ನವ ದೆಹಲಿ: ಇತ್ತೀಚೆಗೆ ಆ್ಯಂಟಿಬಯೋಟಿಕ್ ಔಷಧಗಳ ಬಳಕೆ ಹೆಚ್ಚಿದೆ. ಸಣ್ಣಪುಟ್ಟ ಶೀತ, ಜ್ವರ, ಮೈಕೈ ನೋವಿಗೂ ವೈದ್ಯರು ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ಸಲಹೆ ಮಾಡುತ್ತಾರೆ. ಈ ಮಧ್ಯೆ ಅನೇಕರು ತಮಗೆ ಚಿಕ್ಕಪುಟ್ಟ ಅನಾರೋಗ್ಯವಾದಾಗ ವೈದ್ಯರು ಯಾವಾಗಲೂ ಸಲಹೆ ಮಾಡಿದ ಆ್ಯಂಟಿಬಯೋಟಿಕ್ ಮಾತ್ರೆಗಳನ್ನೇ ತೆಗೆದುಕೊಳ್ಳುವ ಪರಿಪಾಠವನ್ನೂ ಬೆಳೆಸಿಕೊಂಡಿದ್ದಾರೆ. ಆದರೆ ಈಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಒಂದು ಮಹತ್ವದ ಸೂಚನೆ ನೀಡಿದೆ. ‘ಸಣ್ಣ ಪ್ರಮಾಣದ ಜ್ವರ, ನೆಗಡಿ, ಶ್ವಾಸಕೋಶದ ಉರಿಯೂತಕ್ಕೆಲ್ಲ ಆ್ಯಂಟಿಬಯೋಟಿಕ್ (ಪ್ರತಿಜೀವಕಗಳು) ಔಷಧಗಳನ್ನು ಸಲಹೆ ನೀಡಬೇಡಿ’ ಎಂದು ವೈದ್ಯರಿಗೆ ಹೇಳಿದೆ.
ಆ್ಯಂಟಿಬಯೋಟಿಕ್ ಬಳಕೆಗೆ ಸಂಬಂಧಪಟ್ಟು ಐಸಿಎಂಆರ್ ಶನಿವಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ‘ನ್ಯುಮೋನಿಯಾ ಜ್ವರವಿದ್ದು, ಆ ರೋಗಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲದೆ ಇದ್ದರೆ ಅವರಿಗೆ ಐದು ದಿನಗಳಿಗಷ್ಟೇ ಆ್ಯಂಟಿಬಯೋಟಿಕ್ ನೀಡಬೇಕು. ಇನ್ನು ನ್ಯುಮೋನಿಯಾ ಜ್ವರ ತೀವ್ರತರನಾಗಿದ್ದು, ಅತಿಯಾದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಆ್ಯಂಟಿಬಯೋಟಿಕ್ ಔಷಧಗಳನ್ನು ಎಂಟು ದಿನಗಳವರೆಗೆ ನೀಡಬಹುದು. ಹಾಗೇ, ಚರ್ಮ ಮತ್ತು ಮೃದು ಅಂಗಾಂಶ (Soft Tissue) ಸೋಂಕಿನಿಂದ ಬಳಲುತ್ತಿರುವವರಿಗೂ ಮೊದಲು ಐದು ದಿನಗಳ ಆ್ಯಂಟಿಬಯೋಟಿಕ್ ಥೆರಪಿ ಸೂಚಿಸಬೇಕು’ ಎಂದು ಐಸಿಎಂಆರ್ ತಿಳಿಸಿದೆ. ಹಾಗೇ, ‘ರೋಗಿಗಳು ತೆಗೆದುಕೊಳ್ಳುತ್ತಿರುವ ಆ್ಯಂಟಿಬಯೋಟಿಕ್ ಔಷಧವನ್ನು ಯಾವಾಗ ನಿಲ್ಲಿಸಬೇಕು ಎಂದು ಅವರಿಗೆ ಸ್ಪಷ್ಟವಾಗಿ, ಮುಂಚಿತವಾಗಿಯೇ ಹೇಳಿರಬೇಕು ಮತ್ತು ಔಷಧ ತೆಗೆದುಕೊಳ್ಳುತ್ತಿರುವವರು ನೀವು ಹೇಳಿದ ದಿನಕ್ಕೆ ಅದನ್ನು ಮುಗಿಸಿದ್ದಾರೆ ಎಂಬುದನ್ನೂ ಖಚಿತಪಡಿಸಿಕೊಳ್ಳಬೇಕು’ ಎಂದೂ ಮಾರ್ಗಸೂಚಿಯಲ್ಲಿ ಉಲ್ಲೇಖ ಮಾಡಲಾಗಿದೆ.
ದೇಶದಲ್ಲಿ ಇತ್ತೀಚೆಗೆ ಬಹುತೇಕ ರೋಗಗಳಿಗೂ ಆ್ಯಂಟಿಬಯೋಟಿಕ್ ನೀಡುವ ಪ್ರವೃತ್ತಿ ಹೆಚ್ಚುತ್ತಿರುವ ಬೆನ್ನಲ್ಲೇ ದೇಶಾದ್ಯಂತ ಒಂದು ಸಮೀಕ್ಷೆಯನ್ನು ಮಾಡಲಾಗಿತ್ತು. ಅತ್ಯಂತ ಗಂಭೀರ ಸ್ವರೂಪದ ಬ್ಯಾಕ್ಟೀರಿಯಾಗಳು ನಮ್ಮ ದೇಹದಲ್ಲಿ ಸೋಂಕು ಉಂಟು ಮಾಡಿ, ಅನಾರೋಗ್ಯ ಆದಾಗ ಕೊಡಬೇಕಾದ ಆ್ಯಂಟಿಬಯೋಟಿಕ್ಗಳನ್ನೆಲ್ಲ, ಸಾಮಾನ್ಯ ಜ್ವರಕ್ಕೂ ಕೊಡಲಾಗುತ್ತಿರುವುದು ಆ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹೀಗಾಗಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇನ್ನುಮುಂದೆ ಸಣ್ಣಪುಟ್ಟ ಜ್ವರ, ಶೀತ, ಮೈಕೈ ನೋವುಗಳಿಗೆಲ್ಲ ಆ್ಯಂಟಿಬಯೋಟಿಕ್ ಸಲಹೆ ಮಾಡುವುದನ್ನು ನಿಲ್ಲಿಸಬೇಕು. ಆ್ಯಂಟಿಬಯೋಟಿಕ್ಗಳನ್ನು ಸಾಮಾನ್ಯವಾಗಿ ‘ಅಂಗಾಂಗ ವೈಫಲ್ಯಕ್ಕೆ ಕಾರಣವಾಗುವ ಸೋಂಕುಗಳಿಂದ ಬಳಲುತ್ತಿರುವವರಿಗೆ, ಮಾರಣಾಂತಿಕ ವೈರಲ್ಗಳಿಗೆ, ತೀವ್ರ ಸ್ವರೂಪದ ನ್ಯುಮೋನಿಯಾ ರೋಗಿಗಳಿಗೆ’ ಕೊಡಬಹುದು ಎಂದು ಹೇಳಿರುವ ಐಸಿಎಂಆರ್, ‘ಮೊದಲು ರೋಗ ನಿರ್ಣಯ ಆಗಬೇಕು. ನಂತರ ಆ್ಯಂಟಿಬಯೋಟಿಕ್ ಚಿಕಿತ್ಸೆ ಅಗತ್ಯವೋ-ಇಲ್ಲವೋ ಎಂಬುದನ್ನು ವೈದ್ಯರು ನಿರ್ಧರಿಸಬೇಕು ಎಂದು ಹೇಳಿದೆ.
ಇದನ್ನೂ ಓದಿ: Antibiotic Tablet | ವರ್ಷದಲ್ಲಿ 500 ಕೋಟಿ ಮಾತ್ರೆ ನುಂಗಿದ ಭಾರತೀಯರು, ಯಾವ ಮಾತ್ರೆ ಪಾಲು ಹೆಚ್ಚು?