Site icon Vistara News

ಚೀನಾದ ಸಿಸಿಟಿವಿ ಕ್ಯಾಮೆರಾಗಳನ್ನು ಭಾರತದಲ್ಲಿ ನಿಷೇಧಿಸಿ, ಅವು ಬೀಜಿಂಗ್​​ನ ಕಣ್ಣುಗಳು; ಪ್ರಧಾನಿಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ​

Ban Chinese CCTV cameras Congress MLA urges PM Modi In letters

#image_title

ನವ ದೆಹಲಿ: ಚೈನೀಸ್​ ಸಿಸಿಟಿವಿ ಕ್ಯಾಮೆರಾಗಳನ್ನು (Chinese CCTV cameras) ಭಾರತದಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ನಿಷೇಧಿಸುವಂತೆ ಅರುಣಾಚಲ ಕಾಂಗ್ರೆಸ್​ ಶಾಸಕ ನಿನೊಂಗ್ ಎರಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ‘ಚೈನೀಸ್​ ಸಿಸಿಟಿವಿ ಕ್ಯಾಮೆರಾಗಳು ಅಪಾಯಕಾರಿ. ಅವು ಇಲ್ಲಿ, ಬೀಜಿಂಗ್​​ನ ಕಣ್ಣುಗಳು-ಕಿವಿಗಳಂತೆ ಕೆಲಸ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಪಾಸಿಘಾಟ್​ ಪಶ್ಚಿಮದ ಶಾಸಕರು, ಮಾಜಿ ಕೇಂದ್ರ ಸಚಿವರೂ ಆಗಿರುವ ನಿನೊಂಗ್ ಎರಿಂಗ್ ಅವರು ತಾವು ಪ್ರಧಾನಿಗೆ ಬರೆದ ಪತ್ರವನ್ನು ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ನಮ್ಮ ದೇಶದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಚೀನಾ ನಿರ್ಮಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಬೇಕು. ಚೀನಾದ ಸಿಸಿಟಿವಿ ಕ್ಯಾಮೆರಾಗಳು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಬಲ್ಲವು. ಬೀಜಿಂಗ್​​ಗೂ ಇದರ ಮೂಲಕ ಮಾಹಿತಿ ರವಾನೆಯಾಗುವ ಸಾಧ್ಯತೆ ಇರುತ್ತದೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.

ಪ್ರಸ್ತುತ ಚೀನಾ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಪದೇಪದೆ ದಾಳಿ ನಡೆಸುತ್ತಿರುವುದಲ್ಲದೆ, ಭಾರತದಲ್ಲಿ ಸೈಬರ್​ ಅಟ್ಯಾಕ್​ ಕೂಡ ಮಾಡುತ್ತಿದೆ. ನಮ್ಮ ಹಲವು ವೆಬ್​ಸೈಟ್​ಗಳನ್ನೆಲ್ಲ ಹ್ಯಾಕ್​ ಮಾಡಿ, ಮಾಹಿತಿ ಕದಿಯುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಅದರ ಸಿಸಿಟಿವಿ ಕ್ಯಾಮೆರಾಗಳನ್ನು ನಂಬುವುದು ಕಷ್ಟವೇ ಆಗಿದೆ. ಚೀನಾ ಒಡ್ಡುತ್ತಿರುವ ಇಂಥ ಅಪಾಯವನ್ನು ತಡೆಗಟ್ಟಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿನೊಂಗ್ ಎರಿಂಗ್ ಹೇಳಿದ್ದಾರೆ.

ಚೀನಾದ ಸಿಸಿಟಿವಿ ನೆಟ್ವರ್ಕ್​​ನಲ್ಲಿ ಬಳಸುವ ಇಂಟರ್​ನೆಟ್​ ಪ್ರೊಟೊಕಾಲ್​ (ಐಪಿ) ಕ್ಯಾಮೆರಾಗಳು ಮತ್ತು ಇಂಟರ್​ನೆಟ್​ ಚಾಲಿತ ಡಿಜಿಟಲ್​ ವಿಡಿಯೊ ರೆಕಾರ್ಡಿಂಗ್​ ಉಪಕರಣಗಳು ಚೈನೀಸ್​ ಹ್ಯಾಕರ್​ ಜತೆಗೆ ರಾಜಿ ಒಪ್ಪಂದ ಮಾಡಿಕೊಂಡು, ಹೇಗೆಲ್ಲ ಪ್ರಮುಖ ಮಾಹಿತಿ ಕದಿಯುತ್ತಿದ್ದಾರೆ ಎಂಬುದನ್ನೂ ಕಾಂಗ್ರೆಸ್ ಶಾಸಕ ಹೇಳಿದ್ದಾರೆ. ಭಾರತದಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಸುಮಾರು 20 ಲಕ್ಷ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಶೇ.90ಕ್ಕಿಂತ ಹೆಚ್ಚಿನವು ಚೀನಾ ಸರ್ಕಾರದ ಒಡೆತನಕ್ಕೆ ಸೇರಿದ ಕಂಪನಿಗಳು ನಿರ್ಮಿಸಲ್ಪಟ್ಟವೇ ಆಗಿದೆ. ಇದು ನಿಜಕ್ಕೂ ಅಪಾಯಕಾರಿ. ಹಾಗಾಗಿ ಕೂಡಲೇ ಚೀನಾ ನಿರ್ಮಿತ ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆದು ಹಾಕಬೇಕು, ಮತ್ತೆ ಅವುಗಳನ್ನು ನಿಷೇಧಿಸಬೇಉ ಎಂದು ನಾನು ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತೇನೆ’ ಎಂದು ಹೇಳಿದ್ದಾರೆ.

Exit mobile version