ದಿಸ್ಪುರ: ಅಸ್ಸಾಂನಲ್ಲಿ ಭಾರಿ ಪ್ರಮಾಣದಲ್ಲಿ ಮಳೆ (Assam Rain) ಸುರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಎದುರಾಗಿದೆ. ಅರುಣಾಚಲ ಪ್ರದೇಶ, ಮೇಘಾಲಯ ರಾಜ್ಯಗಳಲ್ಲೂ ಮಳೆಯಿಂದ ಹಲವು ರೀತಿಯ ಸಮಸ್ಯೆಗಳಾಗಿದ್ದು ಭೂಕುಸಿತ ಉಂಟಾಗಿದೆ. ಇದರಿಂದಾಗ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಸ್ಸಾಂನಲ್ಲಿ ಭೀಕರ ಪ್ರವಾಹದಿಂದಾಗಿ ಕಳೆದ 24 ಗಂಟೆಯಲ್ಲಿ ಸುಮಾರು 26 ಜಿಲ್ಲೆಗಳ 4.03 ಲಕ್ಷ ಜನರಿಗೆ ತೊಂದರೆಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಏಜೆನ್ಸಿ ತಿಳಿಸಿದೆ. ಅಸ್ಸಾಂನಲ್ಲಿ ಮಳೆ ಬೀಳಲು ಶುರುವಾಗಿ ವಾರ ಕಳೆದಿದ್ದು, ಇಲ್ಲಿಯವರೆಗೆ ಮಳೆಯಿಂದಾದ ಅನಾಹುತದಿಂದ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಅದರಲ್ಲೂ ಉದಲ್ಗುರಿ ಜಿಲ್ಲೆಯಲ್ಲೇ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಕರೆ ಮಾಡಿ, ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂನಲ್ಲಿ ಮಳೆ-ಪ್ರವಾಹದಿಂದ ಅಪಾರ ಹಾನಿಯಾಗುತ್ತಿದೆ. ಪ್ರಕೃತಿ ವಿಕೋಪದಿಂದ ಉಂಟಾಗಿರುವ ಈ ಸವಾಲಿನ ಪರಿಸ್ಥಿತಿ ಎದುರಿಸಲು ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಹಾಯ ಮಾಡಲು ಸಿದ್ಧ ಇರುವುದಾಗಿ ಅಮಿತ್ ಶಾ ಹೇಳಿದ್ದಾರೆ.
ಅಸ್ಸಾಂನ ಕ್ಯಾಚಾರ್‌ನಲ್ಲಿ ಪ್ರವಾಹದಿಂದ 96,697 ಮಂದಿಗೆ ತೊಂದರೆಯಾಗಿದ್ದರೆ, ಹೋಜೈ ಜಿಲ್ಲೆಯಲ್ಲಿ 88,420 ಜನರು ಹಾಗೂ ಡರಾಂಗ್ ಮತ್ತು ನಾಗಾಂವ್ ಜಿಲ್ಲೆಗಳಿಂದ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಸಮಸ್ಯೆಯಾಗಿದೆ. ಒಟ್ಟಾರೆ 1100 ಹಳ್ಳಿಗಳಿಗೆ ನೀರು ನುಗ್ಗಿದೆ. 33 ಸಾವಿರ ಹೆಕ್ಟೇರ್‌ಗಳಷ್ಟು ಬೆಳೆ ಜಲಾವೃತಗೊಂಡಿದೆ ಎಂದೂ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಏಜೆನ್ಸಿ ಮಾಹಿತಿ ನೀಡಿದೆ. ರಾಜ್ಯದಲ್ಲಿ ಪ್ರವಾಹ ಸ್ಥಿತಿ ಅತ್ಯಂತ ಹೆಚ್ಚಾಗಿರುವ ಪ್ರದೇಶದಲ್ಲಿ ಒಟ್ಟೂ 89 ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸದ್ಯ 40 ಸಾವಿರ ಮಂದಿ ಈ ಕೇಂದ್ರಗಳಲ್ಲಿದ್ದಾರೆ. ಪ್ರವಾಹದ ನೀರಿನಿಂದ ಜಲಾವೃತಗೊಂಡ ಹಳ್ಳಿಗಳಿಂದ 3,427 ಮಂದಿಯನ್ನು ಬೋಟ್‌ಗಳ ಮೂಲಕ ರಕ್ಷಿಸಲಾಗಿದೆ. ಸದ್ಯದ ಮಟ್ಟಿಗೆ ಅಸ್ಸಾಂನ ಕ್ಯಾಚರ್ (Cachar) ಜಿಲ್ಲೆಯ ಕಟಿಗೋರಾ ಮತ್ತು ಬೋರ್ಖೋಲಾ ಪ್ರದೇಶಗಳಲ್ಲಿ ಪರಿಸ್ಥಿತಿ ದಯನೀಯವಾಗಿದೆ. ಜಿಲ್ಲೆಯ ಪರಿಸ್ಥಿತಿ ಬಗ್ಗೆ ಅಲ್ಲಿನ ಉಪ ಆಯುಕ್ತ ಕೀರ್ತಿ ಜಲ್ಲಿ ಮಾಹಿತಿ ನೀಡಿದ್ದಾರೆ. ಯಾರೂ ಹೆದರುವ ಅಗತ್ಯವಿಲ್ಲ. ಅಗತ್ಯವಿರುವಷ್ಟು ಆಹಾರ ಸಂಗ್ರಹ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮೇಘಾಲಯದಲ್ಲಿ ಭೂಕುಸಿತ
ಮೇಘಾಲಯದಲ್ಲೂ ವಿಪರೀತ ಮಳೆ ಸುರಿಯುತ್ತಿದ್ದು ಇಲ್ಲಿ ಭೂಕುಸಿತ ಉಂಟಾಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 6 ಮತ್ತು ಲುಮ್ಡಿಂಗ್-ಬಾದಾರ್‌ಪುರ್ ಗುಡ್ಡಗಾಡು ಪ್ರದೇಶದಲ್ಲಿ ಭೂಮಿ ಕುಸಿತಗೊಂಡಿದ್ದರಿಂದ ರೈಲು ಸಂಚಾರಕ್ಕೂ ಅಡಚಣೆಯಾಗಿದೆ. ಕೆಲವು ರಸ್ತೆಗಳನ್ನು ತೆರವುಗೊಳಿಸಲಾಗಿದೆ ಮತ್ತೂ ಕೆಲವು ಹಾಗೇ ಬಾಕಿ ಇದೆ. ರಸ್ತೆ ಸಂಪರ್ಕ ಇಲ್ಲದೆ ಅನೇಕ ಪ್ರಯಾಣಿಕರು ಮಾರ್ಗ ಮಧ್ಯೆ ಸಿಲುಕಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯವೂ ನಡೆಯುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರುಣಾಚಲ ಪ್ರದೇಶದಲ್ಲೂ ಇದೇ ಸಮಸ್ಯೆ. ಲೋವರ್ ಸುಬಾನ್ಸಿರಿ ಜಿಲ್ಲೆಯಲ್ಲಿ ಇಟಾನಗರ ಮತ್ತು ಜಿರೋ ನಡುವೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿಯೂ ಭೂಕುಸಿತವಾಗಿದ್ದರಿಂದ ನೂರಾರು ವಾಹನಗಳು ಅರುಣಾಚಲ ಪ್ರದೇಶದಲ್ಲಿಯೇ ಸಿಲುಕಿವೆ. ಕರ್ಸಿಂಗ್ಸಾದಲ್ಲಿ ಭೂಮಿ ಕುಸಿದಿದ್ದರಿಂದ ಇಟಾನಗರದಿಂದ ಹೋಲೊಂಗಿ ಮತ್ತು ಗೋಹ್‌ಪುರ್‌ಗೆ ಹೋಗುವ ರಸ್ತೆಯೂ ಕಡಿತವಾಗಿತ್ತು.
ಇದನ್ನೂ ಓದಿ | ನೈಋತ್ಯ ಮುಂಗಾರು ಅಂಡಮಾನ್ ಪ್ರವೇಶ, ರಾಜ್ಯದಲ್ಲಿ ಇನ್ನೂ 4 ದಿನ ಭರ್ಜರಿ ಮಳೆ