ಲಖನೌ: ಉತ್ತರ ಪ್ರದೇಶದ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ (Atiq Ahmad) ಮತ್ತು ಆತನ ಸೋದರ ಅಶ್ರಾಫ್ನನ್ನು ಕೊಂದ ಲೋವ್ಲೇಶ್ ತಿವಾರಿ (22), ಅರುಣ್ ಮೌರ್ಯಾ (18) ಮತ್ತು ಸನ್ನಿ ಸಿಂಗ್ (23)ನನ್ನು ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಪ್ರಯಾಗ್ರಾಜ್ನ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದ್ದಾರೆ. ಅವರ ವಿಚಾರಣೆ ಮತ್ತೆ ಏಪ್ರಿಲ್ 23ರಂದು ಕೋರ್ಟ್ನಲ್ಲಿ ನಡೆಯಲಿದೆ.
ಲೋವ್ಲೇಶ್, ಅರುಣ್ ಮತ್ತು ಸನ್ನಿ ಸೇರಿಕೊಂಡು ಅತೀಕ್ ಮತ್ತು ಅಶ್ರಾಫ್ನನ್ನು ಮಾಧ್ಯಮ, ಪೊಲೀಸರ ಎದುರೇ ಕೊಂದಿದ್ದಾರೆ. ಅವರನ್ನು ಸ್ಥಳದಲ್ಲೇ ಬಂಧಿಸಲಾಗಿತ್ತು. ಅವರಿನ್ನೂ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಮತ್ತೆ ನಾಲ್ಕು ದಿನಗಳ ಕಾಲ ಹಂತಕರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಎಲ್ಲ ಪ್ರಶ್ನೆಗಳಿಗೂ ಉತ್ತರ ಪಡೆಯುತ್ತೇವೆ ಎಂದು ಉತ್ತರ ಪ್ರದೇಶ ಪೊಲೀಸ್ ವಿಶೇಷ ಟಾಸ್ಕ್ ಫೋರ್ಸ್ನ ಡಿಐಜಿ ಆನಂದ್ ದೇವ್ ತಿವಾರಿ ಹೇಳಿದ್ದಾರೆ. ‘ಅವರು ಯಾವ ಗ್ಯಾಂಗ್ಗೆ ಸೇರಿದವರು? ಅವರಿಗೆ ಶಸ್ತ್ರಾಸ್ತ್ರ ಪೂರೈಕೆ ಎಲ್ಲಿಂದ ಆಗುತ್ತಿದೆ? ಅತೀಕ್ ಮತ್ತು ಅಶ್ರಾಫ್ ಜತೆಗೆ ಏನಾದರೂ ಶತ್ರುತ್ವ ಇತ್ತಾ? ಶೂಟ್ ಮಾಡಲು ನಿಜವಾದ ಕಾರಣ ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ನಿಖರ ಉತ್ತರ ಪಡೆಯುತ್ತೇವೆ ಎಂದು ಹೇಳಿದ್ದಾರೆ.
2005ರಲ್ಲಿ ಬಹುಜನ ಸಮಾಜ ಪಾರ್ಟಿ ಶಾಸಕ ರಾಜು ಪಾಲ್ ಮತ್ತು ಅವರ ಹತ್ಯೆಯ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಾಫ್ ಅಹ್ಮದ್ನನ್ನು ಏಪ್ರಿಲ್ 15ರಂದು ಪ್ರಯಾಗ್ರಾಜ್ನಲ್ಲಿರುವ ವೈದ್ಯಕೀಯ ಕಾಲೇಜಿಗೆ, ಆರೋಗ್ಯ ತಪಾಸಣೆಗಾಗಿ ಪೊಲೀಸರು ಕರೆದೊಯ್ಯುತ್ತಿದ್ದರು. ಅಲ್ಲಿ ಮಾಧ್ಯಮದವರೂ ಅನೇಕರು ಇದ್ದರು. ಇವರೆಲ್ಲರೂ ಇರುವಾಗಲೇ ಹಿಂದಿನಿಂದ ಬಂದ ಈ ಮೂವರು ಅವರಿಬ್ಬರ ತಲೆಗೆ ಗುಂಡಿಟ್ಟು ಕೊಂದಿದ್ದರು.
ಫೆಬ್ರವರಿಯಲ್ಲಿ ನಡೆದಿದ್ದ ಉಮೇಶ್ ಪಾಲ್ ಹತ್ಯೆ ತನ್ನದೇ ಸಂಚು ಎಂದು ಅತೀಕ್ ಒಪ್ಪಿಕೊಂಡಿದ್ದ. ಅದರ ಮರುದಿನವೇ ಇದೇ ಕೇಸ್ನಲ್ಲಿ ಬೇಕಾಗಿದ್ದ ಅವನ ಮಗ ಅಸಾದ್ ಅಹ್ಮದ್ ಎನ್ಕೌಂಟರ್ ಆಗಿತ್ತು. ಏಪ್ರಿಲ್ 13ರಂದು ಯುಪಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ ಅಸಾದ್ ಅಹ್ಮದ್ ಅಂತ್ಯಕ್ರಿಯೆಯಾಗಿ ಮರುದಿನವೇ ಅತೀಕ್ ಅಹ್ಮದ್ ಕೂಡ ಪ್ರಾಣಬಿಟ್ಟಿದ್ದಾನೆ. ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಪತ್ನಿ ಶೈಷ್ಟಾ ಪರ್ವೀನ್ ಮತ್ತು ಗುಡ್ಡು ಮುಸ್ಲಿಂ ಎಂಬಾತ ಪೊಲೀಸರಿಗೆ ಬೇಕಾಗಿದ್ದು, ಇವರಿಬ್ಬರೂ ನಾಪತ್ತೆಯಾಗಿದ್ದಾರೆ. ಶೀಘ್ರವೇ ಬಂಧಿಸುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.