Site icon Vistara News

ಅಸ್ಸಾಂ ಲೇಡಿ ಸಿಂಗಂ ಪೊಲೀಸ್ ಅಧಿಕಾರಿ ಸಾವು; ಆ ರಾತ್ರಿ ಎಲ್ಲಿಗೆ ಹೊರಟಿದ್ದರೆಂದು ಮನೆಯವರಿಗೂ ಗೊತ್ತಿರಲಿಲ್ಲ!

Assam Lady Singham Fame Police Junmoni Rabha Died In Car Accident

#image_title

ಅಸ್ಸಾಂನಲ್ಲಿ ಲೇಡಿ ಸಿಂಗಂ, ದಬಾಂಗ್ ಕಾಪ್​ ಎಂದೇ ಖ್ಯಾತರಾಗಿದ್ದ, ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ (Junmoni Rabha) ಅವರು ಕಾರು ಅಪಘಾತ (Car Accident)ದಲ್ಲಿ ಮೃತಪಟ್ಟಿದ್ದಾರೆ. ಇವರ ಖಾಸಗಿ ಕಾರಿಗೆ ನಾಗಾನ್ ಜಿಲ್ಲೆಯ ಸರುಭುಗಿಯಾ ಗ್ರಾಮದ ಬಳಿ ಕಂಟೇನರ್​ ಟ್ರಕ್​ ಡಿಕ್ಕಿಯಾಗಿ, ಈ ದುರ್ಘಟನೆ ನಡೆದಿದೆ. ಜುನ್ಮೋನಿ ರಾಭಾ ಅವರು ತಮ್ಮ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದರು. ಕಾರಿನಲ್ಲಿ ಒಬ್ಬರೇ ಇದ್ದರು. ಅವರು ಪೊಲೀಸ್ ಸಮವಸ್ತ್ರದಲ್ಲಿ ಕೂಡ ಇರಲಿಲ್ಲ.

ಜಖಲಬಂಧ ಪೊಲೀಸ್ ಠಾಣಾಧಿಕಾರಿ ಪವನ್ ಕಲಿತಾ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ‘ಮಧ್ಯರಾತ್ರಿ 2.30ರ ಹೊತ್ತಿಗೆ ನಮಗೆ ಜನ್ಮೋನಿ ರಾಭಾ ಕಾರಿಗೆ ಅಪಘಾತವಾದ ಬಗ್ಗೆ ಮಾಹಿತಿ ಬಂತು. ಸ್ಥಳದ ಸಮೀಪವೇ ಇದ್ದ ಒಂದು ಪೊಲೀಸ್​ ಗಸ್ತು ಪಡೆ ಕೂಡಲೇ ತೆರಳಿ, ಜುನ್ಮೋನಿಯವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲೇ ಜೀವ ಹೋಗಿತ್ತು’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Election : ಸಿದ್ದು, ಡಿಕೆಶಿ ಟಿಪ್ಪು ಸುಲ್ತಾನ್‌ ವಂಶಕ್ಕೆ ಸೇರಿದವರು ಎಂದು ದೂಷಿಸಿದ ಅಸ್ಸಾಂ ಸಿಎಂ

ಜುನ್ಮೋನಿ ರಾಭಾ ಅವರು ಮೊರಿಕೊಲೊಂಗ್ ಪೊಲೀಸ್ ಔಟ್​ಪೋಸ್ಟ್​​ನ ಉಸ್ತುವಾರಿ ಅಧಿಕಾರಿಯಾಗಿದ್ದರು. ಕ್ರಿಮಿನಲ್​ಗಳ ಪಾಲಿಗೆ ದುಃಸ್ವಪ್ನವಾಗಿದ್ದರು. ಆದರೆ ಹಣಕಾಸಿನ ಅವ್ಯವಹಾರ ಕೇಸ್​​ವೊಂದರಲ್ಲಿ ಸಿಲುಕಿ ಸುದ್ದಿಯಾಗಿದ್ದರು. ಕಳೆದ ವರ್ಷ ಇದೇ ಕೇಸ್​​ನಲ್ಲಿ ಬಂಧಿತರಾಗಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ್ದ ಮಜುಲಿ ಜಿಲ್ಲಾ ನ್ಯಾಯಾಲಯ ಜುನ್ಮೋನಿ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಅದಾದ ಮೇಲೆ ಆಕೆಯನ್ನು ಅಮಾನತು ಮಾಡಲಾಗಿತ್ತು. ಬಳಿಕ ಜೈಲಿಂದ ಹೊರಬಂದಿದ್ದರು. ಅಮಾನತು ಕೂಡ ರದ್ದಾಗಿತ್ತು. ಸೇವೆ ಮುಂದುವರಿಸಿದ್ದರು.

ಕುಟುಂಬದವರಿಗೇ ಗೊತ್ತಿರಲಿಲ್ಲ
ಜುನ್ಮೋನಿ ರಭಾ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಕೆಯ ಕುಟುಂಬದವರು ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಅವರನ್ನು ಒತ್ತಾಯಿಸಿದ್ದಾರೆ. ‘ಇದೊಂದು ಪೂರ್ವನಿಯೋಜಿತ ಕೊಲೆ. ಕರೆಕ್ಟ್ ಆಗಿ ಪ್ಲ್ಯಾನ್​ ಮಾಡಿ ರಭಾಳನ್ನು ಕೊಂದಿದ್ದಾರೆ. ಅವಳು ರಾತ್ರಿ ಹೊತ್ತಲ್ಲಿ ಕಾರಿನಲ್ಲಿ ಒಬ್ಬಳೇ ಎಲ್ಲಿ ಹೋದಳು ಎಂಬದು ನಮಗೂ ಗೊತ್ತಿರಲಿಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು’ ಎಂದು ರಭಾ ತಾಯಿ ಸುಮಿತ್ರಾ ರಭಾ ಆಗ್ರಹಿಸಿದ್ದಾರೆ.

ಜುನ್ಮೋನಿ ವಿರುದ್ಧ ಎಫ್​ಐಆರ್​
ಜುನ್ಮೋನಿ ರಭಾ ವಿರುದ್ಧ ಸೋಮವಾರವಷ್ಟೇ ಉತ್ತರ ಲಖಿಂಪುರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಜುನ್ಮೋನಿ ವಿರುದ್ಧ ಪೊಲೀಸರು ಕ್ರಿಮಿನಲ್ ಸಂಚು, ದರೋಡೆ, ಸುಲಿಗೆ, ತಪ್ಪು ಬಂಧನ ಇತ್ಯಾದಿ ಪ್ರಕರಣ ದಾಖಲಿಸಿದ್ದರು. ಹಾಗೇ, ಜುನ್ಮಾನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದರು. ಆದರೆ ಅಷ್ಟರಲ್ಲಿ ಆಕೆಯ ಜೀವವೇ ಹೋಗಿದೆ.

ಇದನ್ನೂ ಓದಿ: Karnataka Election : ಸಿದ್ದು, ಡಿಕೆಶಿ ಟಿಪ್ಪು ಸುಲ್ತಾನ್‌ ವಂಶಕ್ಕೆ ಸೇರಿದವರು ಎಂದು ದೂಷಿಸಿದ ಅಸ್ಸಾಂ ಸಿಎಂ

Exit mobile version