ಕೋಲ್ಕತ್ತ: ಉತ್ತರ ದಿನಾಜ್ ಪುರ ಜಿಲ್ಲೆಯ ಕಾಳಿಯಾಗಂಜ್ ಎಂಬಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಹತ್ತನೇ ತರಗತಿ ಬಾಲಕಿಯೊಬ್ಬಳ ಸಾವು, ಅಲ್ಲಿ ದೊಡ್ಡಮಟ್ಟದ ಪ್ರತಿಭಟನೆಗೆ (Violence in Bengal) ಕಾರಣವಾಗಿತ್ತು. ಗುರುವಾರ ಸಂಜೆಯಿಂದ ನಾಪತ್ತೆಯಾದ ಆಕೆ ಬಳಿಕ ಶವವಾಗಿ ಪತ್ತೆಯಾಗಿದ್ದಳು. ಅವಳ ಮೈಮೇಲೆ ಗಾಯದ ಗುರುತುಗಳು ಇದ್ದವು. ಶವದ ಪಕ್ಕದಲ್ಲಿ ಒಂದು ವಿಷದ ಬಾಟಲಿಯೂ ಸಿಕ್ಕಿತ್ತು. ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಆಗಿದೆ. ಬಳಿಕ ಆಕೆಯನ್ನು ಹತ್ಯೆ ಮಾಡಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ, ರಸ್ತೆಗಳನ್ನು ಬ್ಲಾಕ್ ಮಾಡಿದ್ದರು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಟೈಯರ್ ಗಳಿಗೆ ಬೆಂಕಿ ಹಚ್ಚಿದ್ದರು. ಅವರನ್ನು ನಿಯಂತ್ರಣ ಮಾಡಲು ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಮಾಡಿದ್ದರು.
ಇದೀಗ ಬಾಲಕಿಯ ಶವಪರೀಕ್ಷೆ ವರದಿ ಹೊರಬಿದ್ದಿದೆ. ಬಾಲಕಿ ಮೃತಪಟ್ಟಿದ್ದು ಗಾಯಗಳಿಂದ ಅಲ್ಲ. ಶವದ ಮೇಲೆ ಪತ್ತೆಯಾದವು ಯಾವವೂ ಮಾರಣಾಂತಿಕ ಗಾಯಗಳಲ್ಲ. ಆಕೆಯ ಸಾವಿಗೆ ದೇಹದೊಳಗೆ ಸೇರಿದ್ದ ವಿಷದ ಅಂಶ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಅತ್ಯಾಚಾರ ಆಗಿದ್ದು ಹೌದೋ? ಅಲ್ಲವೋ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಈ ಬಗ್ಗೆ ವೈದ್ಯರಿಂದ ನಾವು ಮಾಹಿತಿ ಪಡೆಯುತ್ತೇವೆ ಎಂದು ಪೊಲೀಸ್ ಅಧಿಕಾರಿ ಸನಾ ಅಕ್ತರ್ ತಿಳಿಸಿದ್ದಾರೆ. ಹಾಗೇ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿದ್ದೇವೆ. ಅದರಲ್ಲಿ 20 ವರ್ಷದ ಯುವಕನನ್ನು ಮುಖ್ಯ ಆರೋಪಿ ಎಂದು ಪರಿಗಣಿಸಲಾಗಿದೆ. ಈ ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Video: 10ನೇ ತರಗತಿ ವಿದ್ಯಾರ್ಥಿನಿ ಶವವನ್ನು ಹಿಡಿದುಕೊಂಡು ಓಡಿದ ಪೊಲೀಸ್; ಸ್ಥಳೀಯರಿಂದ ಕಲ್ಲು ತೂರಾಟ, ಪ್ರತಿಭಟನೆ
ಈ ಕಾಳಿಯಾಗಂಜ್ ಇರುವುದು ಪಶ್ಚಿಮ ಬಂಗಾಳ-ಬಾಂಗ್ಲಾದೇಶ ಗಡಿಯಿಂದ 18 ಕಿಮೀ ದೂರದಲ್ಲಿ. ಬಾಲಕಿಯ ಶವ ಒಂದು ಕಾಲುವೆಯಲ್ಲಿ ಸಿಕ್ಕ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿತ್ತು. ಅವರು ಬರುವಷ್ಟರಲ್ಲಿ ಸ್ಥಳೀಯರ ಪ್ರತಿಭಟನೆಯೂ ಶುರುವಾಗಿತ್ತು. ಅಲ್ಲಿಗೆ ಬಂದ ಪೊಲೀಸರು ಹುಡುಗಿಯ ಶವವನ್ನು ಎತ್ತಿಕೊಂಡು ರಸ್ತೆಯಲ್ಲಿ ಓಡಿದ್ದರು. ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಟೀಕೆ ವ್ಯಕ್ತವಾಗಿತ್ತು. ಬಿಜೆಪಿ ನಾಯಕರಾದ ಸುವೇಂದು ಅಧಿಕಾರಿ, ಅಮಿತ್ ಮಾಳವಿಯಾ ಮತ್ತಿತರರು ಟ್ವೀಟ್ ಮಾಡಿ, ಪೊಲೀಸರ ವರ್ತನೆಯನ್ನು ಖಂಡಿಸಿದ್ದರು.