ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಮಂದಿರ (Ayodhya Ram Mandir)ಮುಂದಿನ ವರ್ಷದಿಂದಲೇ ಭಕ್ತರ ಪ್ರವೇಶಕ್ಕೆ ತೆರೆದುಕೊಳ್ಳಲಿದೆ. ಅಲ್ಲಿ ಭರದಿಂದ ಕೆಲಸ ಸಾಗುತ್ತಿದ್ದು, ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಗಾಗ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡು, ದೇಗುಲ ನಿರ್ಮಾಣದ ಕಾಮಗಾರಿಯ ಬಗ್ಗೆ ಮಾಹಿತಿ ನೀಡುತ್ತಿದೆ. ಸ್ವಲ್ಪ ದಿನಗಳ ಹಿಂದೆ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಗರ್ಭಗುಡಿಯ ಗೋಡೆಯ ಫೋಟೋ ಹಂಚಿಕೊಂಡಿದ್ದರು. ಇದೀಗ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಟ್ವಿಟರ್ನಲ್ಲಿ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಕೆತ್ತನೆ ಮಾಡಲಾಗಿರುವ ವಿವಿಧ ವಿಗ್ರಹಗಳು, ಕಂಬ ಕೆತ್ತನೆಗಳ ಫೋಟೋವನ್ನು ಶೇರ್ ಮಾಡಲಾಗಿದೆ. ಹಿಂದು ಶಾಸ್ತ್ರದಲ್ಲಿ ಮಹತ್ವ ಪಡೆದ ಸುಮಾರು 3600 ಪ್ರತಿಮೆಗಳನ್ನು ಇಲ್ಲಿ ಕೆತ್ತನೆ ಮಾಡಲಾಗುವುದು ಎಂದು ಹೇಳಲಾಗಿದೆ.
‘ನಮ್ಮ ಹಿಂದು ಶಾಸ್ತ್ರದಲ್ಲಿ ಇರುವ ಕಥೆಗಳನ್ನು ಸಾರುವ ವಿಗ್ರಹಗಳನ್ನು ಕೆತ್ತನೆ ಮಾಡಲಾಗಿದೆ. ಅದನ್ನೆಲ್ಲ ಬಳಿಕ ಇಲ್ಲಿನ ಕಂಬಗಳ ಮೇಲೆ ಮತ್ತು ಇತರ ಸ್ಥಳಗಳಲ್ಲಿ ಅಳವಡಿಸಲಾಗುವುದು ಎಂದು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಟ್ವಿಟರ್ನಲ್ಲಿ ಕ್ಯಾಪ್ಷನ್ ಬರೆದುಕೊಂಡಿದೆ. ಅಯೋಧ್ಯೆಯಲ್ಲಿ ಶೇ.50ರಷ್ಟು ಕೆಲಸಗಳು ಸಂಪೂರ್ಣಗೊಂಡಿವೆ. 2023ರ ಅಂತ್ಯದ ಹೊತ್ತಿಗೆ ಅಯೋಧ್ಯೆ ರಾಮಮಂದಿರದ ಮುಕ್ಕಾಲು ಭಾಗ ಕೆಲಸ ಸಂಪೂರ್ಣಗೊಂಡಿರುತ್ತದೆ. ಅದರಲ್ಲೂ ಮುಖ್ಯವಾಗಿ ಗರ್ಭಗುಡಿ ನಿರ್ಮಾಣ ಪೂರ್ಣವಾಗುತ್ತದೆ. 2024ರ ಮಕರ ಸಂಕ್ರಾಂತಿಯಿಂದಲೇ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಇರುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹಾಗೇ, ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಶ್ರೀರಾಮಲಲ್ಲಾನ ವಿಗ್ರಹ 51 ಇಂಚುಗಳು ಇರಲಿವೆ ಎನ್ನಲಾಗಿದೆ.
ಇದನ್ನೂ ಓದಿ: Ayodhya Ram Temple: ರಾಮಮಂದಿರ ನಿರ್ಮಾಣಕ್ಕೆ ಮೈಸೂರಿನ ಶಿಲೆಗಳು; ಈಗಾಗಲೇ ಅಯೋಧ್ಯೆ ತಲುಪಿವೆ 2 ಕಲ್ಲುಗಳು
2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ, ಅಯೋಧ್ಯಾ ಶ್ರೀರಾಮಮಂದಿರ ಬಿಜೆಪಿ ಕೇಂದ್ರ ಸರ್ಕಾರಕ್ಕೆ ಬಹುಮುಖ್ಯ ಅಂಶವಾಗಲಿದೆ. ದಶಕಗಳಿಂದಲೂ ಬಿಜೆಪಿ ರಾಮಮಂದಿರ ನಿರ್ಮಾಣವನ್ನು ತನ್ನ ಚುನಾವಣಾ ಪ್ರಣಾಳಿಕೆಯ ಒಂದು ಭಾಗವನ್ನಾಗಿ ಮಾಡಿಕೊಂಡು ಬಂದಿತ್ತು. ಆ ಕಾರ್ಯವೀಗ ಸಿದ್ಧಿಯಾಗಿದ್ದು, ಅಂತಿಮ ಹಂತದಲ್ಲಿದೆ. ಹೀಗಾಗಿ 2024ರ ಲೋಕಸಭೆ ಚುನಾವಣೆಯೊಳಗೆ ಅಲ್ಲಿ ರಾಮಲಲ್ಲಾನನ್ನು ಪ್ರತಿಷ್ಠಾಪಿಸಿ, ಭಕ್ತರಿಗೆ ದರ್ಶನಕ್ಕೆ ಮುಕ್ತ ಮಾಡಲು ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಜಂಟಿಯಾಗಿ ಪ್ರಯತ್ನವನ್ನು ಜಾರಿಯಲ್ಲಿಟ್ಟಿವೆ. ಇದೇ ಕಾರಣಕ್ಕೆ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದೆ.