Site icon Vistara News

Badrinath Temple: ಇಂದು ಬಾಗಿಲು ತೆರೆದ ಬದರಿನಾಥ ದೇಗುಲ; ಪ್ರಧಾನಿ ಮೋದಿ ಹೆಸರಲ್ಲಿ ನಡೆಯಿತು ಮೊದಲ ಪೂಜೆ

Badrinath Temple Reopens today First Puja In PM Narendra Modi Name

#image_title

ಚಮೋಲಿ: ಕಳೆದ ವರ್ಷ ನವೆಂಬರ್​ನಲ್ಲಿ ಮುಚ್ಚಲ್ಪಟ್ಟಿದ್ದ ಹಿಂದುಗಳ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದಾದ ಉತ್ತರಾಖಂಡ್​ನ ಬದರಿನಾಥ್ ದೇಗುಲದ ಬಾಗಿಲುಗಳು (Badrinath Temple) ಇಂದು ಮುಂಜಾನೆ 7.10ಕ್ಕೆ ತೆರೆಯಲ್ಪಿಟ್ಟಿವೆ. ವೈದಿಕ ಶ್ಲೋಕಗಳ-ಮಂತ್ರ ಪಠಗಳೊಂದಿಗೆ ದೇವಸ್ಥಾನವನ್ನು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸಲಾಯಿತು. ಭಗವಾನ್​ ವಿಷ್ಣುವಿನ ವಿಗ್ರಹ ಮತ್ತು ಇಡೀ ದೇವಸ್ಥಾನವನ್ನು 15 ಕ್ವಿಂಟಲ್​ಗಳಷ್ಟು ಚೆಂಡು ಹೂವು (Marigold Flower)ಗಳಿಂದ ಅಲಂಕಾರ ಮಾಡಲಾಗಿತ್ತು. ಬದರಿನಾಥ ದೇಗುಲದಲ್ಲಿ ಇಂದು ಬಾಗಿಲು ತೆರೆಯುವ ಸಮಾರಂಭದ ಧಾರ್ಮಿಕ ಕಾರ್ಯಕ್ರಮಗಳು ಮುಂಜಾನೆ 4ಗಂಟೆಯಿಂದಲೇ ಪ್ರಾರಂಭವಾಗಿದ್ದವು. ದೇವರ ಭಜನೆ, ಮಂತ್ರಗಳ ಉದ್ಘೋಷ, ಸಂಗೀತ ವಾದ್ಯ ಮತ್ತು ಆರ್ಮಿ ಬ್ಯಾಂಡ್​ಗಳ ಸಮ್ಮಿಳಿತದೊಂದಿಗೆ ದೇಗುಲದ ಬಾಗಿಲು ತೆರೆಯಲಾಯಿತು. ಈ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಬಾಗಿಲು ತೆರೆದ ಬಳಿಕ ದೇವರಿಗೆ ಮೊದಲ ಪೂಜೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರಿನಲ್ಲಿ ಸಲ್ಲಿಸಲಾಯಿತು ಎಂದು ಹೇಳಲಾಗಿದೆ.

ಬದರಿನಾಥ ದೇಗುಲದ ಬಾಗಿಲುಗಳನ್ನು ತೆರೆಯುವಾಗ ಧರ್ಮಾಧಿಕಾರಿ, ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು. ಮುಖ್ಯ ಅರ್ಚಕ ವಿ.ಸಿ.ಈಶ್ವರ್​ ನಂಬೂದಿರಿ ಮತ್ತು ಇತರ ಕೆಲವು ಗಣ್ಯರು ಹಾಜರಿದ್ದರು. ಪೂಜೆಯ ಬಳಿಕ ಈಶ್ವರ್​ ನಂಬೂದಿರಿ ಅವರು ದೇಗುಲದ ಗರ್ಭಗುಡಿಯಲ್ಲಿ ನಿಂತು ಎಲ್ಲರ ಪರವಾಗಿ ಪ್ರಾರ್ಥಿಸಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು ‘ಇಂದು ದೇವಾಲಯದಲ್ಲಿ ಮೊದಲ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಮಾಡಲಾಯಿತು. ಇಂದಿನಿಂದ ಭಕ್ತರಿಗೆ ದರ್ಶನಕ್ಕೆ ದೇವಸ್ಥಾನ ಮುಕ್ತವಾಗಿರುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Kedarnath Temple: ಚಿನ್ನದ ದೇಗುಲವಾದ ಕೇದಾರನಾಥ; ಯಾತ್ರೆ ಸಮಯದಲ್ಲಿಯೇ ಚಿನ್ನದ ಕಳಸ ಪ್ರತಿಷ್ಠಾಪನೆ

ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಸ್ಥಾನಗಳನ್ನು ಒಟ್ಟಾಗಿ ಚಾರ್​ಧಾಮ್​ಗಳು ಎಂದು ಕರೆಯಲಾಗುತ್ತದೆ. ಇದರಲ್ಲಿ ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥ ದೇವಾಲಯದ ಬಾಗಿಲುಗಳು ಈಗಾಗಲೇ ತೆರೆದಿದ್ದು, ಈಗ ಬದರಿನಾಥ ಕೂಡ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಭಕ್ತರು ಕೂಡ ಚಾರ್​ಧಾಮ್​ ಯಾತ್ರೆಗೆ ಹೊರಡುತ್ತಿದ್ದಾರೆ. ಉತ್ತರಾಖಂಡ್​ನ ಈ ದೇವಸ್ಥಾನಗಳಿಗೆ ಪ್ರತಿ ವರ್ಷ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ದೇವಸ್ಥಾನಗಳು ನವೆಂಬರ್​ನವರೆಗೆ ಮಾತ್ರ ತೆರೆದಿರುತ್ತವೆ. ಚಳಿಗಾಲದಲ್ಲಿ ಹಿಮಪಾತ ಜಾಸ್ತಿ ಇರುವುದಿರಂದ ಬಾಗಿಲು ಮುಚ್ಚಿಡಲಾಗುತ್ತದೆ.

Exit mobile version