ಪಂಜಾಬ್ನಲ್ಲಿ ಕಳೆದ ಎರಡು ದಿನಗಳ ಹಿಂದೆ ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ ವಿರುದ್ಧ ಕಾರ್ಯಾಚರಣೆ ಶುರುವಾದ ಬೆನ್ನಲ್ಲೇ, ಅತ್ತ ಲಂಡನ್ನಲ್ಲಿರುವ ಭಾರತದ ಹೈಕಮೀಷನ್ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರು. ಭಾರತದ ಹೈಕಮೀಷನ್ ಬಾಲ್ಕನಿ ಮೇಲೆ ಹಾರುತ್ತಿದ್ದ ಭಾರತದ ಧ್ವಜವನ್ನು ಖಲಿಸ್ತಾನಿಗಳು ಕೆಳಗೆ ಇಳಿಸಿದ್ದರು. ಅದೇ ಹೊತ್ತಿಗೆ ಅಲ್ಲಿಗೆ ಧಾವಿಸಿದ್ದ ರಕ್ಷಣಾ ಸಿಬ್ಬಂದಿ, ಧ್ವಜವನ್ನು ಖಲಿಸ್ತಾನಿಗಳ ಕೈಯಿಂದ ಕಸಿದುಕೊಂಡು, ಮತ್ತೆ ಹಾರಿಸಿದ್ದರು. ಆದರೆ ಖಲಿಸ್ತಾನಿಗಳು ಅಲ್ಲಿ ನಿಂತು ತಮ್ಮ ಬಾವುಟವನ್ನು ಹಾರಿಸಿದ್ದರು. ಪ್ರತಿಭಟನೆ ನಡೆಸಿದ್ದರು.
ಇಷ್ಟೆಲ್ಲ ಬೆಳವಣಿಗೆಯಾದ ಎರಡು ದಿನಗಳ ನಂತರ ಈಗ ಭಾರತದಲ್ಲಿರುವ ಬ್ರಿಟಿಷ್ ಹೈಕಮಿಷನ್ ಮತ್ತು ರಾಯಭಾರಿ ಕಚೇರಿಯ ಭದ್ರತೆಯನ್ನು ಕಡಿಮೆ ಮಾಡಲಾಗುತ್ತಿದೆ. ಚಾಣಕ್ಯಪುರಿಯಲ್ಲಿರುವ ರಾಜತಾಂತ್ರಿಕ ಎನ್‌ಕ್ಲೇವ್, ಶಾಂತಿಪಥ್‌ನಲ್ಲಿರುವ ಯುಕೆ ಮಿಷನ್‌ನ ಹೊರಗೆ ಇರಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ಪೊಲೀಸರು ತೆಗೆಯುತ್ತಿದ್ದಾರೆ. ಅಷ್ಟೇ ಅಲ್ಲ, ರಾಜಾಜಿ ಮಾರ್ಗದಲ್ಲಿರುವ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ನಿವಾಸದ ಹೊರಗಿದ್ದ ಬ್ಯಾರಿಕೇಡ್ಗಳನ್ನೂ ತೆಗೆಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ಎನ್ಡಿಟಿವಿ ಮತ್ತು ಇತರ ಮಾಧ್ಯಮಗಳು ವರದಿ ಮಾಡಿವೆ. ಹಾಗಂತ ಭದ್ರತಾ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಿಲ್ಲ ಎಂದೂ ಹೇಳಲಾಗಿದೆ.
ಇದನ್ನೂ ಓದಿ: Indian Tricolour: ಲಂಡನ್ ಹೈಕಮಿಷನ್ ಮೇಲೆ ಬೃಹತ್ ತಿರಂಗಾ ಹಾರಿಸಿ ಖಲಿಸ್ತಾನಿಗಳಿಗೆ ಭಾರತ ತಿರುಗೇಟು
ಲಂಡನ್ನಲ್ಲಿ ಭಾನುವಾರ ಖಲಿಸ್ತಾನಿಗಳು ನಡೆಸಿದ ಕೃತ್ಯವನ್ನು ಭಾರತ ಸರ್ಕಾರ ತೀವ್ರವಾಗಿ ವಿರೋಧಿಸಿತ್ತು. ದೆಹಲಿಯಲ್ಲಿರುವ ಬ್ರಿಟನ್ ರಾಯಭಾರಿಗೆ ಸಮನ್ಸ್ ಕೂಡ ನೀಡಿತ್ತು. ಅತ್ತ ಬ್ರಿಟನ್ ಕೂಡ ಇದನ್ನು ಖಂಡಿಸಿತ್ತು. ಭಾರತದಲ್ಲಿರುವ ಬ್ರಿಟನ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಪ್ರತಿಕ್ರಿಯೆ ನೀಡಿ ‘ಲಂಡನ್ನಲ್ಲಿರುವ ಭಾರತದ ಹೈಕಮಿಷನ್ ಮೇಲೆ ದಾಳಿ ನಡೆದಿರುವುದು ಖಂಡನೀಯ’ ಎಂದಿದ್ದರು.
ಇನ್ನು ಈಗ ಭಾರತದಲ್ಲಿರುವ ಬ್ರಿಟಿಷ್ ಹೈಕಮಿಷನರ್ ಕಚೇರಿ ಬಳಿಯೆಲ್ಲ ಬ್ಯಾರಿಕೇಡ್ ತೆಗೆಯುತ್ತಿರುವುದಕ್ಕೆ ಸ್ಪಷ್ಟವಾದ ಕಾರಣ ಗೊತ್ತಾಗಿಲ್ಲ. ಆದರೆ ಲಂಡನ್ನಲ್ಲಿ ಖಲಿಸ್ತಾನಿಗಳು ಭಾರತದ ಹೈಕಮಿಷನ್ವರೆಗೆ ನುಗ್ಗಿ, ತಿರಂಗಾವನ್ನು ತೆಗೆಯುವವರೆಗೂ ಹೋಗಿದ್ದಾರೆ ಅಂದರೆ, ಅಲ್ಲಿ ಬ್ರಿಟನ್ ಸರ್ಕಾರ ನೀಡುತ್ತಿರುವ ಭದ್ರತೆ ಸಾಕಾಗುತ್ತಿಲ್ಲ ಎಂದೇ ಬಿಂಬಿತವಾಗಿದೆ. ಅದೇ ಕಾರಣಕ್ಕೆ ಭಾರತ ಪ್ರತೀಕಾರದ ರೂಪದಲ್ಲಿ, ಇಲ್ಲಿರುವ ಬ್ರಿಟಿಷ್ ಹೈಕಮಿಷನರ್ ಕಚೇರಿಗಳ ಭದ್ರತೆ ಕಡಿಮೆ ಮಾಡುತ್ತಿದೆ ಎಂದೂ ಹೇಳಲಾಗುತ್ತಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬ್ರಿಟಿಷ್ ಹೈಕಮಿಷನ್ ವಕ್ತಾರ ‘ಈ ಬಗ್ಗೆ ನಮಗೇನೂ ಗೊತ್ತಿಲ್ಲ. ನಾವು ಭದ್ರತೆ ವಿಷಯದ ಬಗ್ಗೆ ಏನೂ ಕಮೆಂಟ್ ಮಾಡುವುದಿಲ್ಲ ಎಂದಿದ್ದಾರೆ.