ಭೋಪಾಲ್: ಭಿಕ್ಷಕನೊಬ್ಬ ತನ್ನ ಪತ್ನಿಗಾಗಿ 90 ಸಾವಿರ ರೂಪಾಯಿ ಮೌಲ್ಯದ ಬೈಕ್ ಖರೀದಿ ಮಾಡಿದ್ದಾನೆ. ಇವರಿಬ್ಬರೂ ಭಿಕ್ಷೆ ಬೇಡಿಯೇ ಜೀವನ ನಡೆಸುತ್ತಿರುವ ದಂಪತಿ. ದಿನ ಬೆಳಗ್ಗಾದರೆ ಮೂರು ಚಕ್ರದ ಸೈಕಲ್ ಮೇಲೆ ಹೊರಟು, ಭಿಕ್ಷೆ ಬೇಡುತ್ತಿದ್ದರು. ಆದರೆ ಇತ್ತೀಚೆಗೆ ಆಕೆಗೆ ಬೆನ್ನು ನೋವು ಶುರುವಾಗಿತ್ತು. ಮೂರು ಚಕ್ರದ ಸೈಕಲ್ ಮೇಲೆ ಕುಳಿತುಕೊಳ್ಳಲು ಆಗುತ್ತಿಲ್ಲ ಎಂದು ಪತಿಗೆ ಹೇಳುತ್ತಲೇ ಇದ್ದರು. ಹೀಗಾಗಿ ಪತ್ನಿಗೆ ಆರಾಮವೆನಿಸಲಿ ಎಂದು ಭಿಕ್ಷುಕ ಸಾಹು ಒಂದು ಹೊಸ ಸ್ಕೂಟರ್ ಖರೀದಿಸಿದ್ದಾನೆ. ಇವರಿಬ್ಬರೂ ಹೊಸದಾದ ಬೈಕ್ ಏರಿ ಹೋಗುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.
ಮಹಿಳೆಯ ಹೆಸರು ಮುನ್ನಿ ಮತ್ತು ಆತನ ಹೆಸರು ಸಾಹು. ಮಧ್ಯಪ್ರದೇಶದ ಚಿಂದ್ವಾರಾದವರು. ಬೆಳಗ್ಗೆ ಎದ್ದು ಭಿಕ್ಷೆ ಬೇಡುತ್ತ ಒಂದೆಡೆಯಿಂದ ಮತ್ತೊಂದೆಡೆಗೆ ಹೋಗುವುದೇ ಇವರ ಕಾಯಕ. ರಸ್ತೆಯ ಮೇಲೇ ಊಟ-ತಿಂಡಿ ಮಾಡುತ್ತಾರೆ. ಮುನ್ನಿ ಪ್ರೀತಿಯಿಂದ ತನ್ನ ಗಂಡನಿಗೆ ತುತ್ತು ತಿನ್ನಿಸುತ್ತಾರೆ. ʼಮೂರು ಚಕ್ರದ, ಅರ್ಧಂಬರ್ಧ ಸರಿಯಾಗಿದ್ದ ಸೈಕಲ್‌ನಿಂದಾಗಿ ಮುನ್ನಿಗೆ ಬೆನ್ನುನೋವು ಬಂದಿತ್ತು. ಹೀಗಾಗಿ ನಾನೊಂದು ಹೊಸ ಸ್ಕೂಟರ್ ಖರೀದಿ ಮಾಡಿದೆ. ಈಗ ನಾವು ಎಲ್ಲಿಗೆ ಬೇಕಾದರೂ ಹೋಗಬಹುದು. ಮೊದಲು ತುಂಬ ದೂರವೆಲ್ಲ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಈಗ ಹಾಗಲ್ಲ, ಸಿಯೋನಿ, ಇಟಾರ್ಸಿ, ಭೋಪಾಲ್, ಇಂಧೋರ್‌ಗೆಲ್ಲ ಹೋಗಿ ಭಿಕ್ಷೆ ಎತ್ತಬಹುದುʼ ಎನ್ನುತ್ತಾರೆ ಸಾಹು.
ಇದನ್ನೂ ಓದಿ: Viral Video: ಶಾಲಾ ಸಮವಸ್ತ್ರದಲ್ಲಿಯೇ ಬೀದಿಯಲ್ಲಿ ಬಡಿದಾಡಿಕೊಂಡ ಹುಡುಗಿಯರು
ಇವರು ಹಿರಿಯ ನಾಗರಿಕರು. ಭಿಕ್ಷಾಟನೆಯಲ್ಲೇ ಜೀವನ ಕಳೆಯುತ್ತಿರುವವರು. ಈಗ ಸಾಹು ತನ್ನ ಪತ್ನಿಗಾಗಿ ಒಂದು ಬೈಕ್ ಖರೀದಿ ಮಾಡುತ್ತಿರುವ ವಿಷಯ ವೈರಲ್ ಆಗುತ್ತಿದ್ದಂತೆ ಅದನ್ನು ಓದಿದವರು, ವಿಡಿಯೋ ನೋಡಿದವರೆಲ್ಲ ಶ್ಲಾಘಿಸಿದ್ದಾರೆ. ನಿಜಕ್ಕೂ ಗ್ರೇಟ್ ಎಂದು ಕಮೆಂಟ್ ಮಾಡಿದ್ದಾರೆ. ʼಅದಕ್ಕೆ ಹೇಳೋದು, ಕನಸು ಕಾಣೋದನ್ನು ಎಂದಿಗೂ ನಿಲ್ಲಿಸಬಾರದು. ಯಾರಿಗೆ ಯಾವಾಗ ಒಳ್ಳೆಯ ಸಮಯ ಬರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲʼ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಬಿಹಾರದ ಭಿಕ್ಷುಕನೊಬ್ಬ, ಭಿಕ್ಷಾಟನೆಗಾಗಿ ಫೋನ್ ಪೇ ಬಳಕೆ ಮಾಡುವ ಮೂಲಕ ಗಮನಸೆಳೆದಿದ್ದ. ಈತ ಫೋನ್ ಪೇ ಸ್ಕ್ಯಾನರ್ ಕೋಡ್ ಇಟ್ಟುಕೊಂಡಿದ್ದ. ಚಿಲ್ಲರೆ ಇಲ್ಲ ಎನ್ನುವವರು ಸ್ಕ್ಯಾನ್ ಮಾಡುವ ಆಪ್ಷನ್ ಕೊಟ್ಟಿದ್ದ. ಭಾರತದ ಮೊದಲ ಡಿಜಿಟಲ್ ಬೆಗ್ಗರ್ ಎಂಬ ಬಿರುದನ್ನು ನೆಟ್ಟಿಗರಿಂದ ಪಡೆದಿದ್ದ.
ಇದನ್ನೂ ಓದಿ: Viral Video; ಫೋಟೋಕ್ಕಾಗಿ ಮೊಬೈಲ್ ತೆಗೆದ ಹುಡುಗಿ ಮುಖಕ್ಕೆ ಸೊಂಡಿಲಿನಿಂದ ಹೊಡೆದ ಆನೆ