ನವ ದೆಹಲಿ: ಗೋದ್ರಾ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿ ತಪ್ಪಿತಸ್ಥರು ಎಂಬಂತೆ ಬಿಂಬಿಸಿ, ಅವರನ್ನು ಆಕ್ಷೇಪಾರ್ಹವಾಗಿ ಚಿತ್ರಿಸಿರುವ ಬಿಬಿಸಿ ಡಾಕ್ಯುಮೆಂಟರಿ (BBC documentary)‘ಇಂಡಿಯಾ-ದಿ ಮೋದಿ ಕ್ವಶ್ಚನ್’ ಪ್ರದರ್ಶನವನ್ನು ಪುಣೆಯಲ್ಲಿರುವ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನಲ್ಲಿ ಏರ್ಪಡಿಸಲಾಗಿತ್ತು. ಈ ಇನ್ಸ್ಟಿಟ್ಯೂಟ್ನ ಸ್ಟುಡೆಂಟ್ಸ್ ಅಸೋಸಿಯೇಷನ್ ಮುಂದಾಗಿ ಡಾಕ್ಯುಮೆಂಟರಿ ಪ್ರದರ್ಶನ ಏರ್ಪಡಿಸಿತ್ತು.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ವ್ಯಾಪ್ತಿಯಡಿ ಬರುವ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆವರಣದಲ್ಲಿ ಬಿಬಿಸಿ ಡಾಕ್ಯುಮೆಂಟರಿ ಪ್ರದರ್ಶನ ಏರ್ಪಡಿಸಿದ್ದೆವು ಎಂದು ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿ ಸಂಘ ಇನ್ಸ್ಟಾಗ್ರಾಂ ಪೇಜ್ನಲ್ಲಿ ಫೋಟೋ ಸಹಿತ ಮಾಹಿತಿ ಹಂಚಿಕೊಂಡಿದೆ. ಸುಮಾರು 200-300 ವಿದ್ಯಾರ್ಥಿಗಳು ಒಟ್ಟಾಗಿ ಕುಳಿತು ಈ ಸಾಕ್ಷ್ಯಚಿತ್ರ ವೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ. ಡಾಕ್ಯುಮೆಂಟರಿ ವೀಕ್ಷಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಲವು ವಿದ್ಯಾರ್ಥಿಗಳು ‘ಸಾಕ್ಷ್ಯಚಿತ್ರ ನಿರ್ಮಾಪಕರು ತಮ್ಮ ದೃಷ್ಟಿಕೋನದಿಂದ ಈ ಡಾಕ್ಯುಮೆಂಟರಿ ನಿರ್ಮಿಸಿದ್ದಾರೆ. ಇದರಲ್ಲಿನ ಯಾವುದೇ ವಿಷಯವನ್ನೂ ನಿರ್ಬಂಧಿಸಬಾರದು’ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: BBC Documentary On Modi: ಜೆಎನ್‌ಯುನಲ್ಲಿ ಬಿಬಿಸಿ ಡಾಕ್ಯುಮೆಂಟರಿ ವೀಕ್ಷಣೆ ವೇಳೆ ಪವರ್ ಕಟ್, ಕಲ್ಲು ತೂರಿ ಗಲಾಟೆ
FTIIನ ಸೆಕ್ಯೂರಿಟಿಯ ಬಳಿ ಈ ಬಗ್ಗೆ ಕೇಳಿದ್ದಕ್ಕೆ, ಈ ಸಂಸ್ಥೆಯಲ್ಲಿ ಬಿಬಿಸಿ ಡಾಕ್ಯುಮೆಂಟರಿ ಪ್ರದರ್ಶನವಾಗಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಆದರೆ ಇಲ್ಲಿನ ಸ್ಟುಡೆಂಟ್ಸ್ ಅಸೋಸಿಯೇಶನ್ನವರೇ ಫೋಟೋ ಹಂಚಿಕೊಂಡಿದ್ದರಿಂದ ಸ್ಕ್ರೀನಿಂಗ್ ನಡೆದಿದ್ದು ಪಕ್ಕಾ ಎಂಬುದೂ ಸಾಬೀತಾಗಿದೆ.
ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಸಂಗತಿಗಳಿರುವ ಡಾಕ್ಯುಮೆಂಟರಿಯ ಲಿಂಕ್ಗಳನ್ನು ಯೂಟ್ಯೂಬ್, ಟ್ವಿಟರ್ ಮತ್ತಿತರ ಸೋಷಿಯಲ್ ಮೀಡಿಯಾಗಳಲ್ಲಿ ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಆದರೂ ವಿವಿಧ ಶಿಕ್ಷಣ ಸಂಸ್ಥೆಗಳು ಡಾಕ್ಯುಮೆಂಟರಿ ಪ್ರದರ್ಶನ ಏರ್ಪಡಿಸುತ್ತಿವೆ. ಈಗಾಗಲೇ ಜೆಎನ್ಯು, ದೆಹಲಿ ಯೂನಿವರ್ಸಿಟಿಗಳೆಲ್ಲ ಡಾಕ್ಯುಮೆಂಟರಿ ಪ್ರದರ್ಶನ ನಡೆಸಲು ಪ್ರಯತ್ನಿಸಿದ್ದವು. ಆದರೆ ಪ್ರಯತ್ನಗಳು ವಿಫಲಗೊಂಡಿದ್ದವು.