Site icon Vistara News

ಟ್ವಿಟರ್ ಬಯೋದಿಂದ INDIA ಹೆಸರು ತೆಗೆದು, BJP for Bharat ಎಂದ ಅಸ್ಸಾಂ ಮುಖ್ಯಮಂತ್ರಿ

Himanta Biswa Sarma

2024ರ ಲೋಕಸಭೆ ಚುನಾವಣೆಯಲ್ಲಿ (2024 Lok Sabha Election) ಬಿಜೆಪಿ ವಿರುದ್ಧ ಹೋರಾಡಲು ಒಗ್ಗಟ್ಟಾಗಿರುವ ಪ್ರತಿಪಕ್ಷಗಳ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಲಾಗಿದೆ. ಈ ಒಕ್ಕೂಟ Indian National Developmental Inclusive Alliance (ಇಂಡಿಯನ್​ ನ್ಯಾಶನಲ್​ ಡೆವಲಪ್​​ಮೆಂಟಲ್​​ ಇನ್​ಕ್ಲ್ಯೂಸಿವ್​ ಅಲಿಯೆನ್ಸ್) ಎಂಬ ಅರ್ಥದಲ್ಲಿ ಇಂಡಿಯಾ ಎಂದು ಹೆಸರು ಇಟ್ಟುಕೊಂಡಿದೆ. ಮುಂದಿನ ಚುನಾವಣೆಯ ಕಣದಲ್ಲಿ NDA VS INDIA ಫೈಟ್​ ನಡೆಯಲಿದೆ. ಇನ್ನು ಪ್ರತಿಪಕ್ಷಗಳ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡುತ್ತಿದ್ದಂತೆ ಪ್ರಧಾನಿ ಮೋದಿ ತಿರುಗೇಟು ಕೊಟ್ಟಿದ್ದಾರೆ. ನಿನ್ನೆ ನಡೆದ ಎನ್​ಡಿಎ ಸಭೆ ಬಳಿಕ ಮಾತನಾಡಿದ ಅವರು NDA ಎಂದರೆ ನ್ಯೂ ಇಂಡಿಯಾ, ಡೆವಲಪ್ಡ್​​ ನೇಶನ್​, ಆಸ್ಪೈರೇಶನ್​ ಆಫ್​ ಪೀಪಲ್​​ ಆ್ಯಂಡ್ ರೀಜನ್​ (ನವ ಭಾರತ, ಅಭಿವೃದ್ಧಿ ಹೊಂದಿದ ರಾಷ್ಟ್ರ, ಜನರ ಮತ್ತು ಪ್ರಾದೇಶಿಕ ಆಕಾಂಕ್ಷೆ) ಎಂದು ವಿವರಿಸಿದ್ದಾರೆ.

ಇಷ್ಟೆಲ್ಲದರ ಮಧ್ಯೆ ಈಗ ಬಿಜೆಪಿ ಪಾಳೆಯಕ್ಕೆ INDIA ಹೆಸರು ಸ್ವಲ್ಪ ಕಿರಿಕಿರಿ ಕೊಡುತ್ತಿದೆ. ಅದಕ್ಕೆ ಸಾಕ್ಷಿಯೆಂಬಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ತಮ್ಮ ಟ್ವಿಟರ್​ ಬಯೋದಲ್ಲಿ India ಎಂದು ಬರೆದುಕೊಂಡಿದ್ದನ್ನು ತೆಗೆದು ಅಲ್ಲಿ Bharat ಎಂದು ಬರೆದುಕೊಂಡಿದ್ದಾರೆ. ಇಷ್ಟುದಿನ ಅವರ ಹೆಸರಿನ ಕೆಳಗೆ ಚೀಫ್ ಮಿನಿಸ್ಟರ್ ಆಫ್​ ಅಸ್ಸಾಂ, ಇಂಡಿಯಾ ಎಂದು ಇತ್ತು. ಅದೀಗ ಚೀಫ್ ಮಿನಿಸ್ಟರ್ ಆಫ್​ ಅಸ್ಸಾಂ, ಭಾರತ್​ (BHARAT) ಎಂದು ಬದಲಾಗಿದೆ.

ಪ್ರತಿಪಕ್ಷಗಳ ಒಕ್ಕೂಟದ ಹೆಸರು INDIA ಎಂದು ಬದಲಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ಗುರ್​ದೀಪ್​ ಸಿಂಗ್ ಸಪ್ಪಲ್ ಅವರು ಟ್ವೀಟ್ ಮಾಡಿ, ಅಸ್ಸಾಂ ಮುಖ್ಯಮಂತ್ರಿಯ ಟ್ವಿಟರ್ ಬಯೋದ ಸ್ಕ್ರಿನ್​ಶಾಟ್ ಶೇರ್ ಮಾಡಿಕೊಂಡಿದ್ದರು. ‘ಮೊದಲು ನೀವು ನಿಮ್ಮ ಟ್ವಿಟರ್ ಬಯೋ ಬದಲಿಸಿಕೊಳ್ಳಿ. ಅಲ್ಲಿ ಇಂಡಿಯಾ ಎಂದು ಬರೆದಿದೆ. ಅಷ್ಟಲ್ಲದೆ Stand Up India, Start Up India, Make in India ಗಳ ಹೆಸರನ್ನೂ ಬದಲಿಸುವಂತೆ ನಿಮ್ಮ ಬಾಸ್​ (ಪ್ರಧಾನಿ ಮೋದಿ)ಗೆ ಹೇಳಿ. ಇವೆಲ್ಲವೂ ಈಗಾಗಲೇ ಸೋತಿವೆ ಎಂದು ನಮಗೆಲ್ಲ ಗೊತ್ತಿದೆ. ಆದರೆ ಈ ಸಲ INDIA ಗೆಲ್ಲುತ್ತದೆ’ ಎಂದು ವ್ಯಂಗ್ಯ ಮಾಡಿದ್ದರು.

ಇದನ್ನೂ ಓದಿ: NDA vs INDIA: ಕಾಂಗ್ರೆಸ್‌ ಜತೆಗಿನ ಪಕ್ಷಗಳನ್ನು ʼತುಂಡರಸರುʼ ಎಂದ ಬಿಜೆಪಿ: ಈಸ್ಟ್‌ INDIAಗೆ ಹೋಲಿಕೆ!

ಅದಾದ ಬಳಿಕ ಟ್ವಿಟರ್ ಬಯೋದಲ್ಲಿ ಭಾರತ್​ ಎಂದು ಹೆಸರು ಬದಲಿಸಿಕೊಂಡ ಹಿಮಂತ್ ಬಿಸ್ವಾ ಶರ್ಮಾ ‘ಮೊದಲಿನಿಂದಲೂ ಇಂಡಿಯಾ ಮತ್ತು ಭಾರತ ಹೆಸರುಗಳ ಮಧ್ಯೆ ನಾಗರಿಕ ಸಮಾಜದಲ್ಲಿ ಒಂದು ಸಂಘರ್ಷ ಇದ್ದೇ ಇದೆ. ನಮ್ಮ ದೇಶಕ್ಕೆ ಇಂಡಿಯಾ ಎಂದು ಹೆಸರು ಕೊಟ್ಟವರು ಬ್ರಿಟಿಷರು. ಅಂಥ ವಸಾಹತುಶಾಹಿ ಪರಂಪರೆಗಳಿಂದ ನಮ್ಮನ್ನು ನಾವು ಕಳಚಿಕೊಂಡು ಮುನ್ನಡೆಯಬೇಕು. ನಮ್ಮ ಪೂರ್ವಜರು ಭಾರತಕ್ಕಾಗಿ ಹೋರಾಟ ನಡೆಸಿದ್ದರು. ನಾವೂ ಕೂಡ ಅದೇ ಭಾರತಕ್ಕಾಗಿ ನಮ್ಮ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಫಾರ್​ ಭಾರತ್​ (BJP for Bharat) ಎಂದು ಟ್ವೀಟ್ ಮಾಡಿದ್ದಾರೆ.

Exit mobile version