ಪರಾರಿಯಾಗಿರುವ ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ (Amritpal Singh) ಜಾಡು ಹಿಡಿದು, ಹುಡುಕಾಟ ನಡೆಸುತ್ತಿರುವ ಪೊಲೀಸರು ಈಗ ಹರ್ಯಾಣದ ಮಹಿಳೆಯೊಬ್ಬರನ್ನು ಅರೆಸ್ಟ್ ಮಾಡಿ, ವಿಚಾರಣೆಗೆ ಒಳಪಡಿಸಿದ್ದಾರೆ. ಮಾ.18ರಂದು ಅಮೃತ್ಪಾಲ್ ಸಿಂಗ್ ಮತ್ತು ಆತನ ಸಹಚರರನ್ನು ಪಂಜಾಬ್ನ ನಾಕೋಡರ್ ಎಂಬಲ್ಲಿ ಪೊಲೀಸರು ಅಡ್ಡಗಟ್ಟಿದರು. ಆದರೆ ಸಚಹರರನ್ನು ಮಾತ್ರ ಬಂಧಿಸಲು ಸಾಧ್ಯವಾಯಿತು ಹೊರತು, ಅಮೃತ್ಪಾಲ್ ಸಿಗಲಿಲ್ಲ. ಆತ ಅಲ್ಲಿಂದ ತಪ್ಪಿಸಿಕೊಂಡು, ಬಟ್ಟೆ ಬದಲಿಸಿಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆತ ಪರಾರಿಯಾಗಲು ಬಳಸಿದ್ದ ಪ್ಲಾಟಿನಾ ಬೈಕ್ ಕೂಡ ಸಿಕ್ಕಿದೆ. ಅವನ ವಿವಿಧ ಫೋಟೋಗಳೂ ಲಭ್ಯವಾಗುತ್ತಿವೆ. ಆದರೆ ಅಮೃತ್ಪಾಲ್ ಮಾತ್ರ ಸಿಗುತ್ತಿಲ್ಲ.
ಹೀಗಿರುವಾಗ ಹರ್ಯಾಣದ ಬಲ್ಜಿತ್ ಕೌರ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ನಾಕೋಡರ್ ಬಳಿ ತಪ್ಪಿಸಿಕೊಂಡು ಹೋದ ಅಮೃತ್ಪಾಲ್ ಸಿಂಗ್ ಮತ್ತು ಆತನ ಇನ್ನೊಬ್ಬ ಸಹಚರ ಪಾಪಲ್ಪ್ರೀತ್ ಸಿಂಗ್ಗೆ ಈಕೆ ತನ್ನ ಮನೆಯಲ್ಲಿ ಭಾನುವಾರ ರಾತ್ರಿ ಉಳಿಯಲು ಅವಕಾಶ ಕೊಟ್ಟಿದ್ದಳು ಎಂಬ ಕಾರಣಕ್ಕೆ ಪೊಲೀಸರು ಬಂಧಿಸಿದ್ದಾರೆ. ಬಲ್ಜಿತ್ ಕೌರ್ ಮನೆ ಇರುವುದು ಹರ್ಯಾಣದ ಕುರುಕ್ಷೇತ್ರದ ಶಾಹಾಬಾದ್ನಲ್ಲಿ. ಹರ್ಯಾಣ ಪೊಲೀಸರು ಆಕೆಯನ್ನು ಬಂಧಿಸಿ, ಬಳಿಕ ಪಂಜಾಬ್ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.
ಭಾನುವಾರ ರಾತ್ರಿ ಬಲ್ಜಿತ್ ಕೌರ್ ಮನೆಯಲ್ಲಿಯೇ ಉಳಿದ ಅಮೃತ್ಪಾಲ್ ಮತ್ತು ಆತನ ಸಹಚರ ಸೋಮವಾರ ಬೆಳಗ್ಗೆ ಅಲ್ಲಿಂದ ಪರಾರಿಯಾಗಿದ್ದಾರೆ. ಅದಾದ ಮೇಲೆ ಕೌರ್ ಸಹೋದರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ವಿಷಯ ತಿಳಿದ ತಕ್ಷಣದ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಇನ್ನು ವಿಚಾರಣೆ ವೇಳೆ ಬಲ್ಜಿತ್ ಕೌರ್ ಕೂಡ ಈ ವಿಚಾರ ಒಪ್ಪಿಕೊಂಡಿದ್ದಾರೆ. ಅಮೃತ್ಪಾಲ್ ಮತ್ತು ಪಾಪಲ್ಪ್ರೀತ್ ಸಿಂಗ್ ಇಬ್ಬರೂ ಭಾನುವಾರ ಸಂಜೆ ಸ್ಕೂಟರ್ನಲ್ಲಿ ನಮ್ಮ ಮನೆಗೆ ಬಂದರು. ಬಳಿಕ ನನ್ನ ಮನೆಯಲ್ಲಿಯೇ ಬಟ್ಟೆ ಬದಲಿಸಿದರು. ನನಗೆ ಎರಡು ವರ್ಷಗಳಿಂದಲೂ ಪಾಪಲ್ಪ್ರೀತ್ ಸಿಂಗ್ ಗೊತ್ತು. ಆತ ಈ ಹಿಂದೆಯೂ ಹಲವು ಬಾರಿ ನನ್ನ ಮನೆಗೆ ಬಂದು ಉಳಿದಿದ್ದ’ ಎಂದು ತಿಳಿಸಿದ್ದಾಳೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: Amritpal Singh: ತ್ರಿಚಕ್ರ ವಾಹನದಲ್ಲಿ ಬೈಕ್ನೊಂದಿಗೆ ಕುಳಿತ ಅಮೃತ್ಪಾಲ್ ಸಿಂಗ್; ಇನ್ನೊಂದು ಫೋಟೋ ವೈರಲ್
ಯುಕೆಗೆ ಹೋಗಿ ನೆಲೆಸಲು ಹುನ್ನಾರ?
ದೇಶದ್ರೋಹಿ ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ ಈಗ ಯುಕೆಗೆ ಹೋಗುವ ಪ್ರಯತ್ನದಲ್ಲಿದ್ದಾನೆ. ಯುನೈಟೆಡ್ ಕಿಂಗ್ಡಮ್ಗೆ ತೆರಳಿ, ಅಲ್ಲಿನ ಪೌರತ್ವ ಪಡೆದು ಭಾರತದಲ್ಲಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಆತ ಹುನ್ನಾರ ನಡೆಸುತ್ತಿದ್ದಾನೆ ಎಂದು ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಆತ ಫೆಬ್ರವರಿಯಲ್ಲೇ ಬ್ರಿಟಿಷ್ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ ಎಂದೂ ಹೇಳಲಾಗಿದೆ. ಈತ ಫೆಬ್ರವರಿಯಲ್ಲಿ ಕಿರೆಣ್ ಕೌರ್ ಎಂಬಾಕೆಯನ್ನು ಮದುವೆಯಾಗಿದ್ದಾನೆ. ಕಿರೆಣ್ ಯುಕೆ ನಾಗರಿಕಳಾಗಿದ್ದು, ಅದರ ಆಧಾರದ ಮೇಲೆಯೇ ಪಾಲ್ ಕೂಡ ಅಲ್ಲಿನ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾನೆ ಎಂದು ಹೇಳಲಾಗಿದೆ. ಆದರೆ ಅಮೃತ್ಪಾಲ್ ಅರ್ಜಿ ವಿಚಾರದಲ್ಲಿ ಬ್ರಿಟಿಷ್ ಸರ್ಕಾರ ಇನ್ನೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.