ಲಖನೌ: ಉತ್ತರ ಪ್ರದೇಶ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ (Atiq Ahmed murder) ಮತ್ತು ಅವನ ತಮ್ಮ ಅಶ್ರಫ್ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಭಾರತೀಯ ಉಪಖಂಡದಲ್ಲಿ ಸಕ್ರಿಯವಾಗಿರುವ ಅಲ್ ಖೈದಾ (Al Qaeda) ಭಯೋತ್ಪಾದಕರು ಬೆದರಿಕೆಯನ್ನೊಡ್ಡಿದ್ದಾರೆ. ಇಂದು ರಂಜಾನ್ ಹಬ್ಬದ ನಿಮಿತ್ತ ಸಂದೇಶ ಬಿಡುಗಡೆ ಮಾಡಿರುವ ಉಗ್ರರು, ಅತೀಕ್ ಅಹ್ಮದ್ ಮತ್ತು ಅಶ್ರಫ್ ನನ್ನು ಹುತಾತ್ಮರು ಎಂದು ಕರೆದಿದ್ದಾರೆ. ಈದ್ ಅಲ್ ಫಿತರ್ ಹಿನ್ನೆಲೆಯಲ್ಲಿ, ಅಲ್ ಕೈದಾ ಉಗ್ರಸಂಘಟನೆಯ ಪ್ರಚಾರಕ ಮಾಧ್ಯಮ ವಿಭಾಗವಾದ ಅಸ್ ಸಾಹಾಬ್ ನಿಂದ ಏಳು ಪುಟಗಳ ಒಂದು ಮ್ಯಾಗ್ ಜಿನ್ ಬಿಡುಗಡೆ ಮಾಡಲಾಗಿದ್ದು ‘ಮುಸ್ಲಿಮರಿಗೆ ಸ್ವಾತಂತ್ರ್ಯ ಕೊಡಿಸುತ್ತೇವೆ’ ಎಂದೂ ಉಲ್ಲೇಖ ಮಾಡಲಾಗಿದೆ.
ತಿಹಾರ್ ಜೈಲಿನಲ್ಲಿರುವ ಅಲ್ ಖೈದಾ ಉಗ್ರರನ್ನು ಬಿಡಗಡೆ ಮಾಡುವಂತೆ ಪರೋಕ್ಷವಾಗಿ ಬೆದರಿಕೆಯೊಡ್ಡಿದ ಉಗ್ರರು, ‘ನಾವು ನಮ್ಮ ಮೇಲೆ ದಬ್ಬಾಳಿಕೆ ಮಾಡುವವರ ಕೈಯನ್ನು ಕಟ್ ಮಾಡುತ್ತೇವೆ. ಅವರು ವೈಟ್ಹೌಸ್ನಲ್ಲಿ ಇರುವವರೇ ಆಗಿರಬಹುದು, ದೆಹಲಿ ಪ್ರಧಾನ ಮಂತ್ರಿ ಕಚೇರಿಯಲ್ಲಿರುವವರು ಆಗಿರಬಹುದು ಅಥವಾ ರಾವಲ್ಪಿಂಡಿಯ ಮಿಲಿಟರಿ ಸ್ಟೇಶನ್ನಲ್ಲಿ ಇರುವವರೇ ಆಗಿರಬಹುದು. ಯಾರನ್ನೂ ಬಿಡುವುದಿಲ್ಲ. ಟೆಕ್ಸಾಸ್ನಿಂದ ತಿಹಾರ್ವರೆಗೆ, ತಿಹಾರ್ನಿಂದ ಅಯೋಧ್ಯೆಯವರೆಗೆ ಎಲ್ಲ ಮುಸ್ಲಿಮ್ ಸಹೋದರ-ಸಹೋದರಿಯರನ್ನೂ ನಾವು ಸಂಕೋಲೆಯಿಂದ ಬಿಡಿಸುತ್ತೇವೆ, ಅವರಿಗೆ ಸ್ವಾತಂತ್ರ್ಯ ಕೊಡುತ್ತೇವೆ’ ಎಂದು ಅಲ್ ಖೈದಾ ಹೇಳಿದೆ.
ಇದನ್ನೂ ಓದಿ: ಅತೀಕ್ ಅಹ್ಮದ್ ಹಂತಕರು 4ದಿನ ಪೊಲೀಸ್ ಕಸ್ಟಡಿಗೆ; ಪತ್ನಿ ಶೈಷ್ಟಾ ಪರ್ವೀನ್ ಪತ್ತೆಗೆ ಬಲೆ ಬೀಸಿರುವ ಉತ್ತರ ಪ್ರದೇಶ ಪೊಲೀಸ್
2005ರಲ್ಲಿ ನಡೆದಿದ್ದ ಬಿಎಸ್ಪಿ ಶಾಸಕ ರಾಜುಪಾಲ್ ಹತ್ಯೆ ಕೇಸ್ನಲ್ಲಿ ಜೈಲುಪಾಲಾಗಿದ್ದ ಗ್ಯಾಂಗ್ಸ್ಟರ್/ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವನ ತಮ್ಮ ಅಶ್ರಫ್ ಅಹ್ಮದ್ನನ್ನು ಏಪ್ರಿಲ್ 15ರಂದು ಪ್ರಯಾಗ್ರಾಜ್ನ ವೈದ್ಯಕೀಯ ಕಾಲೇಜಿಗೆ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ, ಪತ್ರಕರ್ತರಂತೆ ಸೋಗು ಹಾಕಿಕೊಂಡು ಬಂದ ಮೂವರು ಅತೀಕ್ ಮತ್ತು ಅಶ್ರಫ್ನನ್ನು ಕೊಂದಿದ್ದರು. ಪೊಲೀಸರು, ಮಾಧ್ಯಮದವರ ಎದುರಲ್ಲೇ ಭಯಂಕರವಾಗಿ ಈ ಹತ್ಯೆ ನಡೆದುಹೋಗಿದೆ. ಈ ಹತ್ಯೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಂದು ಡ್ಯೂಟಿಯಲ್ಲಿದ್ದ ಐವರು ಪೊಲೀಸರನ್ನು ಈಗಾಗಲೇ ಅಮಾನತು ಕೂಡ ಮಾಡಲಾಗಿದೆ. ಅತೀಕ್ ಮತ್ತು ಅಶ್ರಫ್ನನ್ನು ಶೂಟ್ ಮಾಡಿದ ಮೂವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.