Site icon Vistara News

ಸ್ವಾತಂತ್ರ್ಯೋತ್ಸವ ಆಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಗುಂಪುಗೂಡುವಂತಿಲ್ಲ: ಕೇಂದ್ರ ಸರ್ಕಾರದ ಸೂಚನೆ

Covid 19

ನವ ದೆಹಲಿ: ಭಾರತದಲ್ಲಿ ಕೊರೊನಾ ವೈರಸ್​ (Corona Virus) ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ 16,561 ಹೊಸ ಕೇಸ್​​ಗಳು ದಾಖಲಾಗಿವೆ. ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 4,42,23,557ಕ್ಕೆ ತಲುಪಿದೆ. ಕೊವಿಡ್​ 19 ಪಾಸಿಟಿವಿಟಿ ದರ ಶೇ.5.44ಕ್ಕೆ ಏರಿಕೆಯಾಗಿದೆ. ಇದೆಲ್ಲದರ ಮಧ್ಯೆ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದು, ತನ್ನಿಮಿತ್ತ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ವಿಶೇಷ ಸೂಚನೆ ನೀಡಿದೆ. ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡದಂತೆ ಎಚ್ಚರ ವಹಿಸಬೇಕು. ಅಷ್ಟೇ ಅಲ್ಲ, ಜನರು ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು, ಸ್ಯಾನಿಟೈಸರ್​ನಿಂದ ಕೈ ಸ್ವಚ್ಛ ಗೊಳಿಸಿಕೊಳ್ಳುತ್ತಿರಬೇಕು. ಒಟ್ಟಾರೆ ಕೊವಿಡ್​ 19 ಶಿಷ್ಟಾಚಾರಗಳನ್ನು ಉಲ್ಲಂಘಿಸದೆ ಸ್ವಾತಂತ್ರ್ಯ ದಿನ ಆಚರಣೆ ಮಾಡಬೇಕು ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ.

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿ ಜಿಲ್ಲೆಯ ಯಾವುದಾದರೂ ಒಂದು ಪ್ರಮುಖ ಸ್ಥಳಗಳಲ್ಲಿ ಸ್ವಚ್ಛ ಭಾರತ್​ ಅಭಿಯಾನ ನಡೆಸಬೇಕು. 15 ದಿನಗಳು ಅಥವಾ ತಿಂಗಳುಗಳ ಕಾಲ ಈ ಅಭಿಯಾನ ನಡೆಸಿ, ಅದರಲ್ಲಿ ನಾಗರಿಕರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದೂ ಕೇಂದ್ರ ಗೃಹ ಇಲಾಖೆ, ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಹಾಗೇ, ದೊಡ್ಡಮಟ್ಟದ ಸಭೆ-ಸಮಾರಂಭಗಳನ್ನು ನಡೆಸಿ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡುವುದನ್ನು ನಿರ್ಬಂಧಿಸಬೇಕು ಎಂದೂ ಹೇಳಿದೆ.

ದೇಶದಲ್ಲಿ ಇತ್ತೀಚೆಗೆ ಕೊವಿಡ್​ 19 ಶಿಷ್ಟಾಚಾರಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಪ್ರತಿದಿನವೂ 15 ಸಾವಿರಕ್ಕೂ ಅಧಿಕ ಕೇಸ್​ಗಳು ದಾಖಲಾಗುತ್ತಿವೆ. ಸಕ್ರಿಯ ಪ್ರಕರಣಗಳು 1,23,535 ಇವೆ. ಕಳೆದ 24ಗಂಟೆಯಲ್ಲಿ ಕೊವಿಡ್ 19ನಿಂದ 49 ಜನ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 5,26,928ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ವೈರಸ್‌; ಇಂದು 7 ಸಾವಿರಕ್ಕೂ ಅಧಿಕ ಕೇಸ್‌ ದಾಖಲು

Exit mobile version