Site icon Vistara News

Ayodhya Ram Mandir : ರಾಮ-ಸೀತೆಯ ಮೂರ್ತಿ ನಿರ್ಮಾಣಕ್ಕೆ ನೇಪಾಳದಿಂದ ಬರಲಿವೆ ಶಿಲೆಗಳು!

Ram Mandir Stone

ಕಠ್ಮಂಡು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya Ram Mandir) ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಅದಕ್ಕೆ ದೇಶದ ಮೂಲೆ ಮೂಲೆಗಳಿಂದ ಇಟ್ಟಿಗೆ, ಮಣ್ಣು ಸೇರಿ ಹಲವು ರೀತಿಯ ಸಾಮಾಗ್ರಿಗಳು ಬಂದಿವೆ. ಇದೀಗ ವಿಶೇಷವಾಗಿ ಸೀತೆಯ ಜನ್ಮಭೂಮಿಯಾದ ನೇಪಾಳದಿಂದ ಸೀತೆ ಮತ್ತು ರಾಮನ ಮೂರ್ತಿ ಕೆತ್ತನೆಗೆಂದು ಶಿಲೆಗಳು ಬರಲಿವೆ.

ಇದನ್ನೂ ಓದಿ: Ayodhya | ಅಯೋಧ್ಯೆಯಲ್ಲಿ ಪ್ರವೇಶ ದ್ವಾರಗಳಿಗೆ ರಾಮಾಯಣದ ಪಾತ್ರಗಳ ನಾಮಕರಣಕ್ಕೆ ನಿರ್ಧಾರ

ನೇಪಾಳದ ಮಾಜಿ ಉಪ ಪ್ರಧಾನ ಮಂತ್ರಿಯಾಗಿರುವ ಭಿಮಲೇಂದ್ರ ನಿಧಿ ಅವರು ತಮ್ಮ ಆಡಳಿತವಿದ್ದ ಸಮಯದಲ್ಲಿಯೇ ಅಯೋಧ್ಯೆಯ ರಾಮ ಮಂದಿರಕ್ಕೆ ಶಿಲೆಗಳನ್ನು ಕಳುಹಿಸಿಕೊಡುವ ಪ್ರಸ್ತಾಪವಿಟ್ಟಿದ್ದರು. ಅದರ ಜತೆಗೆ ದೇಗುಲದಲ್ಲಿ ಪ್ರದರ್ಶನಕ್ಕೆ ಇಡಲೆಂದು ಶಿವ ಧನುಸ್ಸನ್ನೂ ನೇಪಾಳದಿಂದ ಕಳುಹಿಸಿಕೊಡುವ ಯೋಜನೆ ಅವರದ್ದಾಗಿದೆ. ಈ ಪ್ರಸ್ತಾಪಕ್ಕೆ ಎರಡೂ ರಾಷ್ಟ್ರಗಳು ಸಮ್ಮತಿ ನೀಡಿರುವ ಹಿನ್ನೆಲೆ ಇದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ.

18 ಟನ್‌ ಹಾಗೂ 12 ಟನ್‌ ತೂಕವಿರುವ ಎರಡು ಬೃಹದಾಕಾರದ ಶಿಲೆಗಳನ್ನು ನೇಪಾಳ ಅಯೋಧ್ಯೆಗೆ ಕಳುಹಿಸಿಕೊಡಲಿದೆ. ಈ ಶಿಲೆಗಳು ಅಯೋಧ್ಯೆಯ ಗಡ್ಕರಿ ನದಿ ದಂಡೆಗೆ ಫೆ.1ರಂದು ಬಂದು ಸೇರುವ ನಿರೀಕ್ಷೆಯಿದೆ. ಜ.15ರಂದೇ ನೇಪಾಳದಲ್ಲಿ ಶಿಲೆಗಳಿಗೆ ಪೂಜೆ ಸಲ್ಲಿಸಲಾಗಿದೆ. ನಂತರ ಅದನ್ನು ಜಾನಕಪುರಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿನ ಜನರಿಗೆ ಶಿಲೆಗಳ ದರ್ಶನ ಪಡೆಯುವುದಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಭಿಮಲೇಂದ್ರ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Ram mandir | ಅಯೋಧ್ಯೆಯ ರಾಮ ಮಂದಿರದಲ್ಲಿ 2024 ಜನವರಿ 14ರ ಮಕರ ಸಂಕ್ರಾಂತಿಗೆ ಶ್ರೀರಾಮ ವಿರಾಜಮಾನ

ಭಿಮಲೇಂದ್ರ ಅವರು ಈ ಹಿಂದೆ ಅಯೋಧ್ಯೆಗೆ ಬಂದಿದ್ದು, ಇಲ್ಲಿ ರಾಮ ಜನ್ಮ ಭೂಮಿ ಟ್ರಸ್ಟ್‌ನ ಮುಖ್ಯಸ್ಥರು ಹಾಗೂ ಸದಸ್ಯರನ್ನು ಭೇಟಿ ಮಾಡಿರುವುದಾಗಿ ಹೇಳಿದ್ದಾರೆ. ಎರಡೂ ದೇಶಗಳ ನಡುವೆ ಈ ರೀತಿಯಲ್ಲಿ ಶಿಲೆಗಳ ವರ್ಗಾವಣೆ ಮಾಡಿಕೊಳ್ಳುವುದರಿಂದ ರಾಷ್ಟ್ರಗಳ ನಡುವಿನ ಧಾರ್ಮಿಕ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ ಎಂದಿದ್ದಾರೆ ಭಿಮಲೇಂದ್ರ. ರಾಮ ಮಂದಿರಕ್ಕೆ ಉಡುಗೊರೆಯ ರೂಪದಲ್ಲಿ ಅಷ್ಟಧಾತು(ಎಂಟು ಲೋಹ) ಶಿವ ಧನಸ್ಸನ್ನೂ ಕೊಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ರಾಮನನ್ನು ಪೂಜಿಸುವಂತೆಯೇ ನೇಪಾಳದಲ್ಲಿಯೂ ರಾಮನನ್ನು ದೇವರೆಂದು ಪೂಜಿಸಲಾಗುತ್ತದೆ. ಪ್ರತಿ ವರ್ಷ ರಾಮ ಜಯಂತಿ ಆಚರಣೆ ಅಷ್ಟೇ ಅಲ್ಲದೆ ರಾಮ ಮತ್ತು ಸೀತೆ ಮದುವೆಯಾದ ದಿನವನ್ನೂ ಆಚರಿಸಲಾಗುತ್ತದೆ.

Exit mobile version