ಬಕ್ರೀದ್ ಹಬ್ಬದ ಆಚರಣೆಯಲ್ಲಿದ್ದ (Eid al Adha) ಮುಸ್ಲಿಂ ಸಮುದಾಯದವರಿಬ್ಬರಿಗೆ ಬಜರಂಗ ದಳ (Bajrang Dal)ದ ಕಾರ್ಯಕರ್ತರು ಕೋಲಿನಿಂದ ಥಳಿಸಿದ್ದಾರೆ. ಆ ಇಬ್ಬರೂ ವ್ಯಕ್ತಿಗಳು ಧರಿಸಿದ್ದ ಬಟ್ಟೆ ಹರಿದು ಹೋಗುವಷ್ಟು, ಅವರ ಮೈಯಿಗೆಲ್ಲ ಗಾಯಗಳಾಗುವಷ್ಟು ಹೊಡೆದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆ ಇಬ್ಬರನ್ನು ಬಜರಂಗದಳದ ಕಾರ್ಯಕರ್ತರ ಕೈಯಿಂದ ಬಿಡಿಸಿ, ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಹಾಗಂತ ಬಜರಂಗದಳದವರ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ. ಆರೋಪಿಗಳನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದಂತೆ ಬಜರಂಗದಳದವರು ಪ್ರತಿಭಟನೆ ನಡೆಸುತ್ತಿದ್ದರು.
ಇದೆಲ್ಲ ಆಗಿದ್ದು ಮಧ್ಯಪ್ರದೇಶದ ಖಂಡ್ವಾದಲ್ಲಿರುವ ಸಿಹಾದಾ ಎಂಬ ಗ್ರಾಮದಲ್ಲಿ. ಬುಧವಾರ ಬಕ್ರೀದ್ ಹಬ್ಬದ ನಿಮಿತ್ತ ಇಬ್ಬರು ಮುಸ್ಲಿಮರು ಬೈಕ್ನಲ್ಲಿ ಮಾಂಸ ತೆಗೆದುಕೊಂಡು ಹೋಗುತ್ತಿದ್ದರು. ಖಾಂಡ್ವಾದ ಪಾಲಿಟೆಕ್ನಿಕ್ ಕಾಲೇಜಿನ ಬಳಿ ಬಜರಂಗದಳದ ಕಾರ್ಯಕರ್ತರು ಇವರನ್ನು ತಡೆದಿದ್ದಾರೆ. ನಿಮ್ಮ ಬಳಿ ಇರುವುದು ಗೋಮಾಂಸ ಎಂದು ಬಜರಂಗದಳದ ಕಾರ್ಯಕರ್ತರು ಹೇಳಿದ್ದಾರೆ. ಆಗ ಮುಸ್ಲಿಮರು ಇಲ್ಲ, ನಾವು ತೆಗೆದುಕೊಂಡು ಹೋಗುತ್ತಿರುವುದು ಮಟನ್ ಎಂದು ವಾದಿಸಿದ್ದಾರೆ. ಆಗ ಸಿಟ್ಟಾದ ಬಜರಂಗದಳದವರು ಅವರಿಬ್ಬರನ್ನೂ ಥಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಗೋಹತ್ಯೆ ನಿಷೇಧಗೊಂಡಿದೆ. 2019ರಲ್ಲಿ ಅಲ್ಲಿ ಗೋಹತ್ಯಾ ನಿಷೇಧ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಅದರ ಅನ್ವಯ ಯಾರೇ ಆದರೂ ಗೋಹತ್ಯೆ ಮಾಡಿದ್ದು, ಗೋಮಾಂಸ ಸಾಗಣೆ ಮಾಡಿದ್ದು ಕಂಡು ಬಂದರೆ ಅವರಿಗೆ 6ತಿಂಗಳಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, 25 ಸಾವಿರ ರೂ.ದಿಂದ 50 ಸಾವಿರ ರೂ.ವರೆಗೆ ದಂಡ ವಿಧಿಸಬಹುದು.
ಇನ್ನು ಈ ಕೇಸ್ ಬಗ್ಗೆ ನಗರದ ಸಿರಿಯಾ ಕೋರ್ಟ್ನ ಜಡ್ಜ್ ಪ್ರತಿಕ್ರಿಯೆ ನೀಡಿ, ಖಾಂಡ್ವಾ ಸೇರಿ ಎಲ್ಲ ನಗರಗಳ ಕಸಾಯಿಖಾನೆಗಳ ಮೇಲೆ ಕೂಡ ಆಯಾ ಸ್ಥಳೀಯ ಆಡಳಿತಗಳು ಗಮನ ಇಟ್ಟಿವೆ. ಅಲ್ಲೆಲ್ಲ ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗಿದೆ. ಯಾರೂ ಗೋಮಾಂಸವನ್ನು ಕೊಡುವುದಿಲ್ಲ. ಕೆಲವು ಸಂಘಟನೆಗಳು ವೃಥಾ ಇಂಥ ಗಲಾಟೆ ಸೃಷ್ಟಿಸುತ್ತಿವೆ. ಆರೋಪ ಮಾಡುತ್ತಿವೆ ಎಂದು ಹೇಳಿದ್ದಾರೆ. ಹಾಗೇ ಇನ್ನೊಂದೆಡೆ ಬಜರಂಗ ದಳ ಜಿಲ್ಲಾ ಕೋ ಆರ್ಡಿನೇಟರ್ ಆದಿತ್ಯ ಮೆಹ್ತಾ ಅವರು ಪ್ರತಿಕ್ರಿಯೆ ನೀಡಿ ‘ಇಬ್ಬರು ಮುಸ್ಲಿಮರು ಗೋಮಾಂಸ ಸಾಗಿಸುತ್ತಿರುವದನ್ನು ನೋಡಿಯೇ ನಮ್ಮ ಕಾರ್ಯಕರ್ತರು ಅವರನ್ನ ಹಿಡಿದಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ: Beef Smuggling: ಅಕ್ರಮವಾಗಿ ಗೋಮಾಂಸ ಸಾಗಣೆ; ಮುಸ್ಲಿಂ ವ್ಯಕ್ತಿಯನ್ನು ಬಡಿದು ಕೊಂದ ಜನ
ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್ಎಸ್ಪಿ ಸತ್ಯೇಂದ್ರ ಶುಕ್ಲಾ ‘ಮುಸ್ಲಿಂ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಾಗಿದೆ. ಅವರು ಒಯ್ಯುತ್ತಿದ್ದ ಮಾಂಸಕ್ಕೆ ಯಾವುದೇ ರಶೀದಿ ಇರಲಿಲ್ಲ. ಹಾಗೇ ಅದು ಕುರಿ ಮಾಂಸದಂತೆ ಇರಲಿಲ್ಲ. ಸದ್ಯ ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ಮಾಂಸವನ್ನು ಕಳಿಸಲಾಗಿದ್ದು, ಅವರು ಪರಿಶೀಲನೆ ನಡೆಸಲಿದ್ದಾರೆ. ಇನ್ನು ಹಲ್ಲೆ ಮಾಡಿದ್ದಕ್ಕೆ ಬಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.