Site icon Vistara News

Ayodhya Ram Mandir: ಅಯೋಧ್ಯೆ ಜನರ ಮನವೊಲಿಕೆಗೆ ಮುಂದಾದ ಬಿಜೆಪಿ; ಜಾಗ ಕಳೆದುಕೊಂಡ ವರ್ತಕರಿಗೆ ಭರ್ಜರಿ ಆಫರ್‌!

Ayodhya Ram Mandir

ಲಕ್ನೋ: ಉತ್ತರ ಪ್ರದೇಶದ (uttarapradesha) ಅಯೋಧ್ಯೆಯಲ್ಲಿ ರಾಮ ಮಂದಿರದ (Ayodhya Ram Mandir) ನಿರ್ಮಾಣದ ವೇಳೆ ಅಯೋಧ್ಯೆ (ayodhya) ಅಭಿವೃದ್ಧಿ ಪ್ರಾಧಿಕಾರವು (ADA) ಕೈಗೊಂಡ ರಸ್ತೆ ವಿಸ್ತರಣೆ ಕಾಮಗಾರಿಗಾಗಿ (road widening project) ಸ್ಥಳಾಂತರಗೊಂಡ ಅಂಗಡಿ ಮಾಲೀಕರಿಗೆ ಹಂಚಿಕೆಯಾಗಿರುವ ಅಂಗಡಿಗಳ ಬೆಲೆಯನ್ನು ಶೇ. 30ರಷ್ಟು ಕಡಿತಗೊಳಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟೇ ಅಲ್ಲ, ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ 500 ಅಂಗಡಿಗಳನ್ನು ಪಡೆಯುವವರಿಗೆ ಬಡ್ಡಿ ರಹಿತವಾಗಿ 20 ವರ್ಷಗಳ ಸುಲಭ ಕಂತುಗಳಲ್ಲಿ ಹಣ ಪಾವತಿಸುವ ಆಫರ್‌ ಕೂಡ ನೀಡಲಾಗಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆ ಇರುವ ಫೈಜಾಬಾದ್‌ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಹೀನಾಯವಾಗಿ ಸೋತು ಹೋಗಿತ್ತು. ಅಭಿವೃದ್ಧಿ ಕಾಮಗಾರಿಗಾಗಿ ಸ್ಥಳ ಕಳೆದುಕೊಂಡ ಜನ ಸರ್ಕಾರದಿಂದ ಸೂಕ್ತ ಪರಿಹಾರ ಮತ್ತು ಸ್ಪಂದನೆ ಸಿಗದೆ ಆಕ್ರೋಶಗೊಂಡಿದ್ದರು. ಇದರಿಂದ ಕಳವಳಗೊಂಡಿರುವ ಬಿಜೆಪಿ, ಅಯೋಧ್ಯೆಯ ಜನರ ಮನವೊಲಿಸಲು ಮುಂದಾಗಿದೆ.

ಈ ಕುರಿತು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಿದೆ ಎಂದು ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಯೋಧ್ಯೆ ವಿಭಾಗೀಯ ಆಯುಕ್ತ ಹಾಗೂ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗೌರವ್ ದಯಾಳ್ ತಿಳಿಸಿದ್ದಾರೆ. ಅಂಗಡಿಗಳ ಬೆಲೆಯನ್ನು ಶೇ. 30ರಷ್ಟು ಕಡಿತಗೊಳಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದೇವೆ. ಇದಲ್ಲದೆ, ಬಡ್ಡಿ ರಹಿತವಾಗಿ 20 ವರ್ಷಗಳ ಸುಲಭ ಕಂತಿನಲ್ಲಿ ಮಳಿಗೆಗಳನ್ನು ಹಂಚಿಕೆದಾರರಿಗೆ ಹಸ್ತಾಂತರಿಸಲಾಗುವುದು ಎಂದು ದಯಾಳ್ ಹೇಳಿದರು.

ರಾಮ್ ಪಥ್ ಎಂದು ಹೆಸರಿಸಲಾದ ಸಹದತ್‌ಗಂಜ್‌ನಿಂದ ನಯಾ ಘಾಟ್‌ವರೆಗಿನ 13 ಕಿ.ಮೀ. ರಸ್ತೆ ವಿಸ್ತರಣೆ ಯೋಜನೆಯಲ್ಲಿ ಸುತ್ತಲಿನ ಅಂಗಡಿದಾರರು ಸ್ಥಳಾಂತರಗೊಂಡಿದ್ದಾರೆ. ಯೋಜನೆಯು ಡಿಸೆಂಬರ್ 2023ರಲ್ಲಿ ಪೂರ್ಣಗೊಂಡಿತು. ಈ ಮೊದಲು, ಅಂಗಡಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಂಗಡಿ ಮಾಲೀಕರು ಸಂಪೂರ್ಣ ಹಣವನ್ನು ಎಡಿಎಗೆ ಪಾವತಿಸಬೇಕಾಗಿತ್ತು.

ಈ ಅಂಗಡಿಗಳ ಬೆಲೆ ಸುಮಾರು 15ರಿಂದ 20 ಲಕ್ಷ ರೂಪಾಯಿಗಳಾಗಿದ್ದು, ಅಂಗಡಿದಾರರು ಈ ದೊಡ್ಡ ಮೊತ್ತವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಅವರ ಮುಂದಿದ್ದ ಏಕೈಕ ಆಯ್ಕೆ ಬ್ಯಾಂಕ್‌ ಸಾಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಅಂಗಡಿಗಳು ಸಿದ್ಧವಾಗಿದ್ದವು. ಆದರೆ ಹಣಕಾಸಿನ ಅಡಚಣೆಯಿಂದಾಗಿ ಕಳೆದ ತಿಂಗಳವರೆಗೆ ಸುಮಾರು 75 ಅಂಗಡಿದಾರರು ಮಾತ್ರ ಅಂಗಡಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಅಂಗಡಿಗಳ ಬೆಲೆಯನ್ನು ಶೇಕಡಾ 30ರಷ್ಟು ಇಳಿಸಿದ್ದಕ್ಕಾಗಿ ನಾವು ರಾಜ್ಯ ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ. ಮತ್ತು ಉಳಿದ ಮೊತ್ತವನ್ನು 20 ವರ್ಷಗಳ ಸುಲಭ ಬಡ್ಡಿ ರಹಿತ ಕಂತುಗಳಲ್ಲಿ ಪಾವತಿಸಲಾಗುವುದು ಎಂದು ಅಯೋಧ್ಯೆಯ ಬಿಜೆಪಿ ಶಾಸಕ ವೇದ್ ಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಚುನಾವಣೆಯಲ್ಲಿ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅತ್ಯಂತ ಹೀನಾಯ ಸೋಲನ್ನು ಅನುಭವಿಸಿತು. ಎರಡು ಬಾರಿ ಸಂಸದರಾಗಿದ್ದ ಲಲ್ಲು ಸಿಂಗ್ ಅವರು ಸಮಾಜವಾದಿ ಪಕ್ಷದ ಅವದೇಶ್ ಪ್ರಸಾದ್ ವಿರುದ್ಧ ಸೋತರು. ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ 54,567 ಮತಗಳ ಅಂತರದಿಂದ ಪ್ರತಿಷ್ಠಿತ ಸ್ಥಾನವನ್ನು ಗೆದ್ದಿದ್ದಾರೆ.

ಇದನ್ನೂ ಓದಿ: Ram Mandir: ರಾಮಮಂದಿರ ಆವರಣದಲ್ಲೇ ಗುಂಡು ತಗುಲಿ ಯೋಧ ಸಾವು; ರಾತ್ರಿ ಏನಾಯ್ತು?

ಈ ವರ್ಷದ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಭವ್ಯವಾಗಿ ಉದ್ಘಾಟಿಸಿದ ಅನಂತರರೂ ಫೈಜಾಬಾದ್‌ನ ಜನರು ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ್ದರು. ಅಯೋಧ್ಯೆ ಇರುವ ಈ ಕ್ಷೇತ್ರದಲ್ಲಿ ಪಕ್ಷದ ಸೋಲಿನ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳಲು ರಾಜ್ಯ ಬಿಜೆಪಿ ಮುಖ್ಯಸ್ಥ ಭೂಪೇಂದ್ರ ಚೌಧರಿ ಬುಧವಾರ ಎರಡು ದಿನಗಳ ಭೇಟಿಗಾಗಿ ಅಯೋಧ್ಯೆಗೆ ಆಗಮಿಸಿದ್ದಾರೆ.

Exit mobile version