Site icon Vistara News

Azur Airlines: ಗೋವಾದಲ್ಲಿ ಮುಂಜಾನೆ ಲ್ಯಾಂಡ್​ ಆಗಬೇಕಿದ್ದ ವಿಮಾನ ಮಧ್ಯರಾತ್ರಿ ಉಜ್ಬೇಕಿಸ್ತಾನಕ್ಕೆ ಹೋಗಿದ್ದೇಕೆ?

Azur Air Which to be landed in goa diverted to Uzbekistan

ಪಣಜಿ: ರಷ್ಯಾದ ಮಾಸ್ಕೋದಿಂದ ಗೋವಾಕ್ಕೆ ಆಗಮಿಸುತ್ತಿದ್ದ ವಿಮಾನದಲ್ಲಿ ಬಾಂಬ್​ ಇದೆ ಎಂಬ ಬೆದರಿಕೆ ಬಂದ ಹಿನ್ನೆಲೆಯಲ್ಲಿ, ಆ ವಿಮಾನವನ್ನು ಉಜ್ಬೇಕಿಸ್ತಾನ್​ ಏರ್​ಪೋರ್ಟ್​​ಗೆ ತೆಗೆದುಕೊಂಡು ಹೋಗಿ ಲ್ಯಾಂಡ್ ಮಾಡಲಾಗಿದೆ.

ಅಜುರ್ ಏರ್​​ಲೈನ್ಸ್​​​ಗೆ ಸೇರಿದ ವಿಮಾನ 240 ಮತ್ತು 7 ಸಿಬ್ಬಂದಿಯನ್ನು ಹೊತ್ತು ಮಾಸ್ಕೋದಿಂದ ಶುಕ್ರವಾರ ರಾತ್ರಿ ಗೋವಾದೆಡೆಗೆ ಬರುತ್ತಿತ್ತು. ಈ ವಿಮಾನದಲ್ಲಿ ಎರಡು ನವಜಾತ ಶಿಶುಗಳೂ ಇದ್ದವು. ಶನಿವಾರ ಮುಂಜಾನೆ 4.15ರ ಹೊತ್ತಿಗೆ ಈ ವಿಮಾನ ಗೋವಾದ ದಾಬೋಲಿಮ್​ ಏರ್​ಪೋರ್ಟ್​​ನಲ್ಲಿ ಲ್ಯಾಂಡ್​ ಆಗಬೇಕಿತ್ತು. ಆದರೆ ಅಲ್ಲಿಂದ ಹೊರಟ ಕೆಲವೇ ಹೊತ್ತಲ್ಲಿ, ಅಂದರೆ ಸುಮಾರು ಶುಕ್ರವಾರ ಮಧ್ಯರಾತ್ರಿ 12.30ರ ಹೊತ್ತಿಗೆ ದಾಬೋಲಿಮ್ ಏರ್​ಪೋರ್ಟ್​​ ನಿರ್ದೇಶಕನಿಗೆ ಇಮೇಲ್​ ಸಂದೇಶವೊಂದು ಬಂದಿದೆ. ದಾಬೋಲಿಮ್​ನಲ್ಲಿ ಲ್ಯಾಂಡ್​ ಆಗಬೇಕಿದ್ದ ವಿಮಾನದಲ್ಲಿ ಬಾಂಬ್​​ ಇರುವುದಾಗಿ ಅದರಲ್ಲಿ ಉಲ್ಲೇಖಿಸಲಾಗಿತ್ತು. ತಕ್ಷಣ ಅಲರ್ಟ್​ ಆಗಿ, ವಿಮಾನ ಭಾರತೀಯ ವಾಯುಪ್ರದೇಶ ಪ್ರವೇಶ ಮಾಡುವುದನ್ನು ತಡೆದು, ಅದನ್ನು ಉಜ್ಬೇಕಿಸ್ತಾನಕ್ಕೆ ಕಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಬಳಿಕ ಏನಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ.

ಇತ್ತೀಚೆಗಷ್ಟೇ ಇದೇ ಅಜುರ್​ ಏರ್​ಲೈನ್ಸ್​ಗೆ ಸೇರಿದ, ಮಾಸ್ಕೋದಿಂದ ಗೋವಾಕ್ಕೆ ಬರುತ್ತಿದ್ದ ವಿಮಾನವೊಂದಕ್ಕೆ ಬಾಂಬ್​ ಬೆದರಿಕೆ ಕರೆ ಬಂದಿತ್ತು. ಭಾರತದಲ್ಲಿದ್ದ ರಷ್ಯಾದ ರಾಯಭಾರಿ ಕಚೇರಿಗೆ ಇಮೇಲ್​ ಸಂದೇಶ ಬಂದು, ಬಳಿಕ ಅಲ್ಲಿನ ಅಧಿಕಾರಿಗಳು ಗೋವಾ ಏರ್​​ಪೋರ್ಟ್​​ಗೆ ಮಾಹಿತಿ ನೀಡಿದ್ದರು. 236 ಪ್ರಯಾಣಿಕರು ಇದ್ದ ಆ ವಿಮಾನವನ್ನು ಕೂಡಲೇ ಗುಜರಾತ್​​ನ ಜಮ್ನಾಗರ್​​ನಲ್ಲಿರುವ ಏರ್​ಫೋರ್ಸ್​ ನೆಲೆಗೆ ತೆಗೆದುಕೊಂಡು ಹೋಗಿ ಲ್ಯಾಂಡ್ ಮಾಡಿಸಲಾಗಿತ್ತು. ವಿಮಾನವನ್ನು ಪರಿಶೀಲನೆ ಮಾಡಿದ ಬಳಿಕ, ಅದೊಂದು ಹುಸಿ ಕರೆ ಎಂದು ಸ್ಪಷ್ಟವಾಗಿತ್ತು. ಆದರೂ ಆ ವಿಮಾನವನ್ನು ಮರುದಿನವೇ ಅಲ್ಲಿಂದ ಟೇಕ್ ಆಫ್​ ಮಾಡಿಸಲಾಗಿತ್ತು.

ಇದನ್ನೂ ಓದಿ: Hoax Bomb Call | ಬಾಲ್ಯ ಸ್ನೇಹಿತರು ಗರ್ಲ್​ಫ್ರೆಂಡ್ಸ್​​ ಜತೆ ಕಾಲ ಕಳೆಯಲೆಂದು ವಿಮಾನಕ್ಕೆ ಬಾಂಬ್​ ಬೆದರಿಕೆ ಹಾಕಿದ್ದವ ಅರೆಸ್ಟ್​!

Exit mobile version