ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಪಶ್ಚಿಮ ಬಂಗಾಳ (Bengal Panchayat Polls) ದಿನೇದಿನೆ ರಣರಂಗವಾಗುತ್ತಿದೆ. ಹಿಂಸಾಚಾರ ಮಿತಿಮೀರುತ್ತಿದೆ (West Bengal Violence). ಹೈಕೋರ್ಟ್ ಛೀಮಾರಿ, ಸುಪ್ರೀಂಕೋರ್ಟ್ನ ಖಡಕ್ ಸೂಚನೆಯ ನಂತರವೂ ಪರಿಸ್ಥಿತಿ ನಿಯಂತ್ರಣವಾಗಿಲ್ಲ. ಇಂದು ಮುಂಜಾನೆ ತೃಣಮೂಲ ಕಾಂಗ್ರೆಸ್ನ ಮತ್ತೊಬ್ಬ ಕಾರ್ಯಕರ್ತನ ಹತ್ಯೆಯಾಗಿದೆ. ಆರು ಮಂದಿಗೆ ಗಾಯವಾಗಿದೆ. ಕೂಚ್ ಬೆಹಾರ್ ಜಿಲ್ಲೆಯ ದಿನ್ಹಟಾ ಎಂಬಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಜೆಪಿ ಬೆಂಬಲಿಗರ ಮಧ್ಯೆ ಸಂಘರ್ಷ ಏರ್ಪಟ್ಟು, ಗುಂಡಿನ ದಾಳಿ ನಡೆದಿತ್ತು. ಇದರಲ್ಲೀಗ ಟಿಎಂಸಿ ಕಾರ್ಯಕರ್ತ ಪ್ರಾಣ ಕಳೆದುಕೊಂಡಿದ್ದಾನೆ.
ರಾಜ್ಯದಲ್ಲಿ ಜುಲೈ 8ಕ್ಕೆ ಪಂಚಾಯಿತಿ ಚುನಾವಣೆ ಎಂದು ರಾಜ್ಯ ಚುನಾವಣಾ ಆಯೋಗ ಘೋಷಿಸಿ, ನಾಮಪತ್ರ ಸಲ್ಲಿಕೆಗೆ ಜೂ.15 ಕೊನೇ ದಿನ ಎಂದೂ ನಿಗದಿಪಡಿಸಲಾಗಿತ್ತು. ಜೂ.15ರಂದು ಶುರುವಾದ ಹಿಂಸಾಚಾರ ನಿಲ್ಲುತ್ತಿಲ್ಲ. ಇದುವೆಗೆ ಸುಮಾರು 11 ಮಂದಿಯ ಪ್ರಾಣ ಹೋಗಿದೆ. 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಈ ಗಲಾಟೆಗಳು, ಹಿಂಸಾಚಾರ ನಡೆಯುತ್ತಿರುವುದೇ ರಾಜಕೀಯ ದ್ವೇಷಕ್ಕೆ. ಇದೀಗ ಕೂಚ್ ಬೆಹಾರ್ನಲ್ಲಿ ಮೃತಪಟ್ಟವನ ಹೆಸರು ಬಾಬು ಹಕ್’ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ಮಾಧ್ಯಮ ವರದಿ ಮಾಡಿದೆ.
‘ದಿನವೂ ಒಂದೊಂದು ಕಡೆಗಳಲ್ಲಿ ಗಲಭೆ ಹೊಸದಾಗಿ ಶುರುವಾಗುತ್ತಿದೆ. ಇದೀಗ ಗಲಾಟೆ ನಡೆದಿದ್ದು ಭಾರತ-ಬಾಂಗ್ಲಾದೇಶ ಗಡಿಯ ಸಮೀಪ. ಈ ಹಿಂಸಾಚಾರಕ್ಕಾಗಿ ಇಲ್ಲಿನ ಕೆಲವು ನಾಯಕರು ಬಾಂಗ್ಲಾದೇಶದ ಕ್ರಿಮಿನಲ್ಗಳನ್ನು ಬಳಸಿಕೊಳ್ಳುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದೇವೆ’ ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ.
ಸೋಮವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಚ್ ಬೆಹಾರ್ನಲ್ಲಿ ಪಂಚಾಯಿತಿ ಚುನಾವಣೆ ಪ್ರಚಾರ ನಡೆಸಿದ್ದರು. ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಕಾವಲಿಗೆ ಇರುವ ಗಡಿ ಭದ್ರತಾ ಪಡೆ ಸಿಬ್ಬಂದಿಯೇ ಇಲ್ಲಿನ ನಿವಾಸಿಗಳನ್ನು ಹೆದರಿಸುತ್ತಿದ್ದಾರೆ. ಜನರ ಪ್ರಾಣ ತೆಗೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಈ ಮೂಲಕ ಬಿಎಸ್ಎಫ್ ಸಿಬ್ಬಂದಿಯೇ ವಿಲನ್ ಎಂಬಂತೆ ಬಿಂಬಿಸಿದ್ದರು. ಮುಖ್ಯಮಂತ್ರಿ ಆರೋಪವನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ತಳ್ಳಿ ಹಾಕಿದ್ದಾರೆ. ‘ಬಿಎಸ್ಎಫ್ ಆಗಲೀ, ಅಥವಾ ಸೇನೆಯ ಇನ್ಯಾವುದೇ ವಿಭಾಗವಾಗಲಿ ಗಡಿಯಲ್ಲಿ ಇಂಥ ಕೃತ್ಯ ನಡೆಸುತ್ತಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಛೀಮಾರಿ; ನಾಚಿಕೆಗೇಡು ಎಂದ ನ್ಯಾಯಮೂರ್ತಿ!
ಪಶ್ಚಿಮ ಬಂಗಾಳದ ಹಿಂಸಾಚಾರ ಈಗಾಗಲೇ ಕೋರ್ಟ್ಗಳ ಮೆಟ್ಟಿಲೇರಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇಲ್ಲಿ ಹಿಂಸಾಚಾರ ನಡೆಯುತ್ತದೆ. ಹೀಗಾಗಿ ಪಂಚಾಯಿತಿ ಚುನಾವಣೆಗೆ ಭದ್ರತೆಗಾಗಿ ಕೇಂದ್ರ ಮೀಸಲು ಪಡೆ ರಕ್ಷಣೆ ಪಡೆಯುವಂತೆ ಪಶ್ಚಿಮ ಬಂಗಾಳ ಚುನಾವಣಾ ಆಯೋಗ ಮತ್ತು ಇಲ್ಲಿನ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೋಲ್ಕತ್ತ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದನ್ನು ಹೈಕೋರ್ಟ್ ಮಾನ್ಯ ಮಾಡಿತ್ತು. ಆದರೆ ಕೇಂದ್ರ ಸಶಸ್ತ್ರ ಪಡೆಗಳ ನಿಯೋಜನೆ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲು ನಮಗೇ ಸ್ವಾತಂತ್ರ್ಯ ಕೊಡಬೇಕು ಎಂದು ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದವು. ಆದರೆ ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನೇ ಎತ್ತಿ ಹಿಡಿದಿತ್ತು. ಅಷ್ಟೇ ಅಲ್ಲ, ‘ಚುನಾವಣೆಗಳು ಎಂದರೆ ಹಿಂಸಾಚಾರ ನಡೆಸಲು ಕೊಡುವ ಲೈಸೆನ್ಸ್ ಅಲ್ಲ. ಹಿಂಸಾಚಾರ ನಿಯಂತ್ರಣ ಮಾಡಲಾಗದೆ ಇದ್ದರೆ ಚುನಾವಣೆಯನ್ನೇ ನಿಲ್ಲಿಸಿಬಿಡಿ’ ಎಂದು ಕೂಡ ಕೋಲ್ಕತ್ತ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಛೀಮಾರಿ ಹಾಕಿತ್ತು.