉಪಾಹಾರ ಗೃಹಕ್ಕೆ ಎಸ್ಯುವಿ ಕಾರಿನಲ್ಲಿ ಇಬ್ಬರು ಬಂದಿದ್ದರು. ಅವರು ಅಲ್ಲಿ ಕಬಾಬ್ ತಿಂದಿದ್ದಾರೆ. ಬಳಿಕ ರುಚಿ-ಗುಣಮಟ್ಟ ಚೆನ್ನಾಗಿಲ್ಲ ಎಂದು ಜಗಳ ತೆಗೆದಿದ್ದಾರೆ. ಅದಾದ ಮೇಲೆ ಅಡುಗೆಯವನನ್ನೇ ಕೊಲೆ ಮಾಡಿದ್ದಾರೆ. ಹಂತಕರಾದ ಮಯಾನ್ ರಸ್ಟೋಗಿ ಅಲಿಯಾಸ್ ಗೋಲ್ಡನ್ ಬಾಬಾ ಮತ್ತು ಅವನ ಸ್ನೇಹಿತ ತಝೀಮ್ ಶಮಿಯನ್ನು ರಾಂಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅಂದಹಾಗೇ, ಘಟನೆ ನಡೆದಿದ್ದು ಪ್ರಿಯದರ್ಶಿನಿ ನಗರದ ಒಂದು ಚಿಕ್ಕ ಹೋಟೆಲ್ನಲ್ಲಿ. ಇವರಿಬ್ಬರೂ ಕಂಠಪೂರ್ತಿ ಕುಡಿದು ಅಲ್ಲಿಗೆ ಬಂದಿದ್ದರು. ಕಬಾಬ್ಗೆ ಆರ್ಡರ್ ಮಾಡಿದ್ದಾರೆ. ತಂದಿಟ್ಟ ಕಬಾಬ್ನ್ನು ಸ್ವಲ್ಪ ತಿನ್ನುತ್ತಿದ್ದಂತೆ ಜಗಳ ಎತ್ತಿದ್ದಾರೆ. ಹೋಟೆಲ್ ಮಾಲೀಕ ಅಂಕುರ್ ಸಬರ್ವಾಲ್ ಜತೆ ಜಗಳ ತೆಗೆದಿದ್ದಾರೆ. ಅಂಕುರ್ ಕೂಡ ಧ್ವನಿ ಎತ್ತರಿಸಿದ್ದಾರೆ. ಹೀಗೆ ವಾದ-ವಾಗ್ವಾದ ಮಿತಿ ಮೀರಿದೆ. ಆ ಇಬ್ಬರೂ ಗ್ರಾಹಕರು ಹಣವನ್ನೂ ಕೊಡದೆ, ಕಾರು ಹತ್ತಿ ಹೋಗಿದ್ದಾರೆ.
ಇದನ್ನೂ ಓದಿ: 10 ಸಾವಿರ ರೂ. ವಿವಾದ: ಹೈಕೋರ್ಟ್ ಆವರಣದಲ್ಲಿ ಹಗಲು ಹೊತ್ತಲ್ಲೇ ಭೀಕರ ಹತ್ಯೆ
ಅಂಕುರ್ ಸಬರ್ವಾಲಾ ಅಷ್ಟಕ್ಕೇ ಬಿಡಲಿಲ್ಲ. ಆ ಇಬ್ಬರಿಂದ 120 ರೂಪಾಯಿ ತರುವಂತೆ ತಮ್ಮ ಹೋಟೆಲ್ನ ಒಬ್ಬ ಅಡುಗೆಯವನಾದ ನಸೀರ್ ಅಹ್ಮದ್ನನ್ನು ಕಳಿಸಿದ್ದಾರೆ. ಆ ನಸೀರ್ ಅಹ್ಮದ್ಗೆ ಹಣ ಕೊಟ್ಟು ಕಳಿಸುವ ಬದಲು ಗೋಲ್ಡನ್ ಬಾಬಾ ಮತ್ತು ಅವನ ಸ್ನೇಹಿತ ತಝೀಮ್ ಶಮಿ ಸೇರಿ ಅವನನ್ನು ದೇವಸ್ಥಾನವೊಂದರ ಬಳಿ ಹತ್ಯೆ ಮಾಡಿ, ನೈನಿತಾಲ್ ರಸ್ತೆ ಮಾರ್ಗವಾಗಿ ಎಸ್ಯುವಿ ಮೂಲಕ ಪರಾರಿಯಾಗಿದ್ದರು. ಹೋಟೆಲ್ ಮಾಲೀಕ ದೂರು ಕೊಟ್ಟಿದ್ದರು. ಬಳಿಕ ಇವರ ಕಾರನ್ನು ಉತ್ತರಾಖಂಡ್ನ ಕಾಶಿಪುರದಲ್ಲಿ ಟ್ರೇಸ್ ಮಾಡಲಾಗಿತ್ತು. ಉತ್ತರಾಖಂಡ್ ಪೊಲೀಸರೂ ಸಂಪೂರ್ಣವಾಗಿ ಅಲರ್ಟ್ ಆಗಿದ್ದರು. ಬಳಿಕ ಆರೋಪಿಗಳು ಉತ್ತರ ಪ್ರದೇಶದ ರಾಂಪುರದ ಬಳಿಯೇ ಸಿಕ್ಕಿಬಿದ್ದಿದ್ದಾರೆ.