ನವ ದೆಹಲಿ: ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಸೋಮವಾರ ಭಾರತಕ್ಕೆ ಆಗಮಿಸಿದ್ದಾರೆ (Sheikh Hasina India Visit). ಅವರು ನಾಲ್ಕು ದಿನಗಳ ಕಾಲ ಇಲ್ಲಿಯೇ ಇರಲಿದ್ದಾರೆ. ಸೆಪ್ಟೆಂಬರ್ 5ರಂದು ದೆಹಲಿಗೆ ಬಂದ ಅವರನ್ನು ಕೇಂದ್ರ ಜವಳಿ ಮತ್ತು ರೈಲ್ವೆ ಇಲಾಖೆ ರಾಜ್ಯ ಸಚಿವೆ ದರ್ಶನಾ ಜರ್ದೋಶ್ ಸ್ವಾಗತಿಸಿದರು. ಬಳಿಕ ಶೇಖ್ ಹಸೀನಾ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾಗಿ ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಬಾಧ್ಯತೆ ಬಗ್ಗೆ ಮಾತುಕತೆ ನಡೆಸಿದರು. ನಂತರ ದೆಹಲಿಯ ಪ್ರಮುಖ ಪ್ರವಾಸಿ ತಾಣವಾದ ನಿಜಾಮುದ್ದೀನ್ ಔಲಿಯಾ ದರ್ಗಾಕ್ಕೆ ಭೇಟಿ ನೀಡಿದ್ದರು.
ಇಂದು ಬೆಳಗ್ಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾರನ್ನು ಅಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನೂ ಭೇಟಿಯಾದರು. ಅಲ್ಲಿ ಮಾತನಾಡಿದ ಶೇಖ್ ಹಸೀನಾ, ‘ಬಡತನ ನಿರ್ಮೂಲನೆ, ಆರ್ಥಿಕ ಅಭಿವೃದ್ಧಿ ನಮ್ಮ ಆದ್ಯತೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಭಾರತ ಮತ್ತು ಬಾಂಗ್ಲಾದೇಶ ಒಟ್ಟಾಗಿ ಕೆಲಸ ಮಾಡಿದರೆ, ಬರೀ ನಮ್ಮೆರಡೂ ದೇಶಗಳ ಜನರು ಮಾತ್ರವಲ್ಲ, ದಕ್ಷಿಣ ಏಷ್ಯಾದ ಎಲ್ಲ ದೇಶಗಳ ನಾಗರಿಕರೂ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದರು.
ಹಾಗೇ, ‘ನಾವು ಎಲ್ಲ ಕ್ಷೇತ್ರಗಳಲ್ಲೂ ಭಾರತದ ಸಹಕಾರ ಬಯಸುತ್ತೇವೆ. ಸ್ನೇಹದಿಂದ ಯಾವುದೇ ಸಮಸ್ಯೆಯನ್ನೂ ಬೇಕಾದರೂ ಪರಿಹರಿಸಬಹುದು. ಈ ವಿಚಾರದಲ್ಲಿ ಭಾರತಕ್ಕೆ ಬಾಂಗ್ಲಾದೇಶ ಸದಾ ಋಣಿಯಾಗಿರುತ್ತದೆ. ನನಗಂತೂ ಯಾವಾಗ ಭಾರತಕ್ಕೆ ಬಂದರೂ ತುಂಬ ಸಂತೋಷವಾಗುತ್ತದೆ’ ಎಂದೂ ತಿಳಿಸಿದರು. ಇಂದು ದೆಹಲಿಯಲ್ಲಿರುವ ಹೈದರಾಬಾದ್ ಭವನದಲ್ಲಿ ಪ್ರಧಾನಿ ಮೋದಿ ಮತ್ತು ಶೇಖ್ ಹಸೀನಾ ಹಲವು ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಇಂದು ರಾಷ್ಟ್ರಪತಿ ಭವನಕ್ಕೆ ತೆರಳುವುದಕ್ಕೂ ಮುನ್ನ ಶೇಖ್ ಹಸೀನಾ, ರಾಜ್ ಘಟ್ಗೆ ಹೋಗಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಜಲ ನಿರ್ವಹಣೆ, ರೈಲ್ವೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಪಟ್ಟ ಒಟ್ಟು ಏಳು ದ್ವಿಪಕ್ಷೀಯ ಒಪ್ಪಂದಗಳಿಗೆ ಪ್ರಧಾನಮಂತ್ರಿಗಳಾದ ಶೇಖ್ ಹಸೀನಾ ಮತ್ತು ನರೇಂದ್ರ ಮೋದಿ ಸಹಿ ಹಾಕಲಿದ್ದಾರೆ ಎಂದು ಹೇಳಲಾಗಿದೆ. ಹಾಗೇ, ಕುಶಿಯಾರಾ ನದಿ ನೀರು ಹಂಚಿಕೆ ಸಂಬಂಧ ಈ ಇಬ್ಬರೂ ನಾಯಕರೂ ಮಾತುಕತೆ ನಡೆಸುವ ನಿರೀಕ್ಷೆಯೂ ಇದೆ. ಅಷ್ಟೇ ಅಲ್ಲ, ಈ ಎರಡೂ ದೇಶಗಳು ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಹೆಚ್ಚಿಸಿಕೊಳ್ಳಲು ಹಲವು ಕ್ರಮಗಳನ್ನೂ ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ.
ಶೇಖ್ ಹಸೀನಾರನ್ನು ಭೇಟಿ ಮಾಡಿದ ಗೌತಮ್ ಅದಾನಿ
ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿ ಅವರು ಸೋಮವಾರ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಂತರ ಟ್ವೀಟ್ ಮಾಡಿದ ಗೌತಮ್ ಅದಾನಿ ‘ಬಾಂಗ್ಲಾದೇಶದ ಅಭಿವೃದ್ಧಿ ಬಗ್ಗೆ ಶೇಖ್ ಹಸೀನಾ ಅವರು ಹೊಂದಿರುವ ದೃಷ್ಟಿಕೋನ ಸ್ಫೂರ್ತಿದಾಯಕವಾಗಿದೆ. ಹಲವು ದಿಟ್ಟತನದ ಕ್ರಮಗಳನ್ನು ಕೈಗೊಂಡಿದ್ದಾರೆ’ ಎಂದು ಹೇಳಿದರು. ನಮ್ಮ 1600 ಮೆಗಾ ವ್ಯಾಟ್ನ ಗೊಡ್ಡಾ ಪವರ್ ಪ್ರಾಜೆಕ್ಟ್ನಡಿ ಬಾಂಗ್ಲಾದೇಶಕ್ಕೆ ಮೀಸಲಾದ ಪ್ರಸರಣ ಮಾರ್ಗವನ್ನು 2022ರ ಡಿಸೆಂಬರ್ 16ರೊಳಗೆ ಅಲ್ಲಿಗೆ ನಿಯೋಜಿಸಲು ಬದ್ಧರಾಗಿದ್ದೇವೆ’ ಎಂದೂ ಮಾಹಿತಿ ನೀಡಿದರು.
ಅದಾನಿ ಗ್ರುಫ್ನ ಭಾರತೀಯ ವಿದ್ಯುತ್ ಮತ್ತು ಇಂಧನ ಕಂಪನಿ ಅದಾನಿ ಪವರ್ ಜಾರ್ಖಂಡ್ನ ಗೊಡ್ಡಾದಲ್ಲಿ 1600 ಮೆಗಾ ವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರನ್ನು ನಿರ್ಮಿಸಿದೆ. ಅಲ್ಲಿಂದ ಬಾಂಗ್ಲಾದೇಶಿ ವಿದ್ಯುತ್ ಅಭಿವೃದ್ಧಿ ಮಂಡಳಿಗೂ ವಿದ್ಯುತ್ ಪೂರೈಕೆ ಮಾಡುವ ಯೋಜನೆಯನ್ನು ರೂಪಿಸಿದೆ. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಗೆದ್ದ ನೆನಪಿಗಾಗಿ ಪ್ರತಿವರ್ಷ ಡಿಸೆಂಬರ್ 16ರಂದು ಆ ದೇಶ ವಿಜಯ ದಿವಸ ಆಚರಿಸಲಿದ್ದು, ಈ ಸಲ ಅದಕ್ಕೂ ಮುನ್ನವೇ ಗೊಡ್ಡಾ ವಿದ್ಯುತ್ ಯೋಜನೆ ಪೂರ್ಣಗೊಳಿಸುವುದಾಗಿ ಅದಾನಿ ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾಕ್ಕೆ ಭಾರತ ಬಹುಕಾಲದ ಗೆಳೆಯ ಎಂದು ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಶೇಖ್ ಹಸೀನಾ