ತೆಲಂಗಾಣ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪುತ್ರಿ, ಎಂಎಲ್ಸಿ ಕವಿತಾ ಕಲ್ವಕುಂಟ್ಲ ಪಾತ್ರವೂ ಇದೆ ಎಂದು ಆರೋಪಿಸಿ ಇಂದು ಜನಗಾಂವ್ನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸುತ್ತಿದ್ದ ತೆಲಂಗಾಣ ಬಿಜೆಪಿ ರಾಜ್ಯ ಮುಖ್ಯಸ್ಥ ಬಂಡಿ ಸಂಜಯ್ (Bandi Sanjay) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಮಧ್ಯಾಹ್ನವೂ ಕೂಡ ಒಂದಷ್ಟು ಬಿಜೆಪಿ ನಾಯಕರು ಕವಿತಾ ಕಲ್ವಕುಂಟ್ಲ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ದೆಹಲಿ ಅಬಕಾರಿ ಅಕ್ರಮದಲ್ಲಿ ಭಾಗಿಯಾಗಿರುವ ಕವಿತಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಇಂದು ಕೂಡ ಅವರ ಪಾದಯಾತ್ರೆ-ಮೆರವಣಿಗೆ ಮುಂದುವರಿದಿತ್ತು. ಅದನ್ನು ತಡೆದ ಪೊಲೀಸರು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಮತ್ತು ಇತರ ಹಲವು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಇಂದು ಜನಗಾಂವ್ನಲ್ಲಿ ಬಿಜೆಪಿಗರನ್ನು ಪೊಲೀಸರು ಬಂಧಿಸುವ ವೇಳೆ ಸಣ್ಣಮಟ್ಟದ ಗಲಾಟೆಯೂ ಆಗಿದೆ. ಪೊಲೀಸರು ತಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬಂಡಿ ಸಂಜಯ್ ಆರೋಪಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ‘ಇಂದು ತೆಲಂಗಾಣ ಬಿಜೆಪಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿತ್ತು. ಆದರೆ ಪೊಲೀಸರು ಮತ್ತು ಟಿಆರ್ಎಸ್ ಗೂಂಡಾಗಳು ನಮ್ಮ ಮೇಲೆ ಅಟ್ಯಾಕ್ ಮಾಡಿದರು. ಇವರು ಮಾಡಿದ ಹಲ್ಲೆಯಿಂದ ಬಿಜೆಪಿ ನಾಯಕರು ಹಲವರು ಗಾಯಗೊಂಡಿದ್ದಾರೆ. ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನು ಸರ್ಕಾರವೇ ಮಾಡಬೇಕು. ಮದ್ಯ ನೀತಿ ಹಗರಣಕ್ಕೆ ಸಂಬಂಧಪಟ್ಟ ಸತ್ಯ ಹೊರಬೀಳಬೇಕು. ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರ ಕ್ರಮ, ಟಿಆರ್ಎಸ್ ಗೂಂಡಾಗಳ ಹಲ್ಲೆಗೆ ನಾವು ಹೆದರುವುದಿಲ್ಲ’ ಎಂದು ಹೇಳಿದ್ದಾರೆ.
ಹಾಗೇ ಇನ್ನೊಂದು ಟ್ವೀಟ್ ಮಾಡಿ, ‘ದೆಹಲಿ ಅಬಕಾರಿ ಹಗರಣದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಪುತ್ರಿ ಕಲ್ವಕುಂಟ್ಲ ಕವಿತಾ ಹೆಸರೂ ಕೇಳಿಬಂದಿದೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು, ನಾಯಕರು ಎಲ್ಲ ಸೇರಿ ಅವರ ಮನೆಯ ಎದುರು ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಅದೆಷ್ಟೋ ಬಿಜೆಪಿ ನಾಯಕರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಟಿಆರ್ಎಸ್ ಗೂಂಡಾಗಳು ಬಿಜೆಪಿ ಕಾರ್ಯಕರ್ತರ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ’ ಎಂದು ಹೇಳಿದ್ದಾರೆ.
ಆರೋಪ ಅಲ್ಲಗಳೆದಿರುವ ಕವಿತಾ
ಬಿಜೆಪಿ ಆರೋಪವನ್ನು ಕವಿತಾ ಕಲ್ವಕುಂಟ್ಲ ಅಲ್ಲಗಳೆದಿದ್ದಾರೆ. ದೆಹಲಿಯ ಅಬಕಾರಿ ನೀತಿ ಹಗರಣದಲ್ಲಾಗಲೀ, ಅದಕ್ಕೆ ಸಂಬಂಧಪಟ್ಟ ಹಣಕಾಸಿನ ಅಕ್ರಮದಲ್ಲಾಗಲೀ ನನ್ನ ಪಾತ್ರವೇನೂ ಇಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ‘ಕೇಂದ್ರ ತನಿಖಾ ದಳಗಳೆಲ್ಲ ಬಿಜೆಪಿ ಕೇಂದ್ರ ಸರ್ಕಾರದ ಕೈಯಲ್ಲೇ ಇರುವುದರಿಂದ, ನನ್ನ ಪಾತ್ರವನ್ನು ಸೃಷ್ಟಿಸಿಕೊಂಡು ತನಿಖೆ ನಡೆಸಬಹುದು, ನಾನದಕ್ಕೆ ಸಂಪೂರ್ಣವಾಗಿ ಬೆಂಬಲ ಕೊಡುತ್ತೇನೆ’ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ಗೆ ಅವಹೇಳನ; ತೆಲಂಗಾಣ ಬಿಜೆಪಿ ಶಾಸಕ ಬಂಧನ