Site icon Vistara News

ಔರಂಗಾಬಾದ್‌ಗೆ ಸಂಭಾಜಿನಗರವೆಂದು ನಾಮಕರಣ ಮಾಡಿದ ಮಹಾ ಸರ್ಕಾರ; ಶಿಂಧೆ ಬಣಕ್ಕೆ ತಿರುಗೇಟು?

Maha Cabinet Renames Aurangabad

ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್‌ ನಗರದ ಹೆಸರನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡಲಾಗಿದೆ. ಹಾಗೇ, ಉಸ್ಮಾನಾಬಾದ್‌ನ್ನು ಧಾರಾಶಿವ್‌ ಆಗಿ ಬದಲಿಸಲಾಗಿದೆ. ಇವೆರಡೂ ನಗರಗಳ ಮರುನಾಮಕರಣದ ಪ್ರಸ್ತಾವನೆಗೆ ಇಂದು ಉದ್ಧವ್‌ ಠಾಕ್ರೆ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಈಗಾಗಲೇ ಶಿವಸೇನೆ ಎರಡು ಬಣಗಳಾಗಿವೆ. ಅತ್ತ ಅಸ್ಸಾಂನ ಗುವಾಹಟಿಯಲ್ಲಿರುವ ಬಂಡಾಯ ನಾಯಕ ಏಕನಾಥ್‌ ಶಿಂಧೆ, “ಉದ್ಧವ್‌ ಠಾಕ್ರೆಯವರು ಕಾಂಗ್ರೆಸ್‌ ಮತ್ತು ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಶಿವಸೇನೆಯ ಮೂಲಸಿದ್ಧಾಂತವಾದ ಹಿಂದುತ್ವವನ್ನು ಮರೆಯುತ್ತಿದ್ದಾರೆ” ಎಂದು ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ ಉದ್ಧವ್‌ ಠಾಕ್ರೆ ತಮ್ಮ ಬೆಂಬಲಿಗ ಸಚಿವರೊಂದಿಗೆ ಸಭೆ ಸೇರಿ ಎರಡು ನಗರಗಳಿಗೆ ಹಿಂದು ಹೆಸರನ್ನು ಇಟ್ಟಿದ್ದು ಮಹತ್ವದ ಬೆಳವಣಿಗೆ ಎನ್ನಿಸಿದೆ. ಇದು ಏಕನಾಥ್‌ ಶಿಂಧೆ ಬಣ ಮಾಡಿದ್ದ ಆರೋಪಕ್ಕೆ ತಿರುಗೇಟು ಎಂದೇ ಹೇಳಲಾಗುತ್ತಿದೆ.

ಈಗಿರುವ ಔರಂಗಾಬಾದ್‌ಗೆ ಆ ಹೆಸರು ಬಂದಿದ್ದು 17ನೇ ಶತಮಾನದಲ್ಲಿ, ಮೊಘಲ್‌ ದೊರೆ ಔರಂಗಜೇಬ ಈ ಪ್ರದೇಶವನ್ನು ಆಳುತ್ತಿದ್ದಾಗ. ಆದರೆ ಹೆಸರು ಬದಲಿಸಬೇಕು, ಇಲ್ಲಿಗೆ ಸಂಭಾಜಿ ಹೆಸರು ಇಡಬೇಕು ಎಂಬುದು ಶಿವಸೇನೆ ನಾಯಕರ ಬಹುಕಾಲದ ಬೇಡಿಕೆಯಾಗಿತ್ತು. ಆದರೆ ಅದು ಈಡೇರಿರಲಿಲ್ಲ. ಸದ್ಯ ಸರ್ಕಾರವೇ ಅತಂತ್ರವಾಗಿದೆ. ಉದ್ಧವ್ ಠಾಕ್ರೆ ಸಿಎಂ ಹುದ್ದೆ ಎಷ್ಟು ದಿನ ಉಳಿಯುತ್ತದೆ ಎಂಬುದೇ ಅಸ್ಪಷ್ಟ. ಮಹಾ ರಾಜಕೀಯ ಅಸ್ಥಿರತೆ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿರುವುದರಿಂದ ಸದ್ಯ ಅವರಿಗೆ ರಿಲೀಫ್‌ ಎಂದು ಹೇಳಬಹುದು. ಇಂಥ ಹೊತ್ತಲ್ಲಿ ಅವಸರದಲ್ಲಿ ಎರಡು ನಗರಗಳ ಹೆಸರನ್ನು ಬದಲಿಸಿದ್ದು ವಿಶೇಷ. ಇಷ್ಟೇ ಅಲ್ಲ, ನವೀಮುಂಬೈ ಏರ್‌ಪೋರ್ಟ್‌ಗೆ ಹಿರಿಯ ರಾಜಕಾರಣಿ ಡಿ.ಬಿ ಪಾಟೀಲ್‌ ಹೆಸರಿಡಲೂ ಸರ್ಕಾರ ಮುಂದಾಗಿದೆ. ತುಂಬ ನಿರ್ಣಾಯಕ ಹಂತದಲ್ಲಿ ಮಹಾರಾಷ್ಟ್ರ ಸರ್ಕಾರ ಇಂಥ ತೀರ್ಮಾನ ಮಾಡುತ್ತಿದೆ.

ಜೂ.8ರಂದು ಔರಂಗಾಬಾದ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಉದ್ಧವ್‌ ಠಾಕ್ರೆ “ಹಿಂದುತ್ವ ಶಿವಸೇನೆಯ ಉಸಿರು. ಔರಂಗಾಬಾದ್‌ಗೆ ಸಂಭಾಜಿ ಹೆಸರು ಇಡುವುದಾಗಿ ಹಿಂದೆ ಬಾಳಾ ಸಾಹೇಬ್‌ ಠಾಕ್ರೆ ಭರವಸೆ ಕೊಟ್ಟಿದ್ದರು. ಅದು ಸುಳ್ಳಾಗಲು ನಾನು ಬಿಡುವುದಿಲ್ಲ. ಹೀಗಾಗಿ ಖಂಡಿತ ಅದಕ್ಕೆ ಸಂಭಾಜಿನಗರವೆಂದು ಮರುನಾಮಕರಣ ಆಗುತ್ತದೆ” ಎಂದಿದ್ದರು. ಅದರಂತೆ ನಡೆದುಕೊಂಡಿದ್ದಾರೆ. ಇನ್ನು ನಗರಗಳ ಹೆಸರು ಬದಲಿಸಲು ಸಂಪುಟದಲ್ಲಿದ್ದ ಕಾಂಗ್ರೆಸ್‌ ಸಚಿವರು ಕೆಲವರು ವಿರೋಧಿಸಿದ್ದಾರೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮುಂದಾದ ಬಿಜೆಪಿ; ಏಕನಾಥ್‌ ಶಿಂಧೆಗೆ ಉಪಮುಖ್ಯಮಂತ್ರಿ ಹುದ್ದೆ ಆಫರ್‌

Exit mobile version