ಗ್ಯಾಂಗ್ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಇಂದು ಬೆಳಗ್ಗೆ ವಿಚಾರಣೆಗಾಗಿ ಪ್ರಯಾಗ್ರಾಜ್ ಕೋರ್ಟ್ನಲ್ಲಿ ಇದ್ದಾಗಲೇ ಮಗ ಅಸಾದ್ ಅಹ್ಮದ್ (Asad Encounter) ಎನ್ಕೌಂಟರ್ ಸುದ್ದಿ ಅವನ ಕಿವಿಗೆ ಬಿದ್ದಿದೆ. ಈ ವಿಷಯ ಕೇಳುತ್ತಿದ್ದಂತೆ ಅತೀಕ್ ದುಃಖದ ಕಟ್ಟೆ ಒಡೆದು, ಅಲ್ಲೇ ಕೋರ್ಟ್ನಲ್ಲಿಯೇ ದೊಡ್ಡದಾಗಿ ಅತ್ತಿದ್ದಾನೆ ಎಂದು ವರದಿಯಾಗಿದೆ. 2005ರಲ್ಲಿ ನಡೆದಿದ್ದ ರಾಜುಪಾಲ್ ಕೊಲೆ ಕೇಸ್ನಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಕೊಲೆ ಕೇಸ್ಗೆ ಸಂಬಂಧಪಟ್ಟಂತೆ ಇಂದು ಪ್ರಯಾಗ್ ರಾಜ್ ಕೋರ್ಟ್ನಲ್ಲಿ ಅತೀಕ್ ಅಹ್ಮದ್ ಮತ್ತು ಆತನ ತಮ್ಮ ಅಶ್ರಾಫ್ ವಿಚಾರಣೆಯಿತ್ತು. ಅಶ್ರಾಫ್ ಜೈಲಿನಲ್ಲಿ ಇಲ್ಲ, ಆದರೆ ಅತೀಕ್ ಗುಜರಾತ್ನ ಸಬರಮತಿ ಜೈಲಿನಲ್ಲಿದ್ದು, ಇಂದು ವಿಚಾರಣೆ ಹಿನ್ನೆಲೆಯಲ್ಲಿ ಅವನನ್ನು ನಿನ್ನೆಯೇ ಪ್ರಯಾಗ್ರಾಜ್ಗೆ ಕರೆತರಲಾಗಿತ್ತು. ಈತನ ಪುತ್ರ ಅಸಾದ್ ಮೇಲೆ ಯಾವುದೇ ಕ್ರಿಮಿನಲ್ ಕೇಸ್ಗಳೂ ಇರಲಿಲ್ಲ. ಆದರೆ ಉಮೇಶ್ ಪಾಲ್ ಹಂತಕರ ನೇತೃತ್ವ ವಹಿಸಿದ್ದು ಇವನೇ ಎಂದು ಹೇಳಲಾಗಿತ್ತು. ಹೀಗಾಗಿ ಯುಪಿ ಪೊಲೀಸರು ಅಸಾದ್ ಹೆಸರನ್ನು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿಸಿದ್ದರು.
ಇಂದು ಉತ್ತರ ಪ್ರದೇಶ ಪೊಲೀಸರು ಅಸಾದ್ ಅಹ್ಮದ್ ಜತೆಗೆ ಗುಲಾಮ್ ಎಂಬುವನನ್ನೂ ಎನ್ಕೌಂಟರ್ ಮಾಡಿದ್ದಾರೆ. ಉಮೇಶ್ ಪಾಲ್ ಕೊಲೆ ಆದಾಗಿನಿಂದಲೂ ಇವರಿಬ್ಬರೂ ತಲೆ ಮರೆಸಿಕೊಂಡಿದ್ದರು. ಇವರಿಬ್ಬರನ್ನು ಹುಡುಕಿಕೊಟ್ಟವರಿಗೆ ತಲಾ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದರು. ಎಲ್ಲಿಯೂ ಸಿಕ್ಕಿರಲಿಲ್ಲ. ಇಂದು ಝಾನ್ಸಿ ಬಳಿ ಇಬ್ಬರನ್ನೂ ಕೊಂದಿದ್ದಾರೆ.
ಇದನ್ನೂ ಓದಿ: Asad Ahmed Encounter: ಅತೀಕ್ ಅಹ್ಮದ್ ಮಗನನ್ನು ಕೊಂದ ಪೊಲೀಸರನ್ನು ಹೊಗಳಿದ ಉತ್ತರ ಪ್ರದೇಶ ಸಿಎಂ ಯೋಗಿ
ಇನ್ನು ಎನ್ಕೌಂಟರ್ ಮಾಡಿದ ಯುಪಿ ಸ್ಪೆಶಲ್ ಟಾಸ್ಕ್ ಫೋರ್ಸ್ನ ಮುಖ್ಯಸ್ಥ ಅಮಿತಾಬ್ ಯಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವು ಅಸಾದ್ ಮತ್ತು ಗುಲಾಮ್ನನ್ನು ಹುಡುಕಲು ಶುರು ಮಾಡಿ ಒಂದೂವರೆ ತಿಂಗಳಾಗಿತ್ತು. ಕಳೆದ ಬಾರಿಯಂತೂ ಐದು ನಿಮಿಷಗಳ ಅಂತರದಲ್ಲಿ ಇವರು ತಪ್ಪಿಸಿಕೊಂಡಿದ್ದರು. ಇಂದು ಝಾನ್ಸಿ ಬಳಿಯೂ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ, ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟರು. ಹಾಗಾಗಿ ಎನ್ಕೌಂಟರ್ ಮಾಡಬೇಕಾಯಿತು ಎಂದಿದ್ದಾರೆ.
ಅಶ್ರಾಫ್ ಮತ್ತು ಅತೀಕ್ ಇಬ್ಬರೂ ಕೋರ್ಟ್ನಿಂದ ವಾಪಸ್ ಹೋಗುವಾಗ ಪೊಲೀಸರ ಮೇಲೆ ದಾಳಿ ಮಾಡಿ, ಅವರಿಬ್ಬರನ್ನೂ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡು ಹೋಗುವ ಪ್ಲ್ಯಾನ್ನ್ನು ಅಸಾದ್ ಮತ್ತು ಗುಲಾಂ ಮಾಡಿದ್ದರು. ಇವರಿಬ್ಬರೂ ಬೈಕ್ನಲ್ಲಿ ಬಂದಿದ್ದರು. ಝಾನ್ಸಿ ಬಳಿ ಪೊಲೀಸರು ಗಾಡಿ ನಿಲ್ಲಿಸುವಂತೆ ಹೇಳಿದ್ದಕ್ಕೆ, ಉಡಾಫೆ ತೋರಿಸಿ ಅವರ ಮೇಲೆ ಫೈರಿಂಗ್ ಶುರು ಮಾಡಿದರು. ಆಗ ಎಸ್ಟಿಎಫ್ ಸಿಬ್ಬಂದಿ ಪ್ರತಿ ದಾಳಿ ಮಾಡಿದ್ದಾರೆ. ಅವರ ಬಳಿ ಹಲವು ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳಿದ್ದು, ಎಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದೂ ಹೇಳಲಾಗಿದೆ.