ಕರ್ನಾಟಕ ವಿಧಾನಸಭೆ ಚುನಾವಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ (PM Modi)ಯವರು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿಯವರು ರಾಜ್ಯದಲ್ಲಿ ಈಗಾಗಲೇ 7 ದಿನ, 23 ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮತ ಯಾಚನೆ ಮಾಡಿದ್ದಾರೆ. ಈ ವಿಷಯವಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot)ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್ ಗೆಹ್ಲೋಟ್ ‘ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi)ಯವರ ಚುನಾವಣಾ ಪ್ರಚಾರವನ್ನು ಚುನಾವಣಾ ಆಯೋಗ ನಿಷೇಧ ಮಾಡಬೇಕು. ದಕ್ಷಿಣ ಭಾರತದ ರಾಜ್ಯ ಕರ್ನಾಟಕದಲ್ಲಿ ಮೋದಿಯವರು ಧರ್ಮದ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಚುನಾವಣಾ ಪ್ರಚಾರ (Election Campaign)ಗಳಲ್ಲಿ ಯಾರೇ ಆಗಲಿ ಧರ್ಮದ ಹೆಸರಲ್ಲಿ, ಧಾರ್ಮಿಕ ವಿಷಯಗಳ ಆಧಾರದ ಮೇಲೆ ಮತ ಕೇಳಿದರೆ, ಅಂಥವರ ಪ್ರಚಾರವನ್ನು ನಿರ್ಬಂಧಿಸಬಹುದು ಎಂದು ಕಾನೂನು ಇದೆ’ ಎಂದು ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗ ದಳ ನಿಷೇಧಿಸುವುದಾಗಿ ಹೇಳಿದೆ. ರಾಜಸ್ಥಾನದಲ್ಲಿ ಕೂಡ ಬಜರಂಗ ದಳ ನಿಷೇಧಿಸಲಾಗುತ್ತದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಅಶೋಕ್ ಗೆಹ್ಲೋಟ್ ‘ಸಂಘಟನೆಯ ಹೆಸರು ಏನೇ ಇರಲಿ. ಆದರೆ ಆ ಸಂಘಟನೆ ಏನು ಕೆಲಸ ಮಾಡುತ್ತಿದೆ? ಸಮಾಜದಲ್ಲಿ ಅದರ ಪಾತ್ರವೇನು ಎಂಬುದು ಮುಖ್ಯವಾದ ಪ್ರಶ್ನೆಯಾಗುತ್ತದೆ’ ಎಂದು ಹೇಳಿದರು. ನಿಷೇಧದ ಬಗ್ಗೆ ಹೆಚ್ಚೇನೂ ಅವರು ಪ್ರತಿಕ್ರಿಯೆ ನೀಡಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಇತ್ತೀಚೆಗೆ ಪ್ರಣಾಳಿಕೆ ಬಿಡುಗಡೆ ಮಾಡುವಾಗ ಹೀಗೊಂದು ವಿವಾದ ಸೃಷ್ಟಿಸಿದೆ. ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದರೆ, ಬಜರಂಗದಳ ಸೇರಿ, ಪಿಎಫ್ಐನಂಥ ಎಲ್ಲ ಸಂಘಟನೆಗಳನ್ನೂ ಬ್ಯಾನ್ ಮಾಡುತ್ತೇವೆ ಎಂದು ಅದು ಹೇಳಿಕೊಂಡಿದ್ದು, ಆ ಪಕ್ಷಕ್ಕೆ ಮುಳ್ಳಾಗುತ್ತಿದೆ.
ಇದನ್ನೂ ಓದಿ: Karnataka Election 2023: ರಾಜ್ಯ ವಿಧಾನಸಭೆ ಚುನಾವಣೆ ಕಣದ ಕ್ಷಣಕ್ಷಣದ ಸುದ್ದಿಗಳು: ರಾಜಧಾನಿಯಲ್ಲಿ ಇಂದು ಮತ್ತೆ ನಮೋ ಮೋಡಿ
ಶುಕ್ರವಾರ ಕರ್ನಾಟಕದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ‘ಕಾಂಗ್ರೆಸ್ನವರು ಮತಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ವೋಟ್ ಬ್ಯಾಂಕ್ಗಾಗಿ ಕಾಂಗ್ರೆಸ್ ಭಯೋತ್ಪಾದಕತೆಯ ಎದುರು ಶರಣಾಗಿದೆ. ಉಗ್ರರನ್ನು ಪೋಷಿಸಿ, ಅವರಿಗೆ ಆಶ್ರಯ ನೀಡಿದೆ ಎಂದು ಹೇಳಿದ್ದರು. ಅವರ ಈ ಮಾತುಗಳ ವಿರುದ್ಧ ಕಾಂಗ್ರೆಸ್ ತಿರುಗಿಬಿದ್ದಿದೆ. ಈಗಾಗಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆದು ದೂರು ನೀಡಿರುವ ಕಾಂಗ್ರೆಸ್ ‘ಪ್ರಧಾನಿ ನರೇಂದ್ರ ಮೋದಿ ಲಕ್ಷ್ಮಣ ರೇಖೆ ಉಲ್ಲಂಘಿಸಿದ್ದಾರೆ. ಚುನಾವಣಾ ಹೊತ್ತಲ್ಲಿ ಅವರು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಹೇಳಿದೆ.