ಬರೇಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರನ್ನು ಬೆಂಬಲಿಸಿದ್ದ ಉದಯಪುರದ ಟೇಲರ್ ಕನ್ಹಯ್ಯ ಲಾಲ್‌ರನ್ನು ಶಿರಚ್ಛೇದ ಮಾಡಿ ಹತ್ಯೆಗೈದಿದ್ದನ್ನು ಬರೆಲ್ವಿ ಉಲೇಮಾ ಮುಸ್ಲಿಮರು ತೀವ್ರವಾಗಿ ಖಂಡಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿ ಮೂಲದ ಈ ಬರೇಲ್ವಿ ಮುಸ್ಲಿಮರ ಗುಂಪು ಶಿರಚ್ಛೇದದ ವಿರುದ್ಧ ಫತ್ವಾ ಕೂಡ ಹೊರಡಿಸಿದೆ. ಕನ್ಹಯ್ಯಲಾಲ್ ತಲೆಯನ್ನು ಕಡಿದವರು ಪಾಕಿಸ್ತಾನ ಮೂಲದ ದಾವತ್-ಎ-ಇಸ್ಲಾಮಿ ಸಂಘಟನೆಯ ಬೋಧಕರಿಂದ ಪ್ರಭಾವಿತರಾದವರು ಎಂದು ತಿಳಿಸಿದ್ದಾರೆ. ಹಾಗೇ, ಶರಿಯಾ ಕಾನೂನಿನ ಪ್ರಕಾರ ಇವರಿಬ್ಬರೂ ದೊಡ್ಡ ಕ್ರಿಮಿನಲ್‌ಗಳು ಎಂದು ಹೇಳಿದ್ದಾರೆ.
ಈ ಬಗ್ಗೆ ಬರೆಲ್ವಿ ಉಲೆಮಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಹಾಬುದ್ದೀನ್ ರಜ್ವಿ ಮಾತನಾಡಿ, ಒಂದು ಮುಸ್ಲಿಂ ಸಾಮ್ರಾಜ್ಯದಲ್ಲಿ ಚಕ್ರವರ್ತಿಯ ಅನುಮತಿಯಿಲ್ಲದೆ ಒಬ್ಬ ವ್ಯಕ್ತಿಯನ್ನು ಕೊಂದವನನ್ನು ಶರಿಯಾ ಕಾನೂನಿನಡಿಯಲ್ಲಿ ಕ್ರಿಮಿನಲ್ ಎಂದು ಪರಿಗಣಿಸಲಾಗುತ್ತದೆ ಎಂದು 19ನೇ ಶತಮಾನದ ಇಸ್ಲಾಮಿಕ್ ವಿದ್ವಾಂಸ ಅಹ್ಮದ್ ರಾಜಾ ಖಾನ್ ಬರೆಲ್ವಿ ಹೇಳಿದ್ದಾರೆ. ಹಾಗೇ, ಮುಸ್ಲಿಂ ಆಡಳಿತವಿಲ್ಲದ ದೇಶಗಳಲ್ಲಿ ಇಂಥ ಹತ್ಯೆಗಳನ್ನು ಮಾಡುವವರು ತಮ್ಮ ಜೀವವನ್ನು ಅವರೇ ಸ್ವತಃ ಅಪಾಯದಲ್ಲಿ ಇಟ್ಟುಕೊಳ್ಳುತ್ತಾರೆ. ಆ ನೆಲದ ಕಾನೂನಿನಡಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ರಜ್ವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಜುಲೈ 7ರಿಂದ 3 ದಿನ ಆರೆಸ್ಸೆಸ್ ಸಮಾವೇಶ, ಕನ್ಹಯ್ಯ ಲಾಲ್ ಹತ್ಯೆ ಬಗ್ಗೆ ಗಂಭೀರ ಚರ್ಚೆ ನಿರೀಕ್ಷೆ
ಪ್ರವಾದಿ ವಿರುದ್ಧ ಮಾತನಾಡುವವರ ಶಿರಚ್ಛೇದ ಮಾಡಿ ಎಂದು ಮೊದಲು ಕರೆಕೊಟ್ಟಿದ್ದು ಪಾಕಿಸ್ತಾನದ ತೆಹ್ರೀಕ್ ಇ ಲಬ್ಬೈಕ್ ಸಂಘಟನೆ. ಇದೊಂದು ಇಸ್ಲಾಮಿಕ್ ಬಲ ಪಂಥೀಯ ತೀವ್ರಗಾಮಿಗಳ ರಾಜಕೀಯ ಪಕ್ಷ. ಕನ್ಹಯ್ಯ ಲಾಲ್‌ರನ್ನು ಕೊಂದವರು ಕೂಡ ಪ್ರವಾದಿ ಮೊಹಮ್ಮದ್ ವಿರುದ್ಧ ಮಾತನಾಡಿದವರ ಶಿರಚ್ಛೇದ ಮಾಡಬೇಕು ಎಂದೇ ಕೂಗುತ್ತಿದ್ದರು. ಪಾಕಿಸ್ತಾನದ ಬಲಪಂಥೀಯ ತೀವ್ರಗಾಮಿಗಳ ಗುಂಪು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೀಗೆ ಪ್ರಚೋದನೆ ಮಾಡುತ್ತಿದೆ ಎಂದೂ ಮೌಲಾನಾ ಶಹಾಬುದ್ದೀನ್ ರಜ್ವಿ ಹೇಳಿದ್ದಾರೆ. ಹಾಗೇ, ʼಪ್ರವಾದಿ ಮೊಹಮ್ಮದ್ ವಿರುದ್ಧ ಮಾತನಾಡಿದವರ ವಿರುದ್ಧ ಮುಸ್ಲಿಮರು ಅವರಷ್ಟಕ್ಕೇ ಅವರು ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ. ಅವರು ದೂರು ಕೊಡಬೇಕು. ಸರ್ಕಾರ, ಪೊಲೀಸರು ಕ್ರಮ ಕೈಗೊಳ್ಳುತ್ತಾರೆʼ ಎಂದ ಹೇಳಿದ್ದಾರೆ.
ಇದನ್ನೂ ಓದಿ: Terror killing: ಉದಯಪುರ, ಅಮರಾವತಿ ಬಳಿಕ ಈಗ ಲಖನೌದ ಮಹಿಳೆಗೆ ಹತ್ಯೆ ಬೆದರಿಕೆ