ನವ ದೆಹಲಿ: ಗುಜರಾತ್ನ ಗೋದ್ರಾದಲ್ಲಿ ನಡೆದಿದ್ದ ಹತ್ಯಾಕಾಂಡದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ (PM Modi)ಯವರು ತಪ್ಪಿತಸ್ಥರು ಎಂಬರ್ಥದಲ್ಲಿ ಬಿಂಬಿಸಿ, ಚಿತ್ರಿಸಲಾದ ಬಿಬಿಸಿ ಡಾಕ್ಯುಮೆಂಟರಿ (BBC Documentary)ಯನ್ನು ಈಗೆರಡು ದಿನಗಳ ಹಿಂದೆ ಜೆಎನ್ಯು (Jawaharlal Nehru University) ಕ್ಯಾಂಪಸ್ನಲ್ಲಿ ದೊಡ್ಡ ಪರದೆ ಮೇಲೆ ಪ್ರದರ್ಶನ ಮಾಡಲಾಯಿತು. ಆದರೆ ವಿವಾದಿತ ಸಾಕ್ಷ್ಯಚಿತ್ರ ಪ್ರದರ್ಶನದ ವೇಳೆಯೇ ವಿದ್ಯುತ್ ಕಟ್ ಆಗಿರುವ ಕಾರಣಕ್ಕೆ, ದೊಡ್ಡ ಗಲಾಟೆಯೇ ನಡೆದುಹೋಯಿತು. ಜವಾಹರ್ ಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದರು. ಬಳಿಕ ತಮ್ಮ ಮೊಬೈಲ್, ಲ್ಯಾಪ್ಟಾಪ್ನಲ್ಲಿ ಡಾಕ್ಯುಮೆಂಟರಿ ನೋಡಿದರು.
ಈಗ ದೆಹಲಿಯ ಇನ್ನೊಂದು ವಿಶ್ವವಿದ್ಯಾಲಯ ಡಾಕ್ಯುಮೆಂಟರಿ ಪ್ರದರ್ಶನಕ್ಕೆ ಮುಂದಾಗಿದೆ. ‘ದೆಹಲಿ ಯೂನಿವರ್ಸಿಟಿ’ (DU)ಯಲ್ಲಿ ಇಂದು ಸಂಜೆ 5ಗಂಟೆಗೆ ‘ಇಂಡಿಯಾ-ದಿ ಮೋದಿ ಕ್ವಶ್ಚನ್’ ಸಾಕ್ಷ್ಯಚಿತ್ರವನ್ನು ಪ್ರದರ್ಶನ ನಡೆಯಲಿದೆ. ಕಾಂಗ್ರೆಸ್ನ ವಿದ್ಯಾರ್ಥಿ ವಿಭಾಗವಾದ ನ್ಯಾಶನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI), ಭೀಮ್ ಆರ್ಮಿ ಮತ್ತು ಇನ್ನಿತರ ಕೆಲವು ವಿದ್ಯಾರ್ಥಿ ಸಂಘಟನೆಗಳು ಜಂಟಿಯಾಗಿ, ದೆಹಲಿ ಯೂನಿವರ್ಸಿಟಿಯಲ್ಲಿ ಈ ವಿವಾದಿತ ಬಿಬಿಸಿ ಡಾಕ್ಯುಮೆಂಟರಿ ಪ್ರದರ್ಶನ ಆಯೋಜಿಸಿವೆ. ಯೂನಿವರ್ಸಿಟಿ ಕ್ಯಾಂಪಸ್ನ ಉತ್ತರ ಭಾಗದಲ್ಲಿರುವ ಆರ್ಟ್ ಫ್ಯಾಕಲ್ಟಿಯ ಗೇಟ್ ಬಳಿ ದೊಡ್ಡ ಪರದೆ ಮೇಲೆ ‘ಇಂಡಿಯಾ-ದಿ ಮೋದಿ ಕ್ವಶ್ಚನ್’ ಡಾಕ್ಯುಮೆಂಟರಿ ಪ್ರದರ್ಶನಗೊಳ್ಳಲಿದೆ. ಹೆಚ್ಚೆಚ್ಚು ಮಂದಿ ಬಂದು ವೀಕ್ಷಿಸಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಕರೆಕೊಟ್ಟಿವೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಆಕ್ಷೇಪಾರ್ಹ ಸಂಗತಿಗಳು ಇರುವ ಬಿಬಿಸಿ ಸಾಕ್ಷ್ಯಚಿತ್ರದ ಲಿಂಕ್ಗಳನ್ನು ನಿರ್ಬಂಧಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟ್ವಿಟರ್, ಯೂಟ್ಯೂಬ್ ಸೇರಿ ಎಲ್ಲ ಸಾಮಾಜಿಕ ಜಾಲತಾಣಗಳಿಗೂ ಸೂಚಿಸಿದೆ. ಹಾಗಿದ್ದಾಗ್ಯೂ ಕಾಂಗ್ರೆಸ್ ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಡಾಕ್ಯುಮೆಂಟರಿ ಪ್ರದರ್ಶನವನ್ನು ಮುಂದುವರಿಸುತ್ತಿವೆ. ಇದು ಕೇಂದ್ರ ಸರ್ಕಾರದ ಕೆಂಗಣ್ಣಿಗೂ ಗುರಿಯಾಗಿದೆ.
ಇದನ್ನೂ ಓದಿ: ಮೋದಿ ಕುರಿತು ಬಿಬಿಸಿ ಡಾಕ್ಯುಮೆಂಟರಿ ಖಂಡಿಸಿ ದೇಶದ ನಿವೃತ್ತ ಜಡ್ಜ್‌ಗಳು, ಕನ್ನಡಿಗರು ಸೇರಿ 300 ಗಣ್ಯರಿಂದ ಪತ್ರ