ಮೊಹಾಲಿ: ಪಂಜಾಬ್‌ನ ಮೊಹಾಲಿಯಲ್ಲಿರುವ ಗುಪ್ತಚರ ಇಲಾಖೆಯ ಪ್ರಧಾನ ಕಚೇರಿ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ (Rocket Propelled Grenade) ದಾಳಿ ನಡೆದ ಬೆನ್ನಲ್ಲೇ ರಾಜ್ಯಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. ರಾಕೆಟ್ ಚಾಲಿತ ಗ್ರೆನೇಡ್ ಎಂದರೆ ಗ್ರೆನೇಡ್‌ನ್ನು ರಾಕೆಟ್ ಮೂಲಕ ಹಾರಿಸಿ, ನಿರ್ದಿಷ್ಟ ಸ್ಥಳದ ಮೇಲೆ ದಾಳಿ ಮಾಡುವುದು. ಈ ಆರ್‌ಪಿಜಿ (RPG)ಯನ್ನು ಸಾಮಾನ್ಯವಾಗಿ ವಿಶ್ವದಾದ್ಯಂತ ಬಹುತೇಕ ರಾಷ್ಟ್ರಗಳ ಸೇನಾಪಡೆಗಳು ಬಳಕೆ ಮಾಡುತ್ತವೆ. ಆದರೆ ಮೊಹಾಲಿಯಲ್ಲಿ ನಡೆಸಲಾದ ದಾಳಿಗೆ ಇದನ್ನು ಬಳಸಿದ್ದು ಅಚ್ಚರಿಯನ್ನೂ ಉಂಟು ಮಾಡಿದೆ. ಅದೄಷ್ಟವಶಾತ್ ಈ ರಾಕೆಟ್ ಚಾಲಿತ ಗ್ರೆನೇಡ್ ಗುಪ್ತಚರ ಇಲಾಖೆ ಕಚೇರಿಯೊಳಗೆ ಲ್ಯಾಂಡ್ ಆಯಿತು ಬಿಟ್ಟರೆ, ಸ್ಫೋಟಗೊಳ್ಳಲಿಲ್ಲ. ಹಾಗಾಗಿ ದೊಡ್ಡ ಮಟ್ಟದ ಹಾನಿಯಾಗಲಿಲ್ಲ. ಆದರೂ ಕಚೇರಿಯ ಗೋಡೆ, ಕಿಟಕಿಯ ಗಾಜುಗಳೆಲ್ಲ ಪುಡಿಪುಡಿಯಾಗಿದ್ದಾಗಿ ವರದಿಯಾಗಿದೆ.
ಮೊಹಾಲಿಯ ಸೆಕ್ಟರ್ 77ರಲ್ಲಿರುವ ಗುಪ್ತಚರ ವಿಭಾಗದ ಪ್ರಧಾನ ಕಚೇರಿ ಮೇಲೆ ರಾಕೆಟ್ ಚಾಲಿತ ಗ್ರೆನೇಡ್‌ನ್ನು ಹಾರಿಸಲು ಬಳಸಲಾದ ಲಾಂಚರ್‌ನ್ನು ಪಂಜಾಬ್ ಪೊಲೀಸರು ಈಗಾಗಲೇ ಪತ್ತೆ ಹಚ್ಚಿದ್ದಾರೆ. ಅದರ ಬೆನ್ನಲ್ಲೇ ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್ (SFJ) ಮುಖಂಡ ಗುರ್‌ಪತ್ವಂತ್ ಸಿಂಗ್ ಪನ್ನು ಧ್ವನಿ ಸಂದೇಶದ ಮೂಲಕ ದಾಳಿಯ ಹೊಣೆ ಹೊತ್ತಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಸುಮಾರು 18-20 ಶಂಕಿತರನ್ನು ಪಂಜಾಬ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಸಮಗ್ರವಾಗಿ ತನಿಖೆ ನಡೆಸುತ್ತಿದ್ದು, ದಾಳಿ ನಡೆದ ಪ್ರದೇಶವಾದ ಗುಪ್ತಚರ ಕೇಂದ್ರ ಕಚೇರಿ ಸುತ್ತಮುತ್ತಲಿನ ಮೊಬೈಲ್ ಟವರ್‌ಗಳಿಂದ ಆಪರೇಟ್ ಆದ ಮೊಬೈಲ್‌ಗಳ ಡೇಟಾಗಳನ್ನು, ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ಇದುವರೆಗೆ ನಡೆದ ತನಿಖೆಯ ಪ್ರಕಾರ ದಾಳಿಕೋರರು ಮಾರುತಿ ಸುಝುಕಿ ಸ್ವಿಫ್ಟ್ ವಾಹನ ಬಳಕೆ ಮಾಡಿರಬಹುದು ಎಂದೂ ಮೊಹಾಲಿ ಎಸ್‌ಎಸ್‌ಪಿ ವಿವೇಕ್ ಶೀಲ್ ತಿಳಿಸಿದ್ದಾರೆ.
ಇದನ್ನೂ ಓದಿ | ಪಂಜಾಬ್‌ನಲ್ಲಿ ದೆಹಲಿ ಮಾದರಿ: ರಾಜಧಾನಿಗೆ ಭೇಟಿ ನೀಡಿದ ಭಗವಂತ್ ಮನ್
ಆರ್‌ಪಿಜಿ ಎಂದರೇನು
ಆರ್‌ಪಿಜಿ ಅಥವಾ ರಾಕೆಟ್ ಚಾಲಿತ ಗ್ರೆನೇಡ್ (Rocket-Propelled Grenade) ಎಂಬುದು ಭುಜದ ಮೇಲೆ ಅಸ್ತ್ರವನ್ನಿಟ್ಟು ಫೈರ್ ಮಾಡುವ ಒಂದು ವಿಧಾನ. ಈ ದಾಳಿಯನ್ನು ಒಬ್ಬನೇ ಒಬ್ಬ ನುರಿತ ವ್ಯಕ್ತಿಯೂ ನಡೆಸಬಹುದು. ಅಂದರೆ ಭುಜದ ಮೇಲೆ ಕ್ಷಿಪಣಿ ಹಾರಿಸುವಂಥ ಒಂದು ಅಸ್ತ್ರವನ್ನು ಇಟ್ಟು, ಅದರ ಮೂಲಕವೇ ರಾಕೆಟ್ ಚಾಲಿತ ಗ್ರೆನೇಡ್ ಅಟ್ಯಾಕ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಆರ್‌ಜಿಪಿಯನ್ನು ಹೆಚ್ಚಿನ ಭದ್ರತೆ ಅಗತ್ಯವಿರುವ ಕಟ್ಟಡಗಳ ಸೆಕ್ಯೂರಿಟಿಗಳು ಬಳಸುತ್ತಾರೆ. ಅಷ್ಟೇ ಅಲ್ಲ, ಇದು ಬಳಸಲು ಅತ್ಯಂತ ಸುಲಭವಾಗಿದ್ದು, ಅಧಿಕ ಪರಿಣಾಮಕಾರಿಯಾಗಿದ್ದರಿಂದ ದಂಗೆಕೋರರು, ಉಗ್ರರು ಕೂಡ ಬಳಸುತ್ತಾರೆ.
ಇದನ್ನೂ ಓದಿ | ಮೊಹಾಲಿ ಗ್ರೆನೇಡ್ ದಾಳಿಯಲ್ಲಿ ಉಗ್ರರ ಕೈವಾಡ?: ಸ್ಥಳದಲ್ಲಿ ಬಿಗಿ ಭದ್ರತೆ, ಶಂಕಿತರು ಪೊಲೀಸ್ ವಶಕ್ಕೆ