ದಿಸ್ಪುರ: ಖಲಿಸ್ತಾನ ಪ್ರತ್ಯೇಕ ರಾಷ್ಟ್ರದ ಪರ ಹೋರಾಟ ನಡೆಸುತ್ತಿರುವ ಖಲಿಸ್ತಾನಿಗಳು ದೇಶಕ್ಕೇ ತಲೆನೋವಾಗುತ್ತಿದ್ದಾರೆ. ಅದರಲ್ಲೂ, ಪಂಜಾಬ್‌ನಲ್ಲಿ ಖಲಿಸ್ತಾನಿಗಳ ನಾಯಕ ಅಮೃತ್‌ಪಾಲ್ ಸಿಂಗ್ ಬಂಧನಕ್ಕೆ ಕಾರ್ಯಾಚರಣೆ ಆರಂಭವಾದ ಬಳಿಕವಂತೂ ಖಲಿಸ್ತಾನಿಗಳ ಉಪಟಳ ಜಾಸ್ತಿಯಾಗಿದೆ. ಪರಿಸ್ಥಿತಿ ಹೀಗಿರುವ ಮಧ್ಯೆಯೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರಿಗೆ ನಿಷೇಧಿತ ಖಲಿಸ್ತಾನಿ ಸಂಘಟನೆ ಸಿಖ್ ಫಾರ್ ಜಸ್ಟಿಸ್‌ನಿಂದ ಜೀವ ಬೆದರಿಕೆ ಹಾಕಲಾಗಿದೆ. ಹಾಗಾಗಿ, ಅಸ್ಸಾಂ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಜಸ್ಟಿಸ್ ಫಾರ್ ಸಿಖ್ ಸಂಘಟನೆಯ ಗುರ್‌ಪಟ್ವಾಣ್ ಸಿಂಗ್ ಪನ್ನುನ್ ಮಾತನಾಡಿದ್ದಾನೆ ಎನ್ನಲಾದ ಆಡಿಯೊ ಮೆಸೇಜ್ ಪೊಲೀಸರಿಗೆ ಲಭ್ಯವಾಗಿದೆ. “ಅಸ್ಸಾಂ ಮುಖ್ಯಮಂತ್ರಿ ಹಿಮಂತ ಶರ್ಮಾ ಅವರಿಗೆ ಈ ಸಂದೇಶ. ಅಸ್ಸಾಂನಲ್ಲಿ ಖಲಿಸ್ತಾನ ಪರ ಸಿಖ್ಖರಿಗೆ ನಿಮ್ಮ ಸರ್ಕಾರ ಕಿರುಕುಳ ನೀಡುತ್ತಿದೆ. ಜೈಲಿನಲ್ಲಿರುವವರಿಗೂ ಹಿಂಸಿಸಲಾಗುತ್ತಿದೆ. ಭಾರತ ಸರ್ಕಾರ ಹಾಗೂ ಸಿಖ್ಖರ ಮಧ್ಯೆ ಯುದ್ಧ ನಡೆಯುತ್ತಿದೆ. ಶರ್ಮಾ, ನೀವು ಇದರ ಮಧ್ಯೆ ಪ್ರವೇಶ ಮಾಡದಿರಿ” ಎಂದು ಎಚ್ಚರಿಸಿದ್ದಾನೆ.
“ನಾವು ಭಾರತದಿಂದ ಪಂಜಾಬ್‌ಅನ್ನು ಮುಕ್ತಗೊಳಿಸಲು ಬಯಸುತ್ತಿದ್ದೇವೆ. ಪ್ರಜಾಪ್ರಭುತ್ವದ ಹಾದಿಯಲ್ಲಿಯೇ ಬೇರ್ಪಡಲು ಬಯಸುತ್ತಿದ್ದೇವೆ. ಹಾಗೊಂದು ವೇಳೆ, ನೀವು (ಶರ್ಮಾ) ಹೀಗೆಯೇ ಸಿಖ್ಖರಿಗೆ ಕಿರುಕುಳ ಕೊಡುತ್ತಿದ್ದರೆ, ನೇರವಾಗಿ ನೀವೇ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಹೇಳಿದ್ದಾನೆ. ಇನ್ನು ಆಡಿಯೊ ಸಂದೇಶ ಲಭ್ಯವಾಗುತ್ತಲೇ ಅಸ್ಸಾಂ ಪೊಲೀಸರು ಅಲರ್ಟ್ ಆಗಿದ್ದು, ಸಕಲ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಕಾರಣನಾದ ಅಮೃತ್‌ಪಾಲ್ ಸಿಂಗ್‌ನ ಆಪ್ತರನ್ನು ಅಸ್ಸಾಂ ಜೈಲಿನಲ್ಲಿ ಇರಿಸಲಾಗಿದೆ. ಇದೇ ಕಾರಣಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಶರ್ಮಾ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ನಿತಿನ್ ಗಡ್ಕರಿಗೂ ಬೆದರಿಕೆ ಹಾಕಲಾಗಿತ್ತು
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೆಲ ದಿನಗಳ ಹಿಂದೆ ಜೀವ ಬೆದರಿಕೆ ಕರೆ ಮಾಡಲಾಗಿತ್ತು. ಮಹಾರಾಷ್ಟ್ರದ ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಅವರ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿದ ವ್ಯಕ್ತಿ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗಿದೆ. ಕಳೆದ ಜನವರಿ ತಿಂಗಳಲ್ಲಿ ಬೆಳಗಾವಿ ಹಿಂಡಲಗಾ ಜೈಲಿನಿಂದ ಜಯೇಶ್ ಕಾಂತಾ ಎಂಬಾತನ ಹೆಸರಿನಲ್ಲಿ ನಾಗಪುರದ ಕಚೇರಿಗೆ ಬೆದರಿಕೆ ಕರೆ ಮಾಡಲಾಗಿತ್ತು. ಅದೇ ಜಯೇಶ್ ಹೆಸರಿನಲ್ಲಿ ಹಿಂಡಲಗಾ ಜೈಲಿನಿಂದಲೇ ಕರೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಹೆಸರು ಬಳಸಿ ಕರೆ ಮಾಡಲಾಗಿತ್ತು. 10 ಕೋಟಿ ರೂಪಾಯಿ ನೀಡುವಂತೆ ಆಗಂತುಕ ಬೇಡಿಕೆ ಇಟ್ಟಿದ್ದಾನೆ. ಆದರೆ, ನಿಜಕ್ಕೂ ಕರೆ ಮಾಡಿದ್ದು ಜಯೇಶ್ ಪೂಜಾರಿಯಾ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Sagara News: ನಾನು ಪತ್ರಕರ್ತರಿಗಾಗಲೀ, ಯಾರಿಗೇ ಆಗಲಿ ಜೀವ ಬೆದರಿಕೆ ಹಾಕಿಲ್ಲ: ಶಾಸಕ ಹಾಲಪ್ಪ ಸ್ಪಷ್ಟನೆ