ಜೈಪುರ: ಭಾರತದಲ್ಲಿ ವಾಸಿಸುವ ಎಲ್ಲರೂ ಭಾರತೀಯರು. ಒತ್ತಡಕ್ಕೆ ಮಣಿದು ಧರ್ಮ ಬಿಟ್ಟಿರುವ ಮತ್ತು ದನದ ಮಾಂಸ ತಿನ್ನುತ್ತಿರುವವರಿಗೂ ಹಿಂದು ಧರ್ಮದ ಬಾಗಿಲು ಮುಚ್ಚಿಲ್ಲ. ಅವರು ಈಗಲೂ ಮಾತೃ ಧರ್ಮಕ್ಕೆ ವಾಪಸ್ ಆಗಬಹುದು ಎಂದು ಆರ್‌ಎಸ್ಎಸ್‌ನ (RSS) ಪ್ರಮುಖರಾಗಿರುವ ದತ್ತಾತ್ರೇಯ ಹೊಸಬಾಳೆ (Dattatreya Hosabale) ಅವರು ಹೇಳಿದ್ದಾರೆ.
ಏಕಾತ್ಮ ಮಾನವ ದರ್ಶನ ಅನುಸಂಧಾನ ಏವಂ ವಿಕಾಸ್ ಪ್ರತಿಷ್ಠಾನವು ಬಿರ್ಲಾ ಸಭಾಂಗಣದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಸ್ವಯಂಸೇವಕ ಸಂಘ: ನಿನ್ನೆ, ಇಂದು ಮತ್ತು ನಾಳೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದುಗಳು. ಯಾಕೆಂದರೆ, ಅವರ ಪೂರ್ವಿಕರು ಹಿಂದುಗಳಾಗಿದ್ದರು. ಅವರ ಪೂಜಾ ವಿಧಾನಗಳ ಬೇರೆ ಬೇರೆಯಾಗಿರಬಹುದು. ಆದರೆ, ಎಲ್ಲರೂ ಒಂದೇ ಡಿಎನ್ಎ ಹೊಂದಿದ್ದಾರೆ. ಭಾರತವು ವಿಶ್ವಗುರುವಾಗುವ ಮೂಲಕ ಜಗತ್ತನ್ನು ಮುನ್ನಡೆಸಬಹುದು. ಇದು ಎಲ್ಲರ ಪ್ರಯತ್ನದಿಂದ ಮಾತ್ರವೇ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ನಾಯಕರಾಗಿರುವ ದತ್ತಾತ್ರೇಯ ಹೊಸಬಾಳೆ ಅವರು, ”ನಾವು ಬಲಪಂಥಿಯರೂ ಅಲ್ಲ, ಎಡ ಪಂಥಿಯರೂ ಅಲ್ಲ. ನಾವು ರಾಷ್ಟ್ರೀಯವಾದಿಗಳು. ಸಂಘವು ಯಾವಾಗಲೂ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತದೆ,” ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯೂ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: Dattatreya Hosabale: ಆರ್‌ಎಸ್ಎಸ್ ಬಲವೂ ಅಲ್ಲ, ಎಡವೂ ಅಲ್ಲ; ರಾಷ್ಟ್ರೀಯವಾದಿ ಎಂದ ಹೊಸಬಾಳೆ
ಪ್ರಜಾಪ್ರಭುತ್ವ ಸ್ಥಾಪನೆಯಲ್ಲಿ ಆರೆಸ್ಸೆಸ್ ಪಾತ್ರ
ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಲ್ಲಿ ಆರ್‌ಎಸ್‌ಎಸ್ ಪಾತ್ರವಿದೆ. ಈ ಸಂಗತಿಯನ್ನು ವಿದೇಶಿ ಪತ್ರಕರ್ತರು ಬರೆದಿದ್ದಾರೆ. ತಮಿಳುನಾಡಿನಲ್ಲಿ ಮತಾಂತರದ ವಿರುದ್ಧ ಹಿಂದೂ ಜಾಗೃತಿಯ ಜೋರಾಗಿ ನಡೆಯುತ್ತಿದೆ ಎಂದು ದತ್ತಾತ್ರೇಯ ಹೊಸಬಾಳೆ ಅವರು ಇದೇ ವೇಳೆ ಹೇಳಿದರು.