ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ ಮತಎಣಿಕೆ (Bengal Panchayat Election Result) ಕಾರ್ಯ ಎರಡನೇ ದಿನವಾದ ಇಂದೂ ಮುಂದುವರಿದಿದೆ. ರಾಜ್ಯದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಇದೆ. ತೃಣಮೂಲ ಕಾಂಗ್ರೆಸ್ (TMC) ವಿಜಯ ಪತಾಕೆ ಹಾರಿಸಲು ಮುನ್ನುಗ್ಗುತ್ತಿದೆ. ಎರಡನೇ ಸ್ಥಾನದಲ್ಲಿ ಬಿಜೆಪಿ ಓಡುತ್ತಿದೆ. ಒಟ್ಟು 63,229 ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಈಗಾಗಲೇ 27,373ನ್ನು ಗೆದ್ದುಕೊಂಡಿದೆ. ಹಾಗೇ ಬಿಜೆಪಿ 7015 ಪಂಚಾಯಿತಿಗಳಲ್ಲಿ ಗೆದ್ದಿದೆ. ಹಾಗೇ, 9,730 ಪಂಚಾಯಿತಿ ಸಮಿತಿಗಳಲ್ಲಿ 134ನ್ನು ತೃಣಮೂಲ ಕಾಂಗ್ರೆಸ್ ಮತ್ತು 8ನ್ನು ಬಿಜೆಪಿ ಗೆದ್ದುಕೊಂಡಿವೆ. 928 ಜಿಲ್ಲಾ ಪರಿಷತ್ಗಳಲ್ಲಿ 83ನ್ನು ತೃಣಮೂಲ ಕಾಂಗ್ರೆಸ್ ತನ್ನ ತೆಕ್ಕೆಗೆ ಎಳೆದುಕೊಂಡಿದೆ. ಬಿಜೆಪಿ ಇನ್ನೂ ಒಂದೂ ಜಿಲ್ಲಾ ಪರಿಷತ್ ಸೀಟ್ನ್ನೂ ಗೆದ್ದಿಲ್ಲ. ಮತ ಎಣಿಕೆ ಇವತ್ತೂ ಮುಂದುವರಿಯಲಿದ್ದು, ರಾತ್ರಿ ಹೊತ್ತಿಗೆ ಅಂತಿಮ ಫಲಿತಾಂಶ ಹೊರಬೀಳಬಹುದು.
ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಪಂಚಾಯಿತಿ ವ್ಯವಸ್ಥೆ ಇದೆ. ಗ್ರಾಮ ಪಂಚಾಯಿತಿ, ಪಂಚಾಯಿತಿ ಸಮಿತಿ ಮತ್ತು ಜಿಲ್ಲಾ ಪರಿಷತ್ಗಳನ್ನಾಗಿ ವಿಂಗಡಿಸಲಾಗಿದೆ. ಈ ಮೂರು ಹಂತ ಸೇರಿ ಒಟ್ಟು 73,887 ಕ್ಷೇತ್ರಗಳಲ್ಲಿ ಜುಲೈ 8ರಂದು ಚುನಾವಣೆ ನಡೆದಿತ್ತು. ಹಿಂಸಾಚಾರ, ಹತ್ಯೆ, ಬಾಂಬ್-ಗುಂಡು ದಾಳಿ ಮಧ್ಯೆ ನಡೆದ ರಕ್ತಸಿಕ್ತ ಚುನಾವಣೆ ಅದಾಗಿತ್ತು. ರಾಜ್ಯಾದ್ಯಂತ 61,000ಬೂತ್ಗಳಲ್ಲಿ ಮತದಾನ ನಡೆದಿತ್ತು. ಅಂತಿಮವಾಗಿ ಶೇ.80.71ರಷ್ಟು ಮತದಾನವಾಗಿತ್ತು.
ಇದನ್ನೂ ಓದಿ: ಪಶ್ಚಿಮ ಬಂಗಾಳ ಗ್ರಾಮೀಣ ಪಂಚಾಯ್ತಿ ಎಲೆಕ್ಷನ್‌ನಲ್ಲಿ ಭರ್ಜರಿ ಗೆಲುವಿನತ್ತ ತೃಣಮೂಲ ಕಾಂಗ್ರೆಸ್!
ಮಂಗಳವಾರ ತಡರಾತ್ರಿ ಹಿಂಸಾಚಾರ
ಮಂಗಳವಾರ ಬೆಳಗ್ಗೆಯಿಂದಲೇ ಮತ ಎಣಿಕೆ ಶುರುವಾಗಿದೆ. ಅಲ್ಲಲ್ಲಿ ಗಲಾಟೆ ನಡೆಯುತ್ತಿತ್ತು. ಅದೇ ರಾತ್ರಿ ಹೊತ್ತಿಗೆ ಜೋರಾಗಿದೆ. ದಕ್ಷಿಣ 24 ಪರಗಣದಲ್ಲಿ ಇಂಡಿಯನ್ ಸೆಕ್ಯೂಲರ್ ಫ್ರಂಟ್ (ISF) ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಸಂಘರ್ಷ ಏರ್ಪಟ್ಟು, ಐಎಸ್ಎಫ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾನೆ. ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದೆ. ದಕ್ಷಿಣ 24 ಪರಗಣದ ಮತ ಎಣಿಕೆ ಕೇಂದ್ರದಲ್ಲಿಯೇ ಗಲಾಟೆ ನಡೆದಿತ್ತು. ಐಎಸ್ಎಫ್ ಅಭ್ಯರ್ಥಿಯೊಬ್ಬರು ಪ್ರಾರಂಭದಿಂದಲೂ ಮುನ್ನಡೆ ಸಾಧಿಸಿದ್ದರು. ಆದರೆ ಅಂತಿಮವಾಗಿ ಸೋತುಹೋದರು. ಅವರು ಸೋಲುತ್ತಿದ್ದಂತೆ ಐಎಸ್ಎಫ್ ಕಾರ್ಯಕರ್ತರು ಗದ್ದಲ ಎಬ್ಬಿಸಿದ್ದಾರೆ. ಬಾಂಬ್ಗಳನ್ನು ಎಸೆದಿದ್ದಾರೆ. ಗುಂಡಿನ ದಾಳಿ ನಡೆಸಿದ್ದಾರೆ. ಕೇಂದ್ರ ಮೀಸಲು ಪಡೆಗಳು, ರಾಜ್ಯ ಪೊಲೀಸರು ಅವರನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಗುಂಡು ಹಾರಿಸಬೇಕಾಯಿತು. ಈ ಗಲಭೆಯಲ್ಲಿ ಒಬ್ಬನ ಸಾವಾಗಿದೆ.