ಅಯೋಧ್ಯೆ: ರಾಮಮಂದಿರ ನಿರ್ಮಾಣ ಕಾಮಗಾರಿ ಶೇ.50ರಷ್ಟು ಪೂರ್ಣಗೊಂಡಿದ್ದು, 2024ರ ಜನವರಿಯಿಂದ ಭಕ್ತರಿಗೆ ಪ್ರವೇಶ ಸಿಗಲಿದೆ. ಆ ವೇಳೆಗೆ ಅಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯೂ ಸಂಪನ್ನಗೊಳ್ಳಲಿದೆ. ಪೂಜೆಯನ್ನೂ ಸಲ್ಲಿಸಬಹುದು ಎಂದು ಹೇಳಲಾಗಿದೆ. ಹಾಗೇ, ರಾಮಮಂದಿರದ ಗರ್ಭಗುಡಿ ನಿರ್ಮಾಣ ಕಾರ್ಯ ಶೇ. 15ರಷ್ಟು ಪೂರ್ಣಗೊಂಡಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ. ಹಾಗೇ, 2024ರ ಮಕರ ಸಂಕ್ರಾಂತಿಯಂದೇ ರಾಮಲಲ್ಲಾ ಪ್ರತಿಷ್ಠಾಪನೆ ಆಗುವುದಾಗಿಯೂ ಮಾಹಿತಿ ನೀಡಿದ್ದಾರೆ. ಇನ್ನು ಶ್ರೀರಾಮಂದಿರ ಉದ್ಘಾಟನಾ ಸಮಾರಂಭದ ಆಚರಣೆ ಕಾರ್ಯಕ್ರಮಗಳು 2022ರ ಡಿಸೆಂಬರ್ನಿಂದ 2024ರ ಜನವರಿಯವರೆಗೂ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಶ್ರೀರಾಮಮಂದಿರದ ನೆಲ ಅಂತಸ್ತನ್ನು 2023ರ ಡಿಸೆಂಬರ್ನಲ್ಲಿ ಪೂರ್ಣಗೊಳಿಸಲು ಟ್ರಸ್ಟ್ ಡೆಡ್ಲೈನ್ ಇಟ್ಟುಕೊಂಡಿದೆ. ಅದರಂತೆ ಅಲ್ಲಿ ಕೆಲಸಗಳೂ ಭರದಿಂದ ಸಾಗುತ್ತಿದೆ. ನೆಲ ಅಂತಸ್ತು ಪೂರ್ಣವಾಗುತ್ತಿದ್ದಂತೆ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಸಿಗಲಿದೆ. ಮುಖ್ಯ ದೇಗುಲವನ್ನು 350 ಅಡಿ X 250 ಅಡಿ ವಿಸ್ತೀರ್ಣದಲ್ಲಿ ಕಟ್ಟಲಾಗುತ್ತಿದೆ. ದೇವಾಲಯಕ್ಕೆ 12 ಗೇಟ್ಗಳು ಇರಲಿದ್ದು, ಇವುಗಳನ್ನು ತೇಗದ ಮರದಿಂದ ನಿರ್ಮಾಣ ಮಾಡಲಾಗುತ್ತಿದೆ. ಮಂದಿರದ ನೆಲ ಅಂತಸ್ತಿನಲ್ಲಿ 166 ಕಂಬಗಳು ಇರಲಿದ್ದು, ಮೊದಲ ಅಂತಸ್ತಿನಲ್ಲಿ 144 ಮತ್ತು ಎರಡನೇ ಅಂತಸ್ತಿನಲ್ಲಿ 82 ಕಂಬಗಳು ಇರುವುದಾಗಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.
ಅಯೋಧ್ಯೆ ಮತ್ತು ರಾಜಸ್ಥಾನದ ಸಿರೋಹಿ ಜಿಲ್ಲೆಗಳಲ್ಲಿ ಕೆತ್ತನೆ ಮಾಡುತ್ತಿರುವ ಕಲ್ಲುಗಳನ್ನು ರಾಮಮಂದಿರ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ. ಹಾಗೇ, ಮಂದಿರ ನಿರ್ಮಾಣ ಪೂರ್ಣಗೊಂಡ ಬಳಿಕ ಉಳಿದ ಜಾಗದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆಯೂ ಟ್ರಸ್ಟ್ ಈಗಾಗಲೇ ಯೋಜನೆ ರೂಪಿಸುತ್ತಿದೆ. ದೇಗುಲ ಕಟ್ಟಿ ಆದ ಬಳಿಕ ಸುಮಾರು 70 ಎಕರೆ ಪ್ರದೇಶ ಬಾಕಿ ಇರಲಿದ್ದು, ಅದರಲ್ಲಿ ವಾಲ್ಮೀಕಿ ಮಹರ್ಷಿ, ಆಚಾರ್ಯ ವಸಿಷ್ಠ, ವಿಶ್ವಾಮಿತ್ರ, ಅಗಸ್ತ್ಯ, ನಿಶಾದ್ ರಾಜ್, ಜಟಾಯು ಮತ್ತು ಶಬರಿಗಾಗಿ ಗುಡಿ ನಿರ್ಮಾಣ ಮಾಡುವ ಮಹದುದ್ದೇಶವನ್ನು ಟ್ರಸ್ಟ್ ಹೊಂದಿದೆ.
ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2020ರ ಆಗಸ್ಟ್ 5ರಂದು ಭೂಮಿ ಪೂಜೆ ನೆರವೇರಿಸಿದ್ದರು. ಅದಾದ ಬಳಿಕ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚಿಸಲಾಗಿದ್ದು, ಅದರ ಉಸ್ತುವಾರಿಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಗಾಗ ಅಲ್ಲಿಗೆ ಭೇಟಿ ಕೊಟ್ಟು ಕಾಮಗಾರಿ ಪರಿಶೀಲನೆ ಮಾಡುತ್ತಿದೆ. ದೀಪೋತ್ಸವ ನಿಮಿತ್ತ ಅಕ್ಟೋಬರ್ 23ರಂದು ಅಯೋಧ್ಯೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರೂ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Modi In Ayodhya | ಅಯೋಧ್ಯೆ ಅಂಗಳದಲ್ಲಿ ದೀಪಗಳ ರಂಗವಲ್ಲಿ, ಸುಂದರ ಫೋಟೊಗಳಿವೆ ಇಲ್ಲಿ…