Site icon Vistara News

Ayodhya Ram Mandir: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ದಿನಾಂಕ ನಿಗದಿ; ಯಾವಾಗ?

RSS To Supervise Of consecration of Ram Lalla

Ram Mandir: RSS to supervise consecration ceremony of Ram Lalla in sanctum sanctorum

ಅಯೋಧ್ಯೆ: ಉತ್ತರ ಪ್ರದೇಶದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ (Ayodhya Ram Mandir) ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಇದೇ ವರ್ಷ ಡಿಸೆಂಬರ್​ನೊಳಗೆ ಶ್ರಿರಾಮ ದೇಗುಲದ ಗರ್ಭಗುಡಿ ಕಾರ್ಯ ಪೂರ್ಣಗೊಳ್ಳಲಿದ್ದು, 2024ರ ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನೆರವೇರಲಿದೆ ಎಂದು ಹೇಳಲಾಗಿದೆ. ದೇವರ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಗುತ್ತದೆ. ದೇವಸ್ಥಾನದ ಎರಡನೇ ಮಹಡಿ ಮತ್ತು ಇನ್ನಿತರ ಭಾಗಗಳ ಕೆಲಸ ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ ಎಂದೂ ವರದಿಯಾಗಿದೆ.

ರಾಮ ಮಂದಿರದಲ್ಲಿ ನೂತನ ರಾಮ ಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಶ್ರೀರಾಮ ಮತ್ತು ಸೀತಾ ಮಾತೆಯ ನೂತನ ಹೊಸ ವಿಗ್ರಹವನ್ನು ನಿರ್ಮಿಸಲೆಂದು, ನೇಪಾಳದ ಗಂಡಕಿ ನದಿಯಲ್ಲಿ ಸಿಕ್ಕ, 6 ಕೋಟಿ ವರ್ಷಗಳ ಇತಿಹಾಸ ಇದ್ದು, ಅಧ್ಯಾತ್ಮಿಕವಾಗಿ ಪ್ರಾಮುಖ್ಯತೆ ಪಡೆದಿರುವ ಎರಡು ಶಿಲೆಗಳನ್ನು ತರಲಾಗಿದೆ. ಇದರಲ್ಲಿ ಒಂದು ಶಿಲೆ 26 ಟನ್​ ಇದ್ದರೆ, ಇನ್ನೊಂದು ಶಿಲೆ 14 ಟನ್​ ಇದೆ. ಈಗಿರುವ ರಾಮಲಲ್ಲಾನ ಮೂರ್ತಿ ಚಿಕ್ಕದಾಗಿರುವ ಕಾರಣ, ಈ ಮೂರ್ತಿ ಭಕ್ತರಿಗೆ 9 ಅಡಿ ದೂರದಿಂದ ಕಾಣುವುದಿಲ್ಲ. ಹೀಗಾಗಿ ಹೊಸದಾದ, ಸುಮಾರು 5-5.5 ಅಡಿ ಎತ್ತರದ ಹೊಸ ಮೂರ್ತಿಯನ್ನು ಕೆತ್ತಿ, ಪ್ರತಿಷ್ಠಾಪನೆ ಮಾಡಲು ಶ್ರೀರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್​ ನಿರ್ಧಾರ ಮಾಡಿದೆ. ಪ್ರತಿವರ್ಷವೂ ಶ್ರೀರಾಮನವಮಿ ಹಬ್ಬದಂದು ಸೂರ್ಯನ ಕಿರಣಗಳು, ರಾಮಮಂದಿರದ ಗರ್ಭಗುಡಿಯಲ್ಲಿರುವ ರಾಮಲಲ್ಲಾನ ಹಣೆಯನ್ನು ಸ್ಪರ್ಶಿಸುವಂತೆ ಮಾಡುವ ಉದ್ದೇಶದಿಂದ ಮತ್ತು ಅದಕ್ಕೆ ಪೂರಕವಾಗಿ ವಿಗ್ರಹದ ಎತ್ತರವನ್ನು ಇಡಲು ನಿರ್ಧಾರ ಮಾಡಲಾಗಿದೆ.

2024ರ ಜನವರಿ 14 ಅಂದರೆ ಮಕರ ಸಂಕ್ರಾಂತಿ ಹಬ್ಬದಂದೇ ಶ್ರೀರಾಮ ಲಲ್ಲಾನ ಪ್ರತಿಷ್ಠಾಪನೆ ಮಾಡಲಾಗುವುದು ಈ ಹಿಂದೆ ಶ್ರೀರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್ ಹೇಳಿತ್ತು. 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ, ಅಯೋಧ್ಯಾ ಶ್ರೀರಾಮಮಂದಿರ ಬಿಜೆಪಿ ಕೇಂದ್ರ ಸರ್ಕಾರಕ್ಕೆ ಬಹುಮುಖ್ಯ ಅಂಶವಾಗಲಿದೆ. ದಶಕಗಳಿಂದಲೂ ಬಿಜೆಪಿ ರಾಮಮಂದಿರ ನಿರ್ಮಾಣವನ್ನು ತನ್ನ ಚುನಾವಣಾ ಪ್ರಣಾಳಿಕೆಯ ಒಂದು ಭಾಗವನ್ನಾಗಿ ಮಾಡಿಕೊಂಡು ಬಂದಿತ್ತು. ಆ ಕಾರ್ಯವೀಗ ಸಿದ್ಧಿಯಾಗಿದ್ದು, ಅಂತಿಮ ಹಂತದಲ್ಲಿದೆ. ಹೀಗಾಗಿ 2024ರ ಲೋಕಸಭೆ ಚುನಾವಣೆಯೊಳಗೆ ಅಲ್ಲಿ ರಾಮಲಲ್ಲಾನನ್ನು ಪ್ರತಿಷ್ಠಾಪಿಸಿ, ಭಕ್ತರಿಗೆ ದರ್ಶನಕ್ಕೆ ಮುಕ್ತ ಮಾಡಲು ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಜಂಟಿಯಾಗಿ ಪ್ರಯತ್ನವನ್ನು ಜಾರಿಯಲ್ಲಿಟ್ಟಿವೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Ram Mandir: ಅಯೋಧ್ಯೆ ರಾಮಮಂದಿರದ ಗರ್ಭಗುಡಿ ಹೇಗಿದೆ? ಇಲ್ಲಿವೆ ನೂತನ ಫೋಟೊಗಳು

Exit mobile version