ಬೆಂಗಳೂರು: ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ (Youth Congress National President), ಶಿವಮೊಗ್ಗದ ಭದ್ರಾವತಿ ಮೂಲದ ಶ್ರೀನಿವಾಸ್ ಬಿವಿ (Srinivas BV) ಅವರಿಗೆ ಈಗ ಬಂಧನದ ಭಯ ಶುರುವಾಗಿದೆ. ಯುವ ಕಾಂಗ್ರೆಸ್ ಅಸ್ಸಾಂ ಘಟಕದ ಅಧ್ಯಕ್ಷೆಯಾಗಿದ್ದ ಅಂಕಿತಾ ದತ್ತಾ ಅವರು ಶ್ರೀನಿವಾಸ್ ಬಿವಿ ವಿರುದ್ಧ ಲೈಂಗಿಕ ಕಿರುಕುಳ, ಅನುಚಿತ ವರ್ತನೆಯ ಆರೋಪ ಮಾಡಿ ದಿಸ್ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದೇ ಕೇಸ್ಗೆ ಸಂಬಂಧಪಟ್ಟಂತೆ ಅಸ್ಸಾಂ ಪೊಲೀಸರು ಶ್ರೀನಿವಾಸ್ ಬಿವಿ ಅವರಿಗೆ ನೋಟಿಸ್ ಕೊಟ್ಟಿದ್ದಾರೆ.
ಶ್ರೀನಿವಾಸ್ ಬಿವಿ ಅವರನ್ನು ಹುಡುಕಿಕೊಂಡು ಅಸ್ಸಾಂ ಪೊಲೀಸರ ತಂಡವೊಂದು ಬೆಂಗಳೂರಿಗೆ ಆಗಮಿಸಿದೆ. ಪೊಲೀಸರು ಬೆಂಗಳೂರಿನ ಬಸವೇಶ್ವರನ ನಗರದಲ್ಲಿರುವ ಶ್ರೀನಿವಾಸ್ ಮನೆಗೆ ಹೋಗಿದ್ದರು. ಆದರೆ ಈ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಶ್ರೀನಿವಾಸ್ ಬಿವಿ ಮನೆಗೆ ನೋಟಿಸ್ ಅಂಟಿಸಿ ಅಲ್ಲಿಂದ ತೆರಳಿದ್ದಾರೆ. ಅಂದಹಾಗೇ, ಗುವಾಹಟಿಯ ಪೊಲೀಸ್ ಜಂಟಿ ಆಯುಕ್ತ ಪ್ರತೀಕ್ ಅವರೇ ಖುದ್ದು ಆಗಮಿಸಿದ್ದಾರೆ. ಇವರಿಗೆ ಬೆಂಗಳೂರು ನಗರ ಪೊಲೀಸರು ಸಾಥ್ ನೀಡಿದ್ದರು.
ಅಸ್ಸಾಂ ಯುತ್ ಕಾಂಗ್ರೆಸ್ ಮುಖ್ಯಸ್ಥೆಯಾಗಿದ್ದ ಡಾ. ಅಂಕಿತಾ ದತ್ತಾ ಅವರು ಭಾರತೀಯ ಯುತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಮತ್ತು ಉಸ್ತುವಾರಿ ಕಾರ್ಯದರ್ಶಿ ವರ್ಧನ್ ಯಾದವ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಟ್ಯಾಗ್ ಮಾಡಿ, ಟ್ವೀಟ್ ಮಾಡುವ ಜತೆಗೆ ಅಸ್ಸಾಂನ ದಿಸ್ಪುರ ಠಾಣೆಯಲ್ಲೂ ದೂರು ದಾಖಲಿಸಿದ್ದರು. ಕಳೆದ 6ತಿಂಗಳಿಂದಲೂ ಶ್ರೀನಿವಾಸ್ ಬಿವಿ ಅವರಿಂದ ನಾನು ಕಿರುಕುಳಕ್ಕೆ ಒಳಗಾಗುತ್ತಿದ್ದೇನೆ. ಇತ್ತೀಚೆಗೆ ಛತ್ತೀಸ್ಗಢ್ನ ರಾಯ್ಪುರದಲ್ಲಿ ನಡೆದಿದ್ದ ಕಾಂಗ್ರೆಸ್ ಸರ್ವಸದಸ್ಯರ ಸಮ್ಮೇಳನದಲ್ಲಿ ನನ್ನೊಂದಿಗೆ ಅವರು ಅನುಚಿತವಾಗಿ ವರ್ತಿಸಿದ್ದರು. ‘ವೋಡ್ಕಾ ಕುಡೀತಿಯಾ ಎಂದು ಕೇಳಿದ್ದರು’ ಅಷ್ಟೇ ಅಲ್ಲ, ತೋಳನ್ನು ಗಟ್ಟಿಯಾಗಿ ಹಿಡಿದುಕೊಂಡು, ‘ನನ್ನ ಬಗ್ಗೆ ಪಕ್ಷದ ವರಿಷ್ಠರಿಗೆ ಹೇಳಿದ್ದೇ ಆದಲ್ಲಿ, ನಿನ್ನ ರಾಜಕೀಯ ವೃತ್ತಿ ಜೀವನವನ್ನು ಹಾಳುಗೆಡವುತ್ತೇನೆ. ಮುಂದಿನ ಪರಿಣಾಮವನ್ನು ಎದುರಿಸಬೇಕಾಗುತ್ತದೆ’ ಎಂದೂ ಹೆದರಿಸಿದ್ದರು. ಅವರಿಂದ ನಾನು ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ಅನುಭವಿಸುತ್ತಿದ್ದೇನೆ. ಮಹಿಳೆ ಎಂಬ ಕಾರಣಕ್ಕೆ ತಾರತಮ್ಯ ಮಾಡುತ್ತಿದ್ದಾರೆ. ಅಂಥ ಕಮೆಂಟ್ಗಳನ್ನು ಅವರು ನನ್ನ ವಿರುದ್ಧ ಮಾಡುತ್ತಿದ್ದಾರೆ’ ಎಂದು ಹೇಳಿದ್ದರು. ಅವರು ಹೀಗೆ ಆರೋಪ ಮಾಡಿದ ಬೆನ್ನಲ್ಲೇ, ಅವರನ್ನು ಕಾಂಗ್ರೆಸ್ ಪಕ್ಷ ಉಚ್ಚಾಟನೆ ಮಾಡಿದೆ.
ಸಿಎಂ ಹಿಮಂತ ಬಿಸ್ವಾ ಶರ್ಮಾ ಟ್ವೀಟ್
ಇಂದು ಶ್ರೀನಿವಾಸ್ ಬಿವಿ ಅವರಿಗೆ ಅಸ್ಸಾಂ ಪೊಲೀಸರು ನೀಡಿರುವ ನೋಟಿಸ್ನ್ನು ಶೇರ್ ಮಾಡಿಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ‘ಕಾಂಗ್ರೆಸ್ನಲ್ಲಿ ಮಹಿಳೆಯರಿಗೆ ಅಸುರಕ್ಷಿತ ವಾತಾವರಣ ಇದೆ. ಆದರೆ ಇಷ್ಟೆಲ್ಲ ಆದ ಮೇಲೆ ನನ್ನನ್ನು ದೂಷಿಸಲಾಗುತ್ತಿದೆ. ಇಲ್ಲಿ ನನ್ನ ಪಾತ್ರವೇನೂ ಇಲ್ಲ. ಅಸ್ಸಾಂ ಪೊಲೀಸರು ಅವರ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕಿ ನೀಡಿದ ದೂರನ್ನು ದಾಖಲಿಸಿಕೊಂಡು, ಅದನ್ನು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ವಿರುದ್ಧ ಅಂಕಿತಾ ದತ್ತಾ ದೂರು ದಾಖಲು ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಕರ್ನಾಟ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಪ್ರತಿಕ್ರಿಯೆ ನೀಡಿ, ‘ಅಸ್ಸಾಂ ಮುಖ್ಯಮಂತ್ರಿ ಗೃಹ ಸಚಿವ ಅಮಿತ್ ಶಾ ಅವರನ್ನು ಮೆಚ್ಚಿಸಲು ಮುಂದಾಗಿದ್ದಾರೆ. ಹೀಗಾಗಿ ಇಂಥದ್ದನ್ನೆಲ್ಲ ಮಾಡುತ್ತಿದ್ದಾರೆ’ ಎಂದು ಹೇಳಿದ್ದರು. ಅಂದರೆ ಅಂಕಿತಾ ದತ್ತಾ ಕೈಯಲ್ಲಿ ಇದನ್ನೆಲ್ಲ ಮಾಡಿಸುತ್ತಿರುವುದು ಹಿಮಂತ ಬಿಸ್ವಾ ಶರ್ಮಾ ಎಂಬರ್ಥದಲ್ಲಿ ಮಾತನಾಡಿದ್ದರು. ಸುರ್ಜೇವಾಲಾ ಅವರ ಈ ಮಾತುಗಳಿಗೆ ಹಿಮಂತ ಬಿಸ್ವಾ ಶರ್ಮಾ ಅವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕಾಂಗ್ರೆಸ್ನ ಹಲವು ನಾಯಕರು ಅಂಕಿತಾ ದತ್ತಾರನ್ನೇ ದೂಷಿಸುತ್ತಿದ್ದಾರೆ. ಆಕೆಗೆ ಬಿಜೆಪಿಗೆ ಸೇರಬೇಕಾಗಿದೆ. ಅದೇ ಕಾರಣಕ್ಕಾಗಿ ಇದನ್ನೆಲ್ಲ ಮಾಡುತ್ತಿದ್ದಾಳೆ ಎಂದಿದ್ದಾರೆ.