ನವ ದೆಹಲಿ: ಧರ್ಮ ಹಾಗೂ ಸಿದ್ಧಾಂತದ ಹೆಸರಿನಲ್ಲಿ ಈ ದೇಶದ ಸಾಮರಸ್ಯ ಕದಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಈ ಬಗ್ಗೆ ನಾವೆಲ್ಲ ಎಚ್ಚರಿಕೆಯಿಂದ ಇರಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಹೇಳಿದ್ದಾರೆ. ದೆಹಲಿಯ ಅಖಿಲ ಭಾರತೀಯ ಸೂಫಿ ಸಜ್ಜಾದಾನಶೀನ ಕೌನ್ಸಿಲ್ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಧಾರ್ಮಿಕ ಮುಖಂಡರೆಲ್ಲ ಸೇರಿ ಚರ್ಚಿಸಿ, ಶಾಂತಿ ಮತ್ತು ಏಕತೆ ರಕ್ಷಣೆಗಾಗಿ ನಿರ್ಣಯ ಅಂಗೀಕರಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇಳೆ ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ)ನಂಥ ಸಂಘಟನೆ ಬ್ಯಾನ್ ಮಾಡುವಂತೆ ಮುಸ್ಲಿಂ ಪ್ರಮುಖ ನಾಯಕರೇ ಆಗ್ರಹಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಕ್ತವಾಗಿ ಮಾತನಾಡಿದ ಅಜಿತ್ ದೋವಲ್, ʼಭಾರತದ ಬೆಳವಣಿಗೆಗೆ ಮಾರಕವಾಗುವಂಥ ಸನ್ನಿವೇಶ ಸೃಷ್ಟಿಸಲು ಒಂದಷ್ಟು ಜನ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ಧರ್ಮದ ಹೆಸರಲ್ಲಿ ಸಂಘರ್ಷ ಹುಟ್ಟುಹಾಕಿ, ಕ್ರೌರ್ಯ ಪ್ರದರ್ಶನ ಮಾಡುತ್ತಿವೆ. ಇದು ನಮ್ಮ ದೇಶದ ಆಂತರಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವ ಜತೆ, ಹೊರ ರಾಷ್ಟ್ರಗಳೊಂದಿಗಿನ ಸಂಬಂಧದ ಮೇಲೆ ಕೂಡ ಕೆಟ್ಟ ಪ್ರಭಾವ ಬೀರುತ್ತಿದೆʼ ಎಂದು ಹೇಳಿದರು.
ಇತ್ತೀಚೆಗೆ ದೇಶದಲ್ಲಿ ಪದೇಪದೆ ಒಂದಲ್ಲ ಒಂದು ವಿಷಯಕ್ಕೆ ಕೋಮು ಗಲಭೆ ಹರಡುತ್ತಿದೆ. ಅದರಲ್ಲೂ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ವಿರುದ್ಧ ಮಾಡಿದ ಅವಹೇಳನವಂತೂ ಇಡೀ ರಾಷ್ಟ್ರಾದ್ಯಂತ ದೊಡ್ಡಮಟ್ಟದ ಗಲಭೆ ಸೃಷ್ಟಿ ಮಾಡಿತ್ತು. ಕೆಲವು ಮುಸ್ಲಿಂ ರಾಷ್ಟ್ರಗಳೂ ಈ ಬಗ್ಗೆ ಸ್ಪಷ್ಟನೆ ಕೇಳಿದ್ದವು. ಅಲ್ಲೆಲ್ಲ, ಭಾರತ ವಿರೋಧಿ ಪೋಸ್ಟರ್‌ಗಳು ರಾರಾಜಿಸಿದ್ದವು. ಭಾರತದ ಉತ್ಪನ್ನಗಳನ್ನು ನಿಷೇಧಿಸಿ ಎಂಬ ಬಹಿಷ್ಕಾರ ಪ್ರತಿಭಟನೆಯೂ ನಡೆದಿತ್ತು. ಇದೆಲ್ಲ ಘಟನೆ ನಡೆದು ತಿಂಗಳ ಬಳಿಕ ಅಜಿತ್ ದೋವಲ್ ಹೀಗೊಂದು ಎಚ್ಚರಿಕೆ ನೀಡಿದ್ದಾರೆ.
ಇಂದಿನ ನಿರ್ಣಯವೇನು?
ಇಂದು ನಡೆದ ಕಾರ್ಯಕ್ರಮದಲ್ಲಿ ಎಂಟು ಪಾಯಿಂಟ್‌ಗಳ ನಿರ್ಣಯ ಅಂಗೀಕರಿಸಿ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಪಿಎಫ್‌ಐನಂಥ ತೀವ್ರಗಾಮಿ ಸಂಘಟನೆಗಳನ್ನು ನಿಷೇಧಿಸಬೇಕು ಎಂಬ ನಿರ್ಣಯವೂ ಇದರಲ್ಲಿ ಸೇರಿದೆ. ಪಿಎಫ್‌ಐ ಮತ್ತು ಅದರಂಥ ಇನ್ನೂ ಕೆಲವು ಸಂಘಟನೆಗಳು ಸಮಾಜ ಒಡೆಯುವ, ದೇಶ ವಿಭಜಿಸುವ ಸಿದ್ಧಾಂತದಿಂದ ಸಂಘರ್ಷ ಸೃಷ್ಟಿಸುತ್ತಿವೆ. ಹಾಗಾಗಿ ಅವುಗಳನ್ನೆಲ್ಲ ಆದಷ್ಟು ಶೀಘ್ರದಲ್ಲೇ ಬ್ಯಾನ್ ಮಾಡಬೇಕು ಎಂದು ಮುಸ್ಲಿಂ ಮುಖಂಡರೇ ಬೇಡಿಕೆ ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ಹೊಸ ಮಾದರಿಯ ಯುದ್ಧ ಎದುರಿಸಲು ಅಗ್ನಿಪಥ್ ಅಸ್ತ್ರ; ಎನ್‌ಎಸ್‌ಎ ಅಜಿತ್ ದೋವಲ್ ಪ್ರತಿಪಾದನೆ