ನವ ದೆಹಲಿ: ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ವಿರುದ್ಧ ಅಸ್ಸಾಂ ಯುವ ಕಾಂಗ್ರೆಸ್ ಮುಖ್ಯಸ್ಥೆ ಅಂಕಿತಾ ದತ್ತಾ (Angkita Dutta) ಅವರು ದೌರ್ಜನ್ಯದ ಆರೋಪ ಮಾಡಿದ್ದಾರೆ. ಹಾಗೇ, ನಾನೊಬ್ಬ ಮಹಿಳೆ ಎಂಬ ಕಾರಣಕ್ಕೆ ತಾರತಮ್ಯದಿಂದ ನೋಡುತ್ತಿದ್ದಾರೆ ಎಂದೂ ಹೇಳಿದ್ದಾರೆ. ‘ಕಳೆದ ಆರು ತಿಂಗಳಿನಿಂದ ಯುವ ಕಾಂಗ್ರೆಸ್ ರಾಷ್ಟ್ರೀಯ ಶ್ರೀನಿವಾಸ್ ಬಿವಿ ಮತ್ತು ಉಸ್ತುವಾರಿ ಕಾರ್ಯದರ್ಶಿ ವರ್ಧನ್ ಯಾದವ್ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಅದೆಷ್ಟೋ ಬಾರಿ ಇವರಿಬ್ಬರ ವಿರುದ್ಧ ನಮ್ಮ ಹಿರಿಯ ನಾಯಕರಿಗೆ ದೂರು ನೀಡಿದ್ದೇನೆ. ಆದರೆ ಇದುವರೆಗೂ ತನಿಖೆಗೆ ಕ್ರಮ ಕೈಗೊಂಡಿಲ್ಲ. ಯಾವ ಸಮಿತಿಯೂ ಇವರಿಬ್ಬರನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ಅಂಕಿತಾ ದತ್ತಾ ತಿಳಿಸಿದ್ದಾರೆ.
ರಾಯ್ಪುರದಲ್ಲಿ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಅಧಿವೇಶನದಲ್ಲಿ ಶ್ರೀನಿವಾಸ್ ಬಿವಿ ಅವರು ನನ್ನ ಬಳಿ ಬಂದು ‘ನೀನು ಏನು ಕುಡಿಯುತ್ತೀಯಾ? ವೋಡ್ಕಾ ಕುಡಿಯುತ್ತೀಯಾ?’ ಎಂದು ಕೇಳಿದರು. ನಿಜಕ್ಕೂ ನನಗೆ ಗಾಬರಿಯೇ ಆಯಿತು. ಏನು ಹೇಳಬೇಕು ಎಂದು ತೋಚಲಿಲ್ಲ. ಮೌನ ವಹಿಸಿದೆ’ ಎಂದು ಅಂಕಿತಾ ಎಎನ್ಐ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಅದಕ್ಕೂ ಮೊದಲು ಟ್ವೀಟ್ ಮಾಡಿದ್ದ ಅಂಕಿತಾ ದತ್ತಾ, ‘ಆರು ತಿಂಗಳಿಂದಲೂ ಶ್ರೀನಿವಾಸ್ ಬಿವಿ ಮತ್ತು ವರ್ಧನ್ ಯಾದವ್ ನನಗೆ ಕಿರುಕುಳ ನೀಡುತ್ತಿದ್ದರೂ, ನಾನು ಬಾಯಿಮುಚ್ಚಿಕೊಂಡು ಇದ್ದೆ. ಆದರೆ ನನ್ನ ಮೌಲ್ಯಗಳು ಮತ್ತು ಶಿಕ್ಷಣ ಇನ್ನು ಇದನ್ನೆಲ್ಲ ಸಹಿಸಲು ಅವಕಾಶ ಕೊಡುವುದಿಲ್ಲ. ನಮ್ಮ ನಾಯಕತ್ವ ಸಂಪೂರ್ಣ ಕಿವುಡಾಗಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಕೂಡ ಟ್ಯಾಗ್ ಮಾಡಿದ್ದಾರೆ.
ಶ್ರೀನಿವಾಸ್ ಬಿವಿ ಪ್ರತಿಕ್ರಿಯೆ ಏನು?
ಮೂಲತಃ ಕರ್ನಾಟಕದ ಭದ್ರಾವತಿಯವರಾದ ಶ್ರೀನಿವಾಸ್ ಬಿವಿ ಅವರು ತಮ್ಮ ವಿರುದ್ಧದ ಅಂಕಿತಾ ಆರೋಪವನ್ನು ಅಲ್ಲಗಳೆದಿದ್ದಾರೆ. ಆಕೆಗೆ ಲೀಗಲ್ ನೋಟಿಸ್ ಕೂಡ ಕೊಟ್ಟಿದ್ದಾರೆ. ಆಕೆ ನನ್ನ ಮಾನಹಾನಿ ಮಾಡುತ್ತಿದ್ದಾಳೆ. ಅಂಕಿತಾ ದತ್ತಾ ಅವರಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಬೇಕಿದೆ. ಹಾಗಾಗಿ ನೆಪ ಹುಡುಕುತ್ತಿದ್ದಾರೆ ಎಂದು ಹೇಳಿದ್ದಾರೆ. ‘ನನ್ನ ವಿರುದ್ಧ ಮಾಡಲಾದ ಆರೋಪಗಳೆಲ್ಲ ರಾಜಕೀಯ ಪ್ರೇರಿತ. ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾರೊಂದಿಗೆ ಅವರು ಸಂಪರ್ಕದಲ್ಲಿದ್ದಾರೆ. ಆಕೆ ಕೂಡಲೇ ಕ್ಷಮೆ ಕೇಳಬೇಕು’ ಎಂದಿದ್ದಾರೆ.
ಇದನ್ನೂ ಓದಿ: Viral Video: ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಜುಟ್ಟು ಹಿಡಿದು ಎಳೆದಾಡಿದ ದೆಹಲಿ ಪೊಲೀಸ್