ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸೋನಮಾರ್ಗ್‌ನ ಸರ್ಬಲ್ ಪ್ರದೇಶದಲ್ಲಿ ಗುರುವಾರ ಹಿಮಪಾತ (Avalanche) ಉಂಟಾಗಿದೆ. ಜೋಜಿಲಾ ಸುರಂಗದಲ್ಲಿ ಹೈದರಾಬಾದ್ ಮೂಲದ ಮೆಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫಾಸ್ಟ್ರಕ್ಚರ್ (ಎಂಇಐಎಲ್) ಸಂಸ್ಥೆ ಕಾಮಗಾರಿ ನಡೆಸುತ್ತಿದ್ದು, ಅದೇ ಸ್ಥಳದಲ್ಲಿ ಹಿಮಪಾತ ಉಂಟಾಗಿದೆ. ಘಟನೆಯಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಕಾಣೆಯಾಗಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: Earthquake In Delhi | ದೆಹಲಿ, ಜಮ್ಮು ಕಾಶ್ಮೀರದಲ್ಲಿ ಭೂಕಂಪ, ಜನರಲ್ಲಿ ಹೆಚ್ಚಿದ ಆತಂಕ
ಹಿಮದಡಿ ಸಿಲುಕಿದ್ದ ಕಾರ್ಮಿಕನ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಪೊಲೀಸರು, ಎಸ್‌ಡಿಆರ್‌ಎಫ್ ತಂಡ, ಬೀಕಾನ್ ತಂಡ, ಎಂಇಐಎಲ್ ಮತ್ತು ಸೇನೆಯು ಹಿಮವನ್ನು ತೆಗೆಯುವ ಕೆಲಸ ಮಾಡುತ್ತಿದೆ. ಸ್ಥಳದಲ್ಲಿ ವೈದ್ಯಕೀಯ ತಂಡ ಹಾಗೂ ಆಂಬುಲೆನ್ಸ್ ಅನ್ನೂ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಬೀಳಬೇಕಿದೆ.
ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಗುಂಡ್ ಪ್ರದೇಶದ ತಹಸೀಲ್ದಾರರು ಎಚ್ಚರಿಕೆ ನೀಡಿದ್ದರು. ಕಣಿವೆ ಪ್ರದೇಶ, ಹಿಮಪಾತದ ಸಾಧ್ಯತೆಯಿರುವಂತಹ ಪ್ರದೇಶಕ್ಕೆ ತೆರಳಬೇಡಿ ಎಂದು ಜನರಿಗೆ ಎಚ್ಚರಿಕೆ ನೀಡಲಾಗಿತ್ತು. ಜ.12 ಮತ್ತು 13ರಂದು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದಲ್ಲಿ ಹಿಮಪಾತ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಎಚ್ಚರಿಸಿದೆ.
ಇದನ್ನೂ ಓದಿ: IND VS SL | ವೇಗದ ಬೌಲಿಂಗ್ ನಡೆಸಿ ಬುಮ್ರಾ ದಾಖಲೆ ಮುರಿದ ಜಮ್ಮು ಎಕ್ಸ್ಪ್ರೆಸ್ ಖ್ಯಾತಿಯ ಉಮ್ರಾನ್ ಮಲಿಕ್