Site icon Vistara News

Atiq Ahmed: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಂಬಂಧಿಯ ಆಸ್ತಿ ಕಬಳಿಸಿದ್ದ ಡಾನ್ ಅತೀಕ್ ಅಹ್ಮದ್!

Atiq Ahmed encroached property of Sonia Gandhi's relative!

ಪ್ರಯಾಗ್‌ರಾಜ್: ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಪೊಲೀಸ್ ಕಣ್ಗಾವಲಿನಲ್ಲೇ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಗ್ಯಾಂಗ್‌ಸ್ಟರ್- ರಾಜಕಾರಣಿ ಅತೀಕ್ ಅಹ್ಮದ್ (Atiq Ahmed) ಬೇರೆಯವರ ಆಸ್ತಿಯನ್ನು ಕಬಳಿಸುವುದರಲ್ಲಿ ಕುಖ್ಯಾತನಾಗಿದ್ದ. ಈಗ ಗೊತ್ತಾಗಿರುವ ಮಾಹಿತಿಗಳ ಪ್ರಕಾರ, ಅತೀಕ್ ಅಹ್ಮದ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಸಂಬಂಧಿಯ ಜಮೀನು ಕೂಡ ಕಬಳಿಸಿದ್ದ ಎನ್ನಲಾಗಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿದ್ದ ವೀರಾ ಗಾಂಧಿ ಅವರ ಆಸ್ತಿಯನ್ನು ಅತೀಕ್ ಅಹ್ಮದ್ 2007ರಲ್ಲಿ ಕಬಳಸಿದ್ದ. ಸೋನಿಯಾ ಗಾಂಧಿ ಅವರ ಮಾವ ಫಿರೋಜ್ ಗಾಂಧಿ ಅವರ ಕುಟುಂಬದ ಸದಸ್ಯೆ ವೀರಾ ಅವರು ಪ್ರಯಾಗ‌ರಾಜ್ ನಗರದಲ್ಲಿ ಶ್ರೀಮಂತರೇ ಹೆಚ್ಚಾಗಿರುವ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಆಸ್ತಿ ಹೊಂದಿದ್ದರು. ವೀರಾ ಗಾಂಧಿ ಅವರು ಸೋನಿಯಾ ಗಾಂಧಿ ಅವರ ಮಾವ ಫಿರೋಜ್ ಗಾಂಧಿ ಅವರ ಭಾವನ ಸೋದರಳಿಯನ ಪತ್ನಿಯಾಗಿದ್ದಾರೆ. ಸೋನಿಯಾ ಗಾಂಧಿ ಅವರ ಮಧ್ಯಪ್ರವೇಶದಿಂದಾಗಿ ವೀರಾ, ಆತೀಕ್ ಅಹ್ಮದ್‌ನಿಂದ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.

ಅತೀಕ್ ಅಹ್ಮದ್​ ಹಂತಕರು 4ದಿನ ಪೊಲೀಸ್ ಕಸ್ಟಡಿಗೆ

ಉತ್ತರ ಪ್ರದೇಶದ ಗ್ಯಾಂಗ್​ಸ್ಟರ್​ ಅತೀಕ್​ ಅಹ್ಮದ್ (Atiq Ahmad) ಮತ್ತು ಆತನ ಸೋದರ ಅಶ್ರಾಫ್​​ನನ್ನು ಕೊಂದ ಲೋವ್ಲೇಶ್​ ತಿವಾರಿ (22), ಅರುಣ್​ ಮೌರ್ಯಾ (18) ಮತ್ತು ಸನ್ನಿ ಸಿಂಗ್​ (23)ನನ್ನು ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಪ್ರಯಾಗ್​ರಾಜ್​ನ ಚೀಫ್ ಜ್ಯುಡಿಶಿಯಲ್​ ಮ್ಯಾಜಿಸ್ಟ್ರೇಟ್​ ಆದೇಶ ಹೊರಡಿಸಿದ್ದಾರೆ. ಅವರ ವಿಚಾರಣೆ ಮತ್ತೆ ಏಪ್ರಿಲ್ 23ರಂದು ಕೋರ್ಟ್​ನಲ್ಲಿ ನಡೆಯಲಿದೆ.

ಲೋವ್ಲೇಶ್​, ಅರುಣ್​ ಮತ್ತು ಸನ್ನಿ ಸೇರಿಕೊಂಡು ಅತೀಕ್ ಮತ್ತು ಅಶ್ರಾಫ್​​ನನ್ನು ಮಾಧ್ಯಮ, ಪೊಲೀಸರ ಎದುರೇ ಕೊಂದಿದ್ದಾರೆ. ಅವರನ್ನು ಸ್ಥಳದಲ್ಲೇ ಬಂಧಿಸಲಾಗಿತ್ತು. ಅವರಿನ್ನೂ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಮತ್ತೆ ನಾಲ್ಕು ದಿನಗಳ ಕಾಲ ಹಂತಕರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಎಲ್ಲ ಪ್ರಶ್ನೆಗಳಿಗೂ ಉತ್ತರ ಪಡೆಯುತ್ತೇವೆ ಎಂದು ಉತ್ತರ ಪ್ರದೇಶ ಪೊಲೀಸ್​ ವಿಶೇಷ ಟಾಸ್ಕ್​ ಫೋರ್ಸ್​​ನ ಡಿಐಜಿ ಆನಂದ್​ ದೇವ್ ತಿವಾರಿ ಹೇಳಿದ್ದಾರೆ. ‘ಅವರು ಯಾವ ಗ್ಯಾಂಗ್​ಗೆ ಸೇರಿದವರು? ಅವರಿಗೆ ಶಸ್ತ್ರಾಸ್ತ್ರ ಪೂರೈಕೆ ಎಲ್ಲಿಂದ ಆಗುತ್ತಿದೆ? ಅತೀಕ್​ ಮತ್ತು ಅಶ್ರಾಫ್ ಜತೆಗೆ ಏನಾದರೂ ಶತ್ರುತ್ವ ಇತ್ತಾ? ಶೂಟ್​ ಮಾಡಲು ನಿಜವಾದ ಕಾರಣ ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ನಿಖರ ಉತ್ತರ ಪಡೆಯುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಬ್ಬಾತ ಡ್ರಗ್​ ಅಡಿಕ್ಟ್​, ಇನ್ನೊಬ್ಬ ಅನಾಥ, ಮತ್ತೊಬ್ಬನ ಮೈಮೇಲೆ 17ಕ್ರಿಮಿನಲ್ ಕೇಸ್​ಗಳು; ಅತೀಕ್ ಅಹ್ಮದ್​ ಹಂತಕರು ಮನೆ ಬಿಟ್ಟವರು

2005ರಲ್ಲಿ ಬಹುಜನ ಸಮಾಜ ಪಾರ್ಟಿ ಶಾಸಕ ರಾಜು ಪಾಲ್​ ಮತ್ತು ಅವರ ಹತ್ಯೆಯ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಅತೀಕ್ ಅಹ್ಮದ್​ ಮತ್ತು ಅವರ ಸಹೋದರ ಅಶ್ರಾಫ್​ ಅಹ್ಮದ್​ನನ್ನು ಏಪ್ರಿಲ್​ 15ರಂದು ಪ್ರಯಾಗ್​ರಾಜ್​​ನಲ್ಲಿರುವ ವೈದ್ಯಕೀಯ ಕಾಲೇಜಿಗೆ, ಆರೋಗ್ಯ ತಪಾಸಣೆಗಾಗಿ ಪೊಲೀಸರು ಕರೆದೊಯ್ಯುತ್ತಿದ್ದರು. ಅಲ್ಲಿ ಮಾಧ್ಯಮದವರೂ ಅನೇಕರು ಇದ್ದರು. ಇವರೆಲ್ಲರೂ ಇರುವಾಗಲೇ ಹಿಂದಿನಿಂದ ಬಂದ ಈ ಮೂವರು ಅವರಿಬ್ಬರ ತಲೆಗೆ ಗುಂಡಿಟ್ಟು ಕೊಂದಿದ್ದರು.

Exit mobile version