ಲಖನೌ: 2005ರಲ್ಲಿ ನಡೆದಿದ್ದ ಬಿಎಸ್ಪಿ ಪಕ್ಷದ ಶಾಸಕ ರಾಜು ಪಾಲ್ ಹತ್ಯೆ ಕೇಸ್ನ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ (Umesh Pal Murder Case) ಕೊಲೆ ಕೇಸ್ಗೆ ಸಂಬಂಧಪಟ್ಟಂತೆ ಗ್ಯಾಂಗ್ಸ್ಟರ್/ರಾಜಕಾರಣಿ ಅತೀಕ್ ಅಹ್ಮದ್ನ ಸೋದರಮಾವ ಅಖ್ಲಾಕ್ ಅಹ್ಮದ್ನನ್ನು ಇಂದು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಈತನ ಪತ್ತೆಗಾಗಿ ಉತ್ತರ ಪ್ರದೇಶ ಸ್ಪೆಶಲ್ ಟಾಸ್ಕ್ ಫೋರ್ಸ್ (STF) ಮತ್ತು ಪ್ರಯಾಗ್ ರಾಜ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಉಮೇಶ್ ಪಾಲ್ ಹತ್ಯೆಯ ಬಗ್ಗೆ ಹಿಂದೆಯೂ ಹಲವು ಬಾರಿ ಅಖ್ಲಾಕ್ ಅಹ್ಮದ್ನನ್ನು ಉತ್ತರ ಪ್ರದೇಶ ಪೊಲೀಸರು ವಿಚಾರಣೆ ಮಾಡಿದ್ದಾರೆ. ಆದರೆ ಆತನನ್ನು ಅರೆಸ್ಟ್ ಮಾಡಿರಲಿಲ್ಲ.ಆದರೆ ಈ ಸಲ ಬಂಧಿಸಿದ್ದಾರೆ.
ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಆರೋಪಿಯಾಗಿರುವ ಅತೀಕ್ ಅಹ್ಮದ್ ಜೈಲುಪಾಲಾಗಿ ಹಲವು ವರ್ಷಗಳೇ ಕಳೆದಿವೆ. ಅದರಲ್ಲಿ 2006ರಲ್ಲಿ ಉಮೇಶ್ ಪಾಲ್ ಅಪಹರಣ ಮಾಡಿದ್ದ ಪ್ರಕರಣದಡಿ ಇತ್ತೀಚೆಗಷ್ಟೇ ಆತನಿಗೆ ಪ್ರಯಾಗ್ರಾಜ್ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೇ ವರ್ಷ ಫೆಬ್ರವರಿ 24ರಂದು ಉಮೇಶ್ ಪಾಲ್ನನ್ನು ಪ್ರಯಾಗ್ರಾಜ್ನಲ್ಲಿ ಗುಂಡಿಟ್ಟುಕೊಲ್ಲಲಾಗಿತ್ತು. ಉಮೇಶ್ ಪಾಲ್ ಹಂತಕರನ್ನು ಉತ್ತರ ಪ್ರದೇಶ ಪೊಲೀಸರು ಈಗಾಗಲೇ ಎನ್ಕೌಂಟರ್ನಲ್ಲಿ ಕೊಂದು ಹಾಕಿದ್ದಾರೆ.
ಇದನ್ನೂ ಓದಿ: Prayagraj Encounter: ಉಮೇಶ್ ಪಾಲ್ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿಯ ಎನ್‌ಕೌಂಟರ್
2005ರ ಜನವರಿ 25ರಂದು ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯೆಯಾಗುತ್ತಿದ್ದಂತೆ, ಆಗ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಉಮೇಶ್ ಪಾಲ್ ಪೊಲೀಸರ ಎದುರು ಹೇಳಿಕೆ ನೀಡಿ, ತಾವು ಈ ಹತ್ಯೆ ಕೇಸ್ನಲ್ಲಿ ಸಾಕ್ಷಿ ಹೇಳುತ್ತೇನೆ ಎಂದಿದ್ದರು. ಆದರೆ ಆಗ ಅತೀಕ್ ಅಹ್ಮದ್ನಿಂದ ಒತ್ತಡ ಹೇರಲಾಗಿತ್ತು. ಸಾಕ್ಷಿ ಹೇಳದಿರುವಂತೆ ಅತೀಹ್ ಅಹ್ಮದ್ ಹೇಳಿದ್ದ. ಉಮೇಶ್ ಪಾಲ್ ಮಾತು ಕೇಳದೆ ಇದ್ದಾಗ 2006ರ ಫೆಬ್ರವರಿ 28ರಂದು ಅವರನ್ನು ಅಪಹರಣ ಮಾಡಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಈ ವಿಚಾರವಾಗಿ ಉಮೇಶ್ ಪಾಲ್ ನೀಡಿದ್ದ ದೂರಿನ ಅನ್ವಯ 2007ರ ಜುಲೈ 5ರಂದು ಅತೀಕ್ ಅಹ್ಮದ್, ಆತನ ಸಹೋದರ ಖಾಲಿದ್ ಆಜಂ ಮತ್ತು ಇತರ ನಾಲ್ವರ ವಿರುದ್ಧ ಕೇಸ್ ಎಫ್ಐಆರ್ ದಾಖಲಾಗಿತ್ತು. ಸದ್ಯ ಈ ಅಪಹರಣ ಕೇಸ್ನಲ್ಲಿ ಅತೀಕ್ಗೆ ಜೀವಾವಧಿ ಶಿಕ್ಷೆಯಾಗಿದ್ದು, ಸಹೋದರ ಖಾಲಿದ್ನನ್ನು ಕೋರ್ಟ್ ಖುಲಾಸೆಗೊಳಿಸಿದೆ.