ತೆಲಂಗಾಣ ಬಿಜೆಪಿ ಘಟಕದ ಮುಖ್ಯಸ್ಥ ಬಂಡಿ ಸಂಜಯ್ ಅವರು ಐದನೇ ಹಂತದ ಪ್ರಜಾ ಸಂಗ್ರಾಮ ಯಾತ್ರೆಯನ್ನು ಪ್ರಾರಂಭಿಸಲು ನಿರ್ಮಲ್ ಜಿಲ್ಲೆಗೆ ತೆರಳುತ್ತಿದ್ದಾಗ, ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಲ್ಲದೆ, ಸದ್ಯ ಗೃಹ ಬಂಧನದಲ್ಲಿ ಇರಿಸಲಾಗಿದೆ. ಇಂದಿನಿಂದ (ನವೆಂಬರ್ 28) ಅವರು ನಿರ್ಮಲ್ ಜಿಲ್ಲೆಯ ಬೈಂಸಾದಿಂದ ಪ್ರಜಾ ಸಂಗ್ರಾಮ ಯಾತ್ರೆ ಪ್ರಾರಂಭಿಸಲು ನಿರ್ಧರಿಸಿದ್ದರು. ಇಲ್ಲಿ ನಡೆಯಬೇಕಿದ್ದ ಸಾರ್ವಜನಿಕ ಸಭೆಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಪಾಲ್ಗೊಳ್ಳುವವರಿದ್ದರು.
ಆದರೆ ತೆಲಂಗಾಣ ಪೊಲೀಸರು ಈ ಪಾದಯಾತ್ರೆಗೆ ಮತ್ತು ಸಾರ್ವಜನಿಕ ಸಭೆಗೆ ಅನುಮತಿ ನೀಡಲಿಲ್ಲ. ಅಲ್ಲಿಗೆ ಹೊರಟಿದ್ದ ಸಂಜಯ್ ಬಂಡಿ ಮತ್ತು ಬಿಜೆಪಿ ಕಾರ್ಯಕರ್ತರನ್ನು ಮಾರ್ಗ ಮಧ್ಯೆಯೇ ಅಂದರೆ ಜಗ್ತಿಯಾಲ್ ಜಿಲ್ಲೆಯ ತಾಟಿಪಲ್ಲಿ ಎಂಬಲ್ಲಿ ತಡೆದು ವಶಕ್ಕೆ ಪಡೆದಿದ್ದಾರೆ. ಹೀಗೆ ನಿರ್ಮಲ್ಗೆ ಹೊರಟಿದ್ದವರನ್ನು ಪೊಲೀಸರು ತಡೆದ ವೇಳೆ ಅಲ್ಲಿ ಗಲಾಟೆ ನಡೆದಿತ್ತು. ತಡೆಯಲು ಬಂದ ಪೊಲೀಸರ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಒಂದಷ್ಟು ಜನರಂತೂ ರಸ್ತೆಯ ಮೇಲೆ ಮಲಗಿ, ಪ್ರತಿರೋಧ ಒಡ್ಡಿದರು. ಬಂಡಿ ಸಂಜಯ್ ಅರೆಸ್ಟ್ ಆಗುತ್ತಿದ್ದಂತೆ ರಸ್ತೆ ಮೇಲೆ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಆಕ್ರೋಶಗೊಂಡಿದ್ದ ಬಿಜೆಪಿ ನಾಯಕ ಬಂಡಿ ಸಂಜಯ್, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಟ್ವೀಟ್ ಮಾಡಿದ ಅವರು ‘ಬೈಂಸಾ ಪ್ರದೇಶ ನಿರ್ಬಂಧಿತ ಸ್ಥಳವಾ? ನಾವ್ಯಾಕೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ? ನಾವು ಶಾಂತಿಯುತವಾಗಿ ಸಭೆ ನಡೆಸಲು ಬಿಡದ ಮುಖ್ಯಮಂತ್ರಿ, ಈ ರಾಜ್ಯ ರಕ್ಷಣೆ ಮಾಡುತ್ತಾರಾ? ರಾಜ್ಯದಲ್ಲಿ ಶಾಂತಿ ಸ್ಥಾಪಿಸುತ್ತಾರಾ? ನಾವು 5ನೇ ಹಂತದ ಪ್ರಜಾ ಸಂಗ್ರಾಮ ಯಾತ್ರೆಯನ್ನು ನಡೆಸಲು ಅವಕಾಶ ಕೊಡುತ್ತಿಲ್ಲ. ತೆಲಂಗಾಣ ಸಿಎಂ ಕೆಸಿಆರ್ ಒಬ್ಬ ಸರ್ವಾಧಿಕಾರಿ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ?’ ಎಂದು ಕಿಡಿ ಕಾರಿದ್ದಾರೆ. ಹಾಗೇ, ಕೋರ್ಟ್ಗೆ ಹೋಗುವುದಾಗಿಯೂ ತಿಳಿಸಿದ್ದಾರೆ.
ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ
ಪ್ರಜಾ ಸಂಗ್ರಾಮ ಯಾತ್ರೆ ಮತ್ತು ಸಾರ್ವಜನಿಕ ಸಭೆ ನಡೆಸಲು ಅವಕಾಶ ಕೊಡದ ತೆಲಂಗಾಣ ಸರ್ಕಾರ, ಪೊಲೀಸ್ ವಿರುದ್ಧ ಬಿಜೆಪಿಯವರು ಅಲ್ಲಿನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿ ತಿಳಿಸಿದ್ದಾರೆ. ಇನ್ನು ಅರ್ಜಿಯನ್ನು ಹೈಕೋರ್ಟ್ ಇಂದೇ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: BL Santosh | SIT ನೋಟಿಸ್‌ಗೆ ತೆಲಂಗಾಣ ಹೈಕೋರ್ಟ್ ತಡೆಯಾಜ್ಞೆ, ಸದ್ಯಕ್ಕಿಲ್ಲ ಬಿ.ಎಲ್. ಸಂತೋಷ್ ವಿಚಾರಣೆ